ಶಿವಂ ಅಸೋಸಿಯೇಟ್ಸ್: 2,459 ಕೋಟಿ ರೂ. ಹಗರಣದ ವರದಿ ಕೋರ್ಟ್‌ಗೆ ಸಲ್ಲಿಕೆ
ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ನ 2459 ಕೋಟಿ ವಂಚನೆ ಪ್ರಕರಣ ಸಂಬಂಧ ಇಡಿ ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಸುಮಾರು 35,000 ಗ್ರಾಹಕರಿಂದ ಹಣ ಸಂಗ್ರಹಿಸಿ, 3% ಬಡ್ಡಿ ಹಾಗೂ 0.5...
ಬೆಂಗಳೂರು/ಬೆಳಗಾವಿ, ಅಕ್ಟೋಬರ್ 11: ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್‌ನ 2,459 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉಪ ವಿಭಾಗದ ಇಡಿ ಅಧಿಕಾರಿಗಳು ದಕ್ಷಿಣ ಕನ್ನಡ ಮೂರನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಈ ಪ್ರಕರಣದ ಕುರಿತಾದ ವರದಿಯಲ್ಲಿ ಹಲವು ಅಂಶಗಳನ್ನು ನಮೂದಿಸಲಾಗಿದ್ದು, ಒಟ್ಟು 35 ಸಾವಿರ ಗ್ರಾಹಕರಿಂದ 2,459 ಕೋಟಿ ರೂ. ಹಣವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಲಾಗಿದೆ. ಗ್ರಾಹಕರಿಗೆ ಮಾಸಿಕ 3% ಬಡ್ಡಿ ನೀಡುವುದಾಗಿ ಹಾಗೂ ಹೊಸ ಗ್ರಾಹಕರನ್ನು ಕರೆತಂದರೆ 0.5% ಕಮಿಷನ್ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಸಾರ್ವಜನಿಕರ ವಿಶ್ವಾಸವನ್ನು ಪಡೆಯಲು ಸಂಸ್ಥೆಯು ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂತಿರುಗಿಸಿತ್ತು, ಆದರೆ 2,125 ಕೋಟಿ ರೂ. ಹಣವನ್ನು ವಾಪಸ್ ನೀಡದೆ ಬಾಕಿ ಉಳಿಸಿಕೊಂಡಿತ್ತು. ಈ ಮೊತ್ತವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಲಾಗಿತ್ತು. ಹೂಡಿಕೆದಾರರ ಹಣದ ಹೆಚ್ಚಿನ ಪಾಲನ್ನು ಹೈರಿಸ್ಕ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದ್ದರಿಂದ 185.95 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ವಿವಿಧ ಸೊಸೈಟಿ ಬ್ಯಾಂಕ್‌ಗಳಲ್ಲಿ FD ಖಾತೆಗಳನ್ನು ತೆರೆದಿದ್ದು, 25 ಕೋಟಿ ರೂ. ಹೂಡಿಕೆದಾರರ ಠೇವಣಿಗಳನ್ನೇ ಅಡಮಾನವಿಟ್ಟು ಆಪ್ತರ ಹೆಸರಿನಲ್ಲಿ ಸಾಲ ಪಡೆದು ಭೂಮಿಯನ್ನು ಖರೀದಿಸಲಾಗಿದೆ. ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲದೆ, ಪತ್ನಿ ಸಂಗೀತಾ, ಅಪ್ರಾಪ್ತ ಮಗ ಸಿದ್ಧಾಂತ್ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಶಿವಂ ಸೇವಾ(OPC) ಪ್ರೈ. ಲಿ., ಶಿವಂ ಲೈಫ್‌ಲೈನ್ ಪ್ರೈ. ಲಿ. ಮತ್ತು ಶಿವಂ ಫುಡ್ಸ್‌ನಂತಹ ಸಂಬಂಧಿತ ಉದ್ದಿಮೆಗಳಿಗೂ ಹಣವನ್ನು ರವಾನಿಸಲಾಗಿದೆ. ಚಾಂಪಿಯನ್ ಎಂಬ ಕನ್ನಡ ಚಲನಚಿತ್ರ ನಿರ್ಮಾಣಕ್ಕೂ ಬಂಡವಾಳ ಹೂಡಿಕೆ ಮಾಡಲಾಗಿದೆ. ಸಾರ್ವಜನಿಕರ ಠೇವಣಿಗಳಿಂದ 5 ಕೋಟಿ ರೂ. ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ಆರೋಪಿಯಾದ ಶಿವಾನಂದ ನೀಲಣ್ಣನವರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

