ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಕರ್ನಾಟಕ

ಕೂಡ್ಲಿಗಿ ಶೆಟ್ರ ತೋಟದಲ್ಲೊಂದು ದಿನ ಕೃಷಿ ಮಾತು ಮಂಥನ: ಇಲ್ಲಿ ಮಣ್ಣೆಲ್ಲ ಹೊನ್ನು!

Prajavani Dharane Price Widget html, body { margin: 0; } (() => { const script = document.currentScript; if (!script) return; if (script.parentNode.querySelector("[data-dharane-pri...

ಕೂಡ್ಲಿಗಿ ಶೆಟ್ರ ತೋಟದಲ್ಲೊಂದು ದಿನ ಕೃಷಿ ಮಾತು ಮಂಥನ: ಇಲ್ಲಿ ಮಣ್ಣೆಲ್ಲ ಹೊನ್ನು!
ಹಂಚಿಕೊಳ್ಳಿ:
Prajavani Dharane Price Widget

ವಿಶೇಷವಾಗಿ ಕಾರು, ಬೈಕ್ ಹೈವೇ ಏರಿದರೆ ಹೇಗೆ ಓಡಬೇಡಾ? ಕಣ್ಣು ಮುಚ್ಚಿ‌ ಕಣ್ಣು ತೆಗೆಯುವಷ್ಟರಲ್ಲಿ ಅವು ನಿಸ್ಸಂದೇಯವಾಗಿ ಬಿಂದು ಆಗಿ ಬಿಡುತ್ತವೆ ತಾನೆ. ಆದರೆ ನಿನ್ನೆ ಅಂದರೆ ಭಾನುವಾರ ಎನ್‌ ಹೆಚ್ 50 ಕೂಡ್ಲಿಗಿಯ ಹೊಸಹಳ್ಳಿ ಬೈಪಾಸ್ ನಿಂದ ಚಿತ್ರದುರ್ಗ ಕಡೆಯ ಸಾಗುವ ಹೆದ್ದಾರಿಯಲ್ಲಿ ಅವೇ ಕಾರು, ಬೈಕ್ ಗಳು ತೆವಳುತ್ತಾ‌ ಸಾಗುತ್ತಿದ್ದವು!. ಅದಕ್ಕೆ ಕಾರಣ ನಮ್ಮ 20 ನೇ ಮಾತುಕತೆ!.

ಮಾತುಕತೆಗೆ ಬಂದವರ ಸಾಕಷ್ಟು ಬೈಕ್, ಕಾರ್‌ ಗಳು ಹೆದ್ದಾರಿ ಮೊಗ್ಗುಲಲ್ಲೇ ಪಾರ್ಕಿಂಗ್‌ ಆಗಿರುವುದು ಈ ರಸ್ತೆ ಬಳಸಿ ಹೋಗುವವರಲ್ಲಿ ಕುತೂಹಲ ಹುಟ್ಟಿಸಿತ್ತು. ಯಾಕೆ ಇಷ್ಟು ವೇಕಲ್ ಗಳಿಲ್ಲಿ? ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡು ಅವರೇ ಉತ್ತರ ಕಂಡುಕೊಳ್ಳಬೇಕಿತ್ತೂ ಕೂಡ. ಯಾಕೆಂದರೆ ಅಲ್ಲಿ ಕೇಳಲು ಒಂದು ನರಪಿಳ್ಳೆ ಸಹ ಸಕಾಲದಲ್ಲಿ ಸಿಗಲ್ಲ! ಯಾಕೆಂದರೆ ಇಲ್ಲಿ ಓಡುವರೇ ಎಲ್ಲಾ.. ನಡೆಯುವವರು ಸಿಗಲ್ಲ.. ಸಿಕ್ಕರೂ ಅವರಿಗೆ ಈ ವಿಷಯ ಭಾಗಶಃ ಗೊತ್ತಿರಲಿಲ್ಲ!.

ಹೀಗಾಗಿ ಅವರೆಲ್ಲ ಅನಿವಾರ್ಯವಾಗಿ ತಮ್ಮ ಕುತೂಹಲದ ಬೆನ್ನತ್ತಿ ಅವಸರವಸರದಲ್ಲಿ 360 ಡಿಗ್ರಿ ಸುತ್ತಲೂ ನೋಡಿದವರಿಗೆ ಉತ್ತರವೂ ಸಿಗಲಲ್ಲ. ಸಮಾಧಾನದಿಂದ ಮೂಡಣಕ್ಕೆ ಮೂತಿ ಮಾಡಿ, ದೃಷ್ಟಿ ಕಿರಿದಾಗಿಸಿ ಕೂಗಳತೆ ದೂರದಲ್ಲಿ ಮುಗಿಲೆತ್ತರಕ್ಕೆ ಬೆಳೆದ ತೆಂಗಿನ ತೋಟದತ್ತ ನೋಡಿದರು. ಒಂದಿಷ್ಟು ಸುಳಿವು ದೊರೆಯಿತು. ತೋಟದ ಒಡಲಲ್ಲಿದ್ದ ಗುಂಪು ಬಾಳೆಯತ್ತ ನೋಡಿದಾಗಷ್ಟೇ ಗುಂಪು ಗುಂಪು ಜನರು ಇರುವುದು ಸ್ಪಷ್ಟವಾಗಿತು ಅವರಿಗೆ. ಕುತೂಹಲ ನೂರ್ಮಡಿಯಾಗಿ ಬಂದರಿಗಷ್ಟೇ ಕುತೂಹಲ ತಣಿಯಿತು. ಹೀಗೆ ಬಂದವರು ಬಂದಷ್ಟೇ ವೇಗದಲ್ಲಿ ಮರಳಲಿಲ್ಲ. ಬದಲಾಗಿ ಮಾತುಕತೆಗೆ ಸಾಕ್ಷಿ ಆದರು. ಮೊದಲ ಬಾರಿಗೆ ಆ ಹೆದ್ದಾರಿ ಪ್ರಯಾಣಿಕರಿಗೆ ಇಂತಹ ತಿರುವು ನೀಡಿದ್ದು ಅನಿಸುತ್ತದೆ. ಇದು ನಮ್ಮ ಬಳಗಕ್ಕೊಂದು ಹೆಗ್ಗಳಿಕೆ- ಅಗ್ಗಳಿಕೆಯೇ!.

ಇಂತಹ ಅವಿಸ್ಮರಣೀಯ, ವೈಶಿಷ್ಟ್ಯಪೂರ್ಣ ಮಾತುಕತೆ ಜರುಗಿದ್ದು ಕೂಡ್ಲಿಗಿ ಘಂಟಿ ರಾಘವೇಂದ್ರ ಶೆಟ್ಟಿಯವರ ಜಮೀನಿನಲ್ಲಿ. ಅಲ್ಲಿ ನೆರವಿದವರು ಬಂದು ನಮ್ಮ ಹಸಿರಿನೊಂದಿಗೆ ಮಾತುಕತೆಯ ಬಳಗವು. ಹೀಗೆ ದಾರಿ ತಪ್ಪಿ ಬಂದು ಸರಿ ದಾರಿ ತುಳಿದವರು!.

ಈ ದಾರಿಯಲ್ಲಿ ಸಾಕಷ್ಟು ಸಲ ಓಡಾಡಿರುವೆ. ತೋಟ ಇಷ್ಟೊಂದು ಚೆನ್ನಾಗಿದೆ ಅಂತಾ ಗೊತ್ತಿರಲಿಲ್ಲ. ರಾಘವೇಂದ್ರ ಶೆಟ್ರು ಚಿರಪರಿಚಿತರು, ಆದರೂ ತೋಟದೊಳಗೆ ಒಂದು ಹೆಜ್ಜೆ ಸಹ ಇದುವರೆಗೂ ಇಟ್ಟಿರಲಿಲ್ಲ. ಯಾವ ಬೆಳೆ ನೋಡ್ಲಿ, ಬಿಡ್ಲಿ? ಏನೇನು ನೆನಪು ಇಟ್ಕೊಳ್ಳಿ? ಯಾವ ಪ್ರಶ್ನೆ ಮೊದಲು ಕೇಳ್ಲಿ? ಮಲೆನಾಡು ಇದ್ದಂತಿದೆ. ` ಇಲ್ಲಿಂದ ಹೊರಗೆ ಏನೂ ಹೋಗಲ್ಲ, ಹೊರಗಿನಿಂದ ಒಳಕ್ಕೆ ಏನೂ ತಂದಿಲ್ಲ… !’ ಹೀಗೆ ಬಂದವರಿಂದ ಬಗೆ ಬಗೆಯ ದ್ವಂದ್ವ, ಉದ್ಘಾರದ ಮಾತುಗಳು. ಪ್ರತಿಯೊಬ್ಬರ ಮೊಗದಲ್ಲಿ ಅಡಿ ಅಡಿಗೆ ಬೆರಗು ಬಿಟ್ಟರೆ ಬೇರೇನೂ ಇರಲಿಲ್ಲ. ಅಲ್ಲಿರುವ ಬೆಳೆಗಳ ಸಂಖ್ಯೆಯಷ್ಟೇ ಸೇರಿದ್ದೆವು ನಾವು!.

ಶೆಟ್ರು, ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವ, ಪಾಲನೆ ಪೋಷಣೆ ಮಾಡುವ ತೋಟ ಇದು!. `ಅಪ್ಪನಿಗೆ ನಮಗಿಂತ ತೋಟದ ಮೇಲೆ ಹೆಚ್ಚು ಪ್ರೀತಿ. ಅವರು ನಮ್ಮೊಂದಿಗೆ ಕಳೆದ ಸಮಯಕ್ಕಿಂತ ಇಲ್ಲಿ ಸಮಯ ಕಳೆದಿದ್ದೇ ಹೆಚ್ಚು..’ ಹೀಗೆ ಅವರ ಹಿರಿಯ ಮಗ ರಾಮ ಪ್ರಸಾದ್ ಹೇಳಿದ ಈ ಮಾತು ರಾಘಣ್ಣನವರ ಕೃಷಿ ಮೇಲಿನ ಆಸೆ, ಬದ್ಧತೆಗೆ ಬಹುದೊಡ್ಡ ಸರ್ಟಿಫಿಕೇಟ್ ಆಗಿತ್ತು ಕೂಡ.

ಮೊದಲು ತೋಟ ಸುತ್ತಾಟದೊಂದಿಗೆ ನಮ್ಮ ಪ್ರತಿ ಮಾತುಕತೆಗೆ ಚಾಲನೆ ಸಿಗುತ್ತದೆ. ಯಾವ ಕಡೆಯಿಂದ ತೋಟ ನೋಡಲು ಹೋಗಬೇಕು? ಎನ್ನುವುದರೊಂದಿಗೆ ಹುಟ್ಟಿದ ಪ್ರಶ್ನೆ ಸಂಜೆಯವರೆಗೆ ನಿಲ್ಲಲಿಲ್ಲ. ತಲೆಗೆ ಒಂದಲ್ಲ ಹತ್ತತ್ತು ಪ್ರಶ್ನೆಗಳು ಓಡಾಡುತ್ತಿದ್ದವು. ಸೇರಿದ್ದು ನೂರರ ಮೇಲೆ. ಹೀಗಾಗಿ ಪ್ರಶ್ನೆಗಳ ಸುರಿಮಳೆ!.

ಶೆಟ್ರದ್ದು, 10 ಎಕರೆಯ ಜಮೀನು. ಅದರಲ್ಲಿ 7 ಎಕರೆ ತೋಟ ಕಟ್ಟಿದ್ದಾರೆ. ಅವರಿಗೀಗ 71 ವರ್ಷ, ಕೃಷಿ ಅನುಭವಕ್ಕೆ 50 ವರ್ಷ. ಇಂಚಿಂಚಿಗೂ ತಮ್ಮ ಅನುಭವದ ಹೆರಕ ಒಯ್ದಿರುವುದು ಎದ್ದು ಕಾಣುತ್ತದೆ. ಹೆಜ್ಜೆ ಹೆಜ್ಜೆಗೂ ಬೆಳೆ ವೈವಿಧ್ಯತೆ ಇದೆ. ತೆಂಗಿನ ಮಧ್ಯೆ ಬಾಳೆ, ಬಾಳೆ ಮಧ್ಯೆ ಮತ್ತೆ ಅಡಕೆ, ಅಡಕೆ ಮಧ್ಯೆ ಏಲಕ್ಕಿ ಅದರ ಮಧ್ಯೆ ಮೋಸುಂಬೆ !

ಸಾಂಬರ್ ಸೊಪ್ಪಿನಿಂದ ಹಿಡಿದು ಆಲ್ ಸ್ಪೈಸಿಸ್ ಗಿಡದವರೆಗೂ ಇಲ್ಲುಂಟು. ಇಲ್ಲಿ ಏನೇನು ಇದೆ ಎಂಬುವುದನ್ನು ಪಟ್ಟಿ ಮಾಡುವುದಕ್ಕಿಂತ ಏನಿಲ್ಲ ಎನ್ನುವುದನ್ನು ಹುಡುಕುವುದೇ ಕಷ್ಟ. ` ಈ ತೋಟ ` ಶ್ಯಾಂಪಲ್ ಪಟ್ಟಿ’ ರೀತಿ ಕಾಣುತ್ತದೆ. ಇಲ್ಲಿ ಯಾವ ಬೆಳೆಯನ್ನು ಹೇಗೆ ಬೆಳೆಯಬಹುದು ಎಂಬುವುದನ್ನು ನೋಡಿಕೊಂಡು ಹೋಗಿ ಕೃಷಿಗೈದರೆ ಸಾಕು ಸಕ್ಸಸ್ ಕಟ್ಟಿಟ್ಟ ಬುತ್ತಿ..’ ಹೀಗೆ ಹೆಚ್.ವಿ ಸಜ್ಜನ್ ಹೇಳಿದ್ದು ಖರೆ ಅನಿಸಿತು.

ತೋಟದಲ್ಲಿ ಬಿಸಿಲು, ನೆರಳು, ಕತ್ತಲಿನ ಮಧ್ಯೆ ಬಲು ಪೈಪೋಟಿ ಇದೆ. ಅದೆಲ್ಲವನ್ನೂ ಎನ್ ಕ್ಯಾಶ್ ಮಾಡಿಕೊಂಡು ಇವರು ತೋಟ ಕಟ್ಟಿದ್ದಾರೆ. ಬಿಸಿಲಿಗೆ, ನೆರಳಿಗೆ, ಸಮೃದ್ಧ ನೀರಿಗೆ, ಮಿತ ನೀರಿಗೆ, ನೀರಲ್ಲದೆ, ಹೊರಭೂಮಿಗೆ… ಬೆಳೆಯಬಹುದಾದ ಬೆಳೆಗಳ ಸಂಯೋಜನೆ ಮಾಡಿದ ಜಾಣ್ಮೆ ಇಲ್ಲಿದೆ. ಅವೆಲ್ಲವೂ ಸಮೃದ್ಧವಾಗಿಯೇ ಬೆಳೆದಿವೆ.

ಇವರು ಮಣ್ಣನ್ನು ಹೊನ್ನು ಮಾಡಿರುವುದು. ಕೃಷಿಯ ಪ್ರತಿ ವ್ಯರ್ಥ ವಸ್ತುಗಳ `ಅರ್ಥ’ಪೂರ್ಣ ಬಳಕೆ ಇದೆ. ವಿಶೇಷವಾಗಿ ಅನೇಕ ತೆಂಗಿನ ಮರಗಳಿದ್ದರೂ ಅದರ ತ್ಯಾಜ್ಯ ಅಂದರೆ ಮಟ್ಟೆ, ಗರಿಗಳು ನೋಡಲಿಕ್ಕೆ ಬೇಕೆಂದರೂ ಒಂದೂ ಕಾಣುತ್ತಿರಲಿಲ್ಲ! ಅವೆಲ್ಲ ಭೂಮಿ ಆಳಕ್ಕೆ ಸೇರಿ ಸ`ಫಲ’ತೆ ಕೊಟ್ಟಿವೆ. ಮಣ್ಣಿನ ಜೀವಂತಿಕೆ ಇವರ ಕೃಷಿ ಬದುಕಿನ ಯಶಸ್ಸಿನ ಗುಟ್ಟಾಗಿದೆ. ಮಣ್ಣು ಉಳಿಸಿದ್ದಾರೆ ಅದು ಇವರನ್ನ ಕೃಷಿಯಲ್ಲಿ ಉಳಿಸಿದೆ. ಸಿಂಪಲ್ ಸೂತ್ರವಷ್ಟೇ.

ಬೆಳೆ ಮಧ್ಯೆ ಕಳೆ ಮೇಲೇಳಲು ಹರಸಾಹಸ ಪಡುತ್ತಿದೆ ಇಲ್ಲಿ!. ಬಾಳೆ ಮರಿಗಳು, ಎಲೆಗಳು, ದಿಂಡು, ಕುಂಬಳ, ಉದ್ದು… ಇವೆಲ್ಲ ಮುಚ್ಚಿಗೆ ಆಗಿದೆ. ಹೂವಿನ ಹಾಸಿಗೆ ಮೇಲೆ ನಡೆದಾಡುತ್ತಿದ್ದೇವೆ ಅನ್ನುವಂತಹ ಭಾವವನ್ನು ಇಲ್ಲಿನ ಮಣ್ಣು ಕೊಡುತ್ತದೆ ಪ್ರತಿ ಹೆಜ್ಜೆಗೂ.

ಕೃಷಿ ಪ್ರಯೋಗಗಳು, ಮೌಲ್ಯವರ್ಧನೆ, ದ್ರಾವಣಗಳನ್ನು ಮಾಡುವುದರಲ್ಲಿ ಇವರು ನಿಸ್ಸೀಮರು. ಈ ಭಾಗದಲ್ಲಿ ತಾಳೆ ಬೆಳೆದು ರೆಕಾರ್ಡ್ ಮಾಡಿದವರು. ಮೊದಲಿಗೆ ಇಟಾಲಿಯನ್ ನಿಂಬೆ ಬೆಳೆದು ಪ್ರಶಸ್ತಿ ಪಡೆದವರು. ಈಗ 1000 ಬ್ಯಾಗ್ ಗಳಲ್ಲಿ ಲಾವಂಚ ಬೆಳೆದಿದ್ದಾರೆ. ಗುಂಪು ಬಾಳೆ ಬೇಸಿ ಎಂದು ಭೇಷ್ ಎನೆಸಿಕೊಳ್ಳುತ್ತಿದ್ದಾರೆ.

ಮುಗಿಲೆತ್ತರಕ್ಕೆ ಬೆಳೆದ ಮತ್ತಿ, ತಾರೆ… ಮರಗಳ ಮಧ್ಯೆ ನಮ್ಮ ಅನೌಪಚಾರಿಕ ಮಾತುಕತೆ ಆರಂಭವಾಗಿತು. ತೋಟದಲ್ಲಿ ಅಥವಾ ಕಾಡಿನಲ್ಲಿ ಇದ್ದೇವಾ? ಅನುಮಾನ ಬರುವಂತಹ ಮರಗಾಡು ಜಾಗವದು. ಹಾಸಿದ ತಾಡಪಾಲ್ ಕೆಳಗೆ ಸಮೃದ್ಧ ಮುಚ್ಚಿಗೆ ಇದ್ದ ಕಾರಣಕ್ಕೆ ಕುಷನ್ ನಲ್ಲ ಕುಳಿತ ಅನುಭವ. ದಟ್ಟ ನೆರಳಿನಿಂದ ತಂಪೋ ತಂಪು. ಇಟಾಲಿಯನ್ ನಿಂಬೆ ನೀಡಿ ಕಾರ್ಯಕ್ರಮದ ಉದ್ಘಾಟಿಸಿದ ಶೆಟ್ರಿಗೆ ಆರಂಭದಲ್ಲಿ ಲಿಂಬೆಯದ್ದೇ ಪ್ರಶ್ನೆಗಳು ತೂರಿ ಬಂದವು ಬಂದವರಿಂದ. ಅಷ್ಟರಲ್ಲಿ ಅದರ ಶರಬತ್ತು ಕೈಗಿಟ್ಟು ಕುಡಿಯಲು ಹೇಳಿದರು. ಏಕಕಾಲದಲ್ಲಿ ಆಯಾಸ, ತಲೆಯಲ್ಲಿದ್ದ ಅಷ್ಟೂ ಅನುಮಾನಗಳನ್ನು ನಿವಾರಿಸಿ ಬಿಟ್ಟರು ಕ್ಷಣ ಮಾತ್ರದಲ್ಲಿ ಶೆಟ್ರು!.

ಇವರ ಪೂರ್ವವಿಕರಿಂದ ಬಂದಿದ್ದು ಮೂರುವರೆ ಎಕರೆ. ಅದನ್ನು ಮಾರಿ ತಾಯಿಗೆ ಚಿಕಿತ್ಸೆ ಕೊಡಿಸಿದರು. ಕೃಷಿ ಭೂಮಿ ರಹಿತರಾದರು. ಸಣ್ಣಗೆ ಸೋಪು, ಪೇಸ್ಟ್ ಹೋಲ್ ಸೇಲ್ ವ್ಯಾಪಾರ ಮಾಡುತ್ತಾ ಕಾಸಿಗೆ ಕಾಸು ಕೂಡಿಟ್ಟು, ಮನೆಯಲ್ಲಿದ್ದ ಬೆಳ್ಳಿ ಬಂಗಾರವನ್ನೆಲ್ಲ ಮಾರಿ, ಸೊಪ್ಪು ತರಕಾರಿ ಬೆಳೆದು ಹಂತ ಹಂತವಾಗಿ ಭೂಮಿ ಖರೀದಿಸುತ್ತಾ ಬಂದರು. ಈಗ ಒಟ್ಟು 17 ಎಕರೆ ಹೊಂದಿದ್ದು, ಬೆಲೆ ಬಾಳುವ ಬೆಳೆ, ಭೂಮಿಯ ಒಡೆಯರಾಗಿದ್ದಾರೆ. ಕೃಷಿಯ ಸುದೀರ್ಘ ಜರ್ನಿಯ ಕಷ್ಟ ಸುಖ, ನಿಷ್ಠುರಗಳನ್ನು ತೆರೆದಿಟ್ಟರು ಮುಕ್ತವಾಗಿ. ` ಗೋ ರಹಿತ ಸಾವಯವ ಕೃಷಿ’ ಬಗ್ಗೆ ಗಮನಸೆಳೆದರು.

ಒಂದು ಕಾಲದಲ್ಲಿ ಹೊನ್ನು ಮಾರಿ ಮಣ್ಣು ಕೊಂಡರು. ಇಂದು ಅದೇ ಮಣ್ಣು ಬೆಳೆಯ ರೂಪದಲ್ಲಿ ಹೊನ್ನು ನೀಡುತ್ತಿದೆ ಇಲ್ಲಿ..!

ಬಳಗ ಹುಟ್ಟಿಗೆ ಕಾರಣರಾದ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಹಸಿರಿನೊಂದಿಗೆ ಮಾತುಕತೆಯ ಉದ್ದೇಶಗಳ ಬಗ್ಗೆ, ರೈತರ ಶ್ರೇಯಸ್ಸಿಗೆ ಖಾಸಗೀ ಬದುಕನ್ನೂ ತ್ಯಜಿಸಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಮುಖ್ಯಸ್ಥರಾದ ಡಾ. ಬದರಿ ಪ್ರಸಾದ್ ಪಿ.ಆರ್ ಸಾವಯವ ಕೃಷಿಯ ಅನಿವಾರ್ಯತೆ ಬಗ್ಗೆ ಹಾಗೆ ಕೃಷಿಕರಿಗಾಗಿ ರೂಪಿಸುತ್ತಿರುವ ` ಒಡಲಾಳ’ ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ , ದಾವಣಗೆರೆಯ ಜಬೀವುಲ್ಲಾ ಬಿದುರು ಬೆಳೆಯ ಮೌಲ್ಯವರ್ಧನೆ ಬಗ್ಗೆ ಹಾಗೆ ಹೆಚ್ ವಿ ಸಜ್ಜನ್ ಕೃಷಿ ಉತ್ಪನ್ನಗಳು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದ ಬಗ್ಗೆ, ಶಶಿಧರ ಗುರೂಜಿ ಕೃಷಿ ಕ್ಷೇತ್ರದ ಸವಾಲಿನ ಬಗ್ಗೆ ಮನೋಜ್ಞವಾಗಿ ಮಾತನಾಡಿದರು.

ಬಾಳಸಾಹೇಬ ಪಾಟೀಲ್, ಹುಲಿಕೇರಿ ಶರಣಪ್ಪ, ಪೂಜಾರಹಳ್ಳಿ ತಿಪ್ಪೇಸ್ವಾಮಿ, ರೂಬಿ ಮಲ್ಲೇಶ್, ದೂಪದಹಳ್ಳಿ ಮಲ್ಲಿಕಾರ್ಜುನ, ಗಜಾಪುರ ವಿಜಯ್,ಅಮ್ಮನಕೇರಿ ನವೀನ್ , ಬಸರಕೋಡು ಒಪ್ಪತ್ತೇಶ್ವರ , ಆನೇಕಲ್ಲು ನಾಗರಾಜ್, ನಾಗೇಂದ್ರ ಪ್ರಸಾದ್ ಹಿರೇಮಲ್ಲನಹೊಳೆ, ನಿವೃತ್ತ ಅಡಿಷನಲ್ ಎಸ್ ಪಿ ಮಂಜುನಾಥ... ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.

ಮಧ್ಯೆ ಮಧ್ಯೆ ಚಂದ್ರಶೇಖರ ಪುರದ ನಾಗೇಶ್ವರ ರವರು ಮೆಲ್ಲಲು ಕೊಟ್ಟ ಬಿಳಿ ಎಳ್ಳು, ಹುಲಿಕೇರಿ ಶರಣಪ್ಪ ಕೊಟ್ಟ ಮೊಳಕೆ ಕಟ್ಟಿದ ಮಡಕೆಕಾಳು ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಿತು.

ಮಧ್ಯಾಹ್ನಕ್ಕೆ ರುಚಿಕಟ್ಟಾದ ಪಲಾವ್, ಮೊಸರು ಬಜ್ಜಿ, ಅಂಬಟೆ ಕಾಯಿ ಉಪ್ಪಿನಕಾಯಿ, ಮೈಸೂರು ಪಾಕ್ ವ್ಯವಸ್ಥೆ ಮಾಡಿದ್ದರು . ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಬಿಜಾಪುರ.. ಜಿಲ್ಲೆಗಳಿಂದ ಸುಮಾರು 100-120 ಕೃಷಿಕರು, ಕೃಷಿ ಆಸಕ್ತರು ಬಂದಿದ್ದು ವಿಶೇಷವಾಗಿತ್ತು.

ಬಂದವರೆಲ್ಲ ಹೇಳಿ ಹೊರಟಿದ್ದು ಒಂದೇ ಮಾತು ` ಕಾರ್ಯಕ್ರಮ ಬಹಳ ಚಲೋ ಆಯಿತು. ಸಾಕಷ್ಟು ತಿಳಿದುಕೊಂಡೆವು..’ .ಶೆಟ್ರು ಫ್ಯಾಮಿಲಿ, ಬಳಗದಲ್ಲಿ ಸಾರ್ಥಕ ಭಾವ.

( ಲೇಖಕರು: ಕೃಷಿಕರು, ಬರಹಗಾರರು)

ಹಂಚಿಕೊಳ್ಳಿ: