ಮಧುರೈ: ಫ್ರೀ ಗಿಫ್ಟ್ ಕೇಳಿದ ಇನ್‌ಫ್ಲುಯೆನ್ಸರ್‌ಗೆ 70 ಕೋಟಿ ರೂ. ಮೌಲ್ಯದ ಮಿಲಿಟರಿ ಟ್ಯಾಂಕ್ ಆರ್ಡರ್!
ಮಧುರೈ: ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣಗಳ ಅವಾಂತರ ಒಂದೆರಡಲ್ಲ.. ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ವ್ಯಕ್ತಿಯೊಬ್ಬರು ಹಬ್ಬಕ್ಕೆಂದು ಉಚಿತ ಗಿಫ್ಟ್ ಕೇಳಿದ್ದೇ ತಡ ನೆಟ್ಟಿಗರು ಆತನಿಗೆ ನಾನಾ ಬಗೆಯ ವಸ್ತುಗಳನ್...

ಮಧುರೈ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಉಂಟಾಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಈ ಸಾಲಿಗೆ ಹೊಸ ಸೇರ್ಪಡೆಯೆಂಬಂತೆ, ವ್ಯಕ್ತಿಯೊಬ್ಬರು ಹಬ್ಬಕ್ಕಾಗಿ ಉಚಿತ ಗಿಫ್ಟ್ ಕೇಳಿದ ತಕ್ಷಣ ನೆಟ್ಟಿಗರು ಅವರಿಗೆ ನಾನಾ ಬಗೆಯ ವಸ್ತುಗಳನ್ನು ಆರ್ಡರ್ ಮಾಡಿ ತೊಂದರೆ ನೀಡುತ್ತಿದ್ದಾರೆ.
ತಮಿಳುನಾಡಿನ ಮಧುರೈ ನಿವಾಸಿ ಮತ್ತು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ವೀರಮಣಿ (Veeramani_121) ದೀಪಾವಳಿ ಹಬ್ಬದ ಪ್ರಯುಕ್ತ ಉಚಿತ ಸಿಹಿ ಪ್ಯಾಕೆಟ್ ಕಳುಹಿಸುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಫೋನ್ ನಂಬರ್ ಮತ್ತು ಮನೆಯ ವಿಳಾಸವನ್ನು ಇನ್ ಸ್ಟಾಗ್ರಾಂ ನಲ್ಲಿ ಬಹಿರಂಗಪಡಿಸಿದ್ದರು.
ಆದರೆ, ಈ ಮನವಿಯೇ ಅವರಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಳಾಸವನ್ನು ಹಂಚಿಕೊಂಡ ನಂತರ, ಕೆಲವರು ಅವರ ಹೆಸರಿನಲ್ಲಿ ನೂರಾರು ನಕಲಿ ಆರ್ಡರ್‌ಗಳನ್ನು ಸೃಷ್ಟಿಸಿರುವುದಾಗಿ ವರದಿಯಾಗಿದೆ.
ಬರೊಬ್ಬರಿ 500ಕ್ಕೂ COD ಆರ್ಡರ್
ಉಚಿತ ಸಿಹಿ ಬೇಕೆಂದು ಕೋರಿದ್ದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗೆ ನೆಟ್ಟಿಗರು ನೀಡಿದ 'ಉಡುಗೊರೆ' ಆತನಿಗೆ ದೊಡ್ಡ ಆಘಾತವನ್ನೇ ನೀಡಿದ್ದು, 500ಕ್ಕೂ ಹೆಚ್ಚು ಕ್ಯಾಶ್ ಆನ್ ಡೆಲಿವರಿ (COD) ಆರ್ಡರ್‌ಗಳನ್ನು ಮಾಡಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಅದರಲ್ಲಿ ಬರೊಬ್ಬರಿ 70 ಕೋಟಿ ರೂ. ಮೌಲ್ಯದ ಟಿ-90ಎಸ್ ಮಿಲಿಟರಿ ಟ್ಯಾಂಕ್ ಮತ್ತು ಪಿಎಸ್‌ಎಲ್‌ವಿ ರಾಕೆಟ್ ಕೂಡ ಸೇರಿವೆ ಎಂಬ ವರದಿಗಳು ವೈರಲ್ ಆಗಿವೆ.
ಹಾಲು, ಟಿವಿ, ಫ್ರಿಡ್ಜ್‌ನಿಂದ ಮಿಲಿಟರಿ ಟ್ಯಾಂಕ್‌ವರೆಗೆ! ಏನೆಲ್ಲಾ ಆರ್ಡರ್ ಮಾಡಿದ್ದಾರೆ ಗೊತ್ತಾ!
ಆರಂಭದಲ್ಲಿ ಹಾಲು, ಟಿವಿ, ಫ್ರಿಡ್ಜ್ ಸೇರಿದಂತೆ ವಿವಿಧ ವಸ್ತುಗಳ ಆರ್ಡರ್‌ಗಳು ಬರಲಾರಂಭಿಸಿದ್ದವು. ಆದರೆ, ನಂತರ ಈ ಪ್ರ್ಯಾಂಕ್ ಅತಿರೇಕಕ್ಕೆ ಹೋಗಿದೆ ಎಂದು ಹೇಳಲಾಗಿದೆ.
ನೆಟ್ಟಿಗರು ವೀರಮಣಿ ಅವರ ಹೆಸರಿನಲ್ಲಿ ಬರೋಬ್ಬರಿ 70 ಕೋಟಿ ರೂ. ಮೌಲ್ಯದ ಟಿ-90ಎಸ್ ಮಿಲಿಟರಿ ಟ್ಯಾಂಕ್ ಹಾಗೂ ಪಿಎಸ್‌ಎಲ್‌ವಿ ರಾಕೆಟ್‌ಗೂ ಆರ್ಡರ್ ಮಾಡಿದ್ದಾರೆ. ಈ ವಿಚಾರವಾಗಿ ಇನ್ ಫ್ಲುಯೆನ್ಸರ್ ವೀರಮಣಿ ಅವರೇ ತಮ್ಮ ಖಾತೆಯಲ್ಲಿ ಸರಣಿ ವಿಡಿಯೋಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಾಸ್ಯಭರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಡೆಲಿವರಿ ಸಿಬ್ಬಂದಿಗೂ ಸಂಕಷ್ಟ
ಈ ನಕಲಿ ಆರ್ಡರ್‌ಗಳಿಂದ ಇನ್‌ಫ್ಲುಯೆನ್ಸರ್ ಮಾತ್ರವಲ್ಲದೆ ಡೆಲಿವರಿ ಸಿಬ್ಬಂದಿಯೂ ತೊಂದರೆಗೆ ಸಿಲುಕಿದ್ದಾರೆ ಎನ್ನಲಾಗಿದೆ. ನಿರಂತರ ಕರೆಗಳು, ಆರ್ಡರ್‌ಗಳು ಮತ್ತು ವ್ಯರ್ಥ ಪ್ರಯಾಣಗಳಿಂದ ಸಿಬ್ಬಂದಿಗೆ ಕಿರಿಕಿರಿ ಉಂಟಾಗಿದೆ ಎಂದು ವರದಿಯಾಗಿದೆ.
ನಿಮ್ಗೆ ಕೈ ಮುಗೀತೀನಿ ಬಿಟ್ ಬಿಡ್ರೋ
ಇತ್ತ, ವೀರಮಣಿ ಕೂಡ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಇಂತಹ ಕೃತ್ಯಗಳನ್ನು ನಿಲ್ಲಿಸುವಂತೆ ಕೋರಿ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ, ಅವರು ತಮ್ಮ ಮನೆಯನ್ನೇ ತೊರೆಯಬೇಕಾಯಿತು ಎಂದೂ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಮಾಷೆಯ ಹೆಸರಿನಲ್ಲಿ ಕಿರುಕುಳ!
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆ ಮತ್ತು ಕಿರುಕುಳದ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬರ ವೈಯಕ್ತಿಕ ಮಾಹಿತಿಯನ್ನು ಬಳಸಿ ನಕಲಿ ಆರ್ಡರ್‌ಗಳನ್ನು ಮಾಡುವುದು ಆ ವ್ಯಕ್ತಿಗೆ ಮಾತ್ರವಲ್ಲದೆ ಡೆಲಿವರಿ ಸಿಬ್ಬಂದಿ ಮತ್ತು ವ್ಯಾಪಾರಿಗಳಿಗೂ ಅನಗತ್ಯ ತೊಂದರೆ ಉಂಟುಮಾಡಬಹುದು ಎಂಬ ಟೀಕೆಗಳು ವ್ಯಕ್ತವಾಗಿವೆ.
ವ್ಯಾಪಕ ಕಮೆಂಟ್ ಗಳು
ಇನ್ನು ಒಂದು ಬಾಕ್ಸ್ ಸೋನ್ ಪಾಪ್ಡಿ ಕೇಳಿದವನಿಗೆ ಇಡೀ ಬಾಹ್ಯಾಕಾಶ ಕಾರ್ಯಕ್ರಮವನ್ನೇ ಆರ್ಡರ್ ಮಾಡಿದಂತಾಗಿದೆ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಫ್ರಿಡ್ಜ್ ಅಥವಾ ಟಿವಿ ತಲುಪಿಸಲು ಬಂದ ಡೆಲಿವರಿ ಸಿಬ್ಬಂದಿಗೆ ಮಿಲಿಟರಿ ಟ್ಯಾಂಕ್‌ನಂತಹ ಆರ್ಡರ್ ಎದುರಾದರೆ ಹೇಗಿರಬಹುದು ಎಂಬ ಹಾಸ್ಯಮಯ ಪ್ರತಿಕ್ರಿಯೆಗಳೂ ಬಂದಿವೆ.
'ಸರ್, ನಿಮ್ಮ 70 ಕೋಟಿ ರೂ. COD ಬಿಲ್ ಆಗಿದೆ. ಯುಪಿಐ ಮಾಡುತ್ತೀರಾ ಅಥವಾ ನಗದು ಕೊಡುತ್ತೀರಾ?' ಎಂಬ ರೀತಿಯ ತಮಾಷೆಯ ಕಾಮೆಂಟ್‌ಗಳು ವೈರಲ್ ಆಗಿವೆ. ದೀಪಾವಳಿಗೆ ಉಚಿತ ಸಿಹಿ ಕೇಳಿದರೆ ಉಡುಗೊರೆಯ ಬದಲು ಇಡೀ ಸೇನೆಯನ್ನೇ ಮನೆಗೆ ಕಳುಹಿಸುವ ಕಾಲ ಇದು ಎಂದು ಕೆಲವರು ಲೇವಡಿ ಮಾಡುತ್ತಿದ್ದರೆ, ಇಂತಹ ಪ್ರ್ಯಾಂಕ್‌ಗಳು ಮತ್ತೊಬ್ಬರಿಗೆ ಕಿರುಕುಳವಾಗಬಾರದು ಎಂದು ಹಲವರು ಎಚ್ಚರಿಸಿದ್ದಾರೆ.



