ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಸತೀಶ್ ಪಾತ್ರಿ ಬೆಂಗಳೂರಿನಲ್ಲಿ ಬಂಧನ
ದೆವ್ವ ಬಿಡಿಸುವುದಾಗಿ ನಂಬಿಸಿ ಹಾಸನ ಮೂಲದ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಗೆ ಮಾಹಿತಿ ಸೋರಿಕೆ ಮಾಡಿದ್ದ ಪೇದೆಯನ್ನು ಎ...

ಚಿಕ್ಕಮಗಳೂರು, ಅಕ್ಟೋಬರ್ 12: ಮಾಟಮಂತ್ರ ಮತ್ತು ದೆವ್ವ ಓಡಿಸುವ ನೆಪದಲ್ಲಿ ವಂಚಕರು ಅಮಾನವೀಯ ಕೃತ್ಯಗಳನ್ನು ಎಸಗಿರುವ ಹಲವಾರು ಘಟನೆಗಳು ವರದಿಯಾಗಿವೆ. ಇದೇ ರೀತಿಯಾಗಿ ಚಿಕ್ಕಮಗಳೂರಿನಲ್ಲಿ ಮಹಿಳೆಯೊಬ್ಬರ ಮೂಢನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯೊಬ್ಬ ಆಕೆಯ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಸಂತ್ರಸ್ತ ಮಹಿಳೆಯು ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ಸತೀಶ್ ಪಾತ್ರಿಯನ್ನು ಕೊಪ್ಪ ಠಾಣೆ ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಸೆರೆಹಿಡಿದಿದ್ದಾರೆ.
ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಸತೀಶ್ ಪಾತ್ರಿ
ದೆವ್ವ ಬಿಡಿಸುವುದಾಗಿ ನಂಬಿಸಿ ಹಾಸನ ಮೂಲದ ಮಹಿಳೆಯ ಮೇಲೆ ಆರೋಪಿ ಸತೀಶ್ ಪಾತ್ರಿ ಪದೇ ಪದೆ ಅತ್ಯಾಚಾರವೆಸಿದ್ದ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿಗೆ ಕರೆದೊಯ್ದು ಈ ಅಕೃತ್ಯ ನಡೆಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದರು. ಈ ವಿಷಯವಾಗಿ ಸಂತ್ರಸ್ತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ತನ್ನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸತೀಶ್, ಒಂದು ತಿಂಗಳ ನಂತರ ಬೆಂಗಳೂರಿನಲ್ಲಿ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ.
ಸಂತ್ರಸ್ತೆಯ ದೂರಿನ ಮೇರೆಗೆ ಎನ್.ಆರ್. ಪುರ ಠಾಣೆಯಲ್ಲಿ ಮೌಢ್ಯ ಪ್ರತಿಬಂಧಕ (ಬ್ಲಾಕ್ ಮ್ಯಾಜಿಕ್) ಕಾಯ್ದೆಯಡಿ ಹಾಗೂ ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಈಗ ಪೊಲೀಸರು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.
ಆರೋಪಿ ವಿರುದ್ಧ ಕರಾವಳಿಯಲ್ಲಿ ತೀವ್ರ ಆಕ್ರೋಶ
ಹಿಂದೆ ಈತ ಅಪ್ರಾಪ್ತ ಬಾಲಕಿಯೊಬ್ಬಳಿಗೆ ದೆವ್ವ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ್ದಾನೆ ಎಂಬ ಆಘಾತಕಾರಿ ಸಂಗತಿ ಬಯಲಾಗಿತ್ತು. ಸತೀಶ್ ಪಾತ್ರಿಯ ಈ ಅಮಾನವೀಯ ಕೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
LIVE TV
ಪೊಲೀಸರಿಂದಲೆ ಸಿಕ್ತಿತ್ತಾ ಇನ್ಸೈಡ್ ಮಾಹಿತಿ?
ಪೊಲೀಸರಿಂದ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿಗೆ ಪೊಲೀಸ್ ಇಲಾಖೆಯ ಒಳಗಿನಿಂದಲೇ ರಕ್ಷಣೆ ಸಿಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಎನ್.ಆರ್. ಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಕಾಂತೇಶ್ ಎಂಬಾತನೇ ಆರೋಪಿಗೆ ಠಾಣೆಯ ಪ್ರತಿಯೊಂದು ಮಾಹಿತಿಯನ್ನು ಒದಗಿಸುತ್ತಿದ್ದನು. ಪೊಲೀಸರು ದಾಳಿಗೆ ತೆರಳುವ ಮುನ್ನವೇ ಸಿಬ್ಬಂದಿಯಿಂದ ಮಾಹಿತಿ ಪಡೆದು ಆರೋಪಿ ಸ್ಥಳ ಬದಲಾಯಿಸುತ್ತಿದ್ದನು ಎಂದು ಹೇಳಲಾಗಿದೆ. ಈ ಮಾಹಿತಿ ಸೋರಿಕೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪೇದೆ ಕಾಂತೇಶ್‌ನನ್ನು ಅಮಾನತುಗೊಳಿಸಿ ಕಠಿಣ ಕ್ರಮ ಜರುಗಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

