ತುಮಕೂರು ದಸರಾಗೆ ಅದ್ಧೂರಿ ಚಾಲನೆ – ಧ್ವಜಾರೋಹಣ ನೆರವೇರಿಸಿದ ಡಿಸಿಎಂ ಪರಮೇಶ್ವರ್
– ಹೋಮ, ಪೂಜೆಯಲ್ಲಿ ಭಾಗಿಯಾದ ಪರಮೇಶ್ವರ್ ದಂಪತಿ ತುಮಕೂರು: ತುಮಕೂರು ದಸರಾ (Tumakuru Dasara) ವೈಭವ-2026ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯ...


– ಹೋಮ, ಪೂಜೆಯಲ್ಲಿ ಭಾಗಿಯಾದ ಪರಮೇಶ್ವರ್ ದಂಪತಿ
ತುಮಕೂರು: ತುಮಕೂರು ದಸರಾ (Tumakuru Dasara) ವೈಭವ-2026ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ದಸರಾ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar) ಹಾಗೂ ಮಠಾಧೀಶರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ತುಮಕೂರು ದಸರಾ ಲೋಗೋ ಹಾಗೂ ಕನ್ನಡದ ಬಾವುಟವನ್ನು ಧ್ವಜಾರೋಹಣ ಮಾಡಲಾಯಿತು. ಶ್ರೀ ಹನುಮಂತನಾಥ ಸ್ವಾಮೀಜಿ ಹಾಗೂ ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬಳಿಕ ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರ್ ಅವರೊಂದಿಗೆ ತಾಯಿ ಚಾಮುಂಡೇಶ್ವರಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಣಹೋಮ ಪೂಜಾ ಕಾರ್ಯದಲ್ಲಿಯೂ ದಂಪತಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ನಂತರ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೇದಿಕೆಯಲ್ಲಿ ತುಮಕೂರು ದಸರಾ ವೈಭವ-2026ರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪರಮೇಶ್ವರ್, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತಿಪಟೂರು ಶಾಸಕ ಕೆ. ಷಡಕ್ಷರಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದರು.
ಸಿದ್ದಗಂಗಾ ಮಠದ ಅಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದರಬೆಟ್ಟದ ಶಿವಾಚಾರ್ಯ ಶ್ರೀಗಳು ಹಾಗೂ ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ ಕಾರ್ಯಕ್ರಮಕ್ಕೆ ಸಾನ್ನಿಧ್ಯ ವಹಿಸಿದ್ದರು. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕ ಜ್ಯೋತಿ ಗಣೇಶ್, ಮಾಜಿ ಶಾಸಕ ಗೌರಿಶಂಕರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಒ ಅಶ್ವಿಜಾ ಹಾಗೂ ಎಸ್‌ಪಿ ಅಶೋಕ್ ಸೇರಿದಂತೆ ಹಲವು ನಾಯಕರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತುಮಕೂರು ದಸರಾ ವೈಭವ-2026ರ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದಸರಾ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.




