ಮಂಗಳೂರು ನಿಲ್ದಾಣ ಕೈತಪ್ಪಿದ ಬೆನ್ನಲ್ಲೇ 34 ವರ್ಷಗಳ ಕಾಲ ಮುಚ್ಚಿದ್ದ ಪಾಲಕ್ಕಾಡ್ ವಿಭಾಗದ ಈ ರೈಲು ನಿಲ್ದಾಣ ರೀ ಓಪನ್!
ತಮಿಳುನಾಡಿನ ಕೋವಿಲ್‌ಪಾಳಯಂ ರೈಲು ನಿಲ್ದಾಣವು 34 ವರ್ಷಗಳ ನಂತರ 35.36 ಕೋಟಿ ರೂ. ವೆಚ್ಚದಲ್ಲಿ ಮರುಪ್ರಾರಂಭಗೊಳ್ಳುತ್ತಿದೆ. ಮಂಗಳೂರು ನಿಲ್ದಾಣವನ್ನು ಮೈಸೂರು ವಿಭಾಗಕ್ಕೆ ಸೇರಿಸಿದ್ದರಿಂದ ಆದಾಯ ಹೆಚ್ಚಿಸಲು ಪಾಲಕ್ಕಾಡ್...

ತಮಿಳುನಾಡಿನ ಕಿನತುಕಡವು ಬಳಿಯ ಕೋವಿಲ್‌ಪಾಳಯಂ ರೈಲು ನಿಲ್ದಾಣವು ಸುಮಾರು 3 ದಶಕಗಳ ಸುದೀರ್ಘ ಅಂತರದ ನಂತರ ಮತ್ತೆ ತೆರೆಯಲು ಸಜ್ಜಾಗಿದೆ. ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ರೈಲು ಪ್ರಯಾಣಿಕರ ಸಂಘಗಳ ನಿರಂತರ ಹೋರಾಟದ ಫಲವಾಗಿ ದಕ್ಷಿಣ ರೈಲ್ವೆಯು ಈ ನಿಲ್ದಾಣವನ್ನು ಪುನರುಜ್ಜೀವನಗೊಳಿಸಲು ಅಧಿಕೃತ ಅನುಮೋದನೆ ನೀಡಿದೆ. ಈ ರೈಲು ನಿಲ್ದಾಣವು ಕೇರಳದ ಪಾಲಕ್ಕಾಡ್ ರೈಲ್ವೇ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದ್ದು ಈ ನವೀಕರಣ ಯೋಜನೆಗಾಗಿ ಚೆನ್ನೈನ ದಕ್ಷಿಣ ರೈಲ್ವೆ ಪ್ರಧಾನ ಕಚೇರಿಯು 35.36 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಬಿಡುಗಡೆ ಮಾಡಿದೆ.
ಸತತ ಹೋರಾಟದ ಜೊತೆಗೆ ಬರೋಬ್ಬರಿ 34 ವರ್ಷಗಳ ಬಳಿಕ ಕೊನೆಗೂ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಕೋವಿಲ್‌ಪಾಳಯಂ ನಿಲ್ದಾಣದ ರೀ ಓಪನ್ ಮತ್ತು ಅಭಿವೃದ್ಧಿಗೆ ಮುಂದಾಗಿರುವುದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಪಾಲಕ್ಕಾಡ್ ವಿಭಾಗದ ಹಿಡಿತದಲ್ಲಿದ್ದ ಜನ ಜಂಗುಳಿ ಇರುವ ಕರಾವಳಿಯ ಪ್ರಮುಖ ಮಂಗಳೂರು ರೈಲು ನಿಲ್ದಾಣವನ್ನು ನೈಋತ್ಯ ರೈಲ್ವೆಯ ಸುಪರ್ದಿಯಲ್ಲಿರುವ ಮೈಸೂರು ವಿಭಾಗಕ್ಕೆ ಸೇರಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಆದಾಯ ಮೇಲೆ ಹೊಡೆತ ಬೀಳಲಿದೆ ಎಂಬ ಚರ್ಚೆಗಳಿತ್ತು. ಅಕ್ಟೋಬರ್ 1 , 2026 ರಿಂದ ಕೇಂದ್ರ ರೈಲ್ವೆ ಸಚಿವಾಲಯದ ಆದೇಶದಂತೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಒಳಗೊಂಡಂತೆ ಮಂಗಳೂರು ರೈಲ್ವೆ ಪ್ರದೇಶ ರೈಲು ವಿಭಾಗವನ್ನು ಅಧಿಕೃತವಾಗಿ ಮೈಸೂರು ವಿಭಾಗಕ್ಕೆ ವರ್ಗಾಯಿಸಿದೆ. ಇದರಿಂದ ಪಾಲಕ್ಕಾಡ್ ವಿಭಾಗದ ದಕ್ಷಿಣ ರೈಲ್ವೆ ಆದಾಯಕ್ಕೆ ಹೊಡೆತ ಬಿದ್ದಿದೆ. ಈ ಕಾರಣಕ್ಕೆ ತನ್ನ ವ್ಯಾಪ್ತಿಗೆ ಬರುವ ಕೋವಿಲ್‌ಪಾಳಯಂ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ ಆದಾಯಗಳಿಸಲು ಮುಂದಾಗಿದೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ.
ಮುಚ್ಚಲು ಕಾರಣಗಳೇನಿತ್ತು
ಕಿನತುಕಡವು ಮತ್ತು ಪೊಲ್ಲಾಚಿ ನಡುವೆ ಇರುವ ಕೋವಿಲ್‌ಪಾಳಯಂ ರೈಲು ನಿಲ್ದಾಣವು 1992ರವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಆ ಅವಧಿಯಲ್ಲಿ ತಿರುನಲ್ವೇಲಿ, ಕನ್ಯಾಕುಮಾರಿ ಹಾಗೂ ರಾಮೇಶ್ವರಂಗೆ ತೆರಳುವ ಪ್ರಮುಖ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತಿದ್ದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ ಎಂಬ ಕಾರಣ ನೀಡಿ 1992ರ ಸುಮಾರಿಗೆ ನಿಲ್ದಾಣವನ್ನು ಮುಚ್ಚಲಾಯಿತು. ತದನಂತರ ಈ ಮಾರ್ಗದಲ್ಲಿ ಗೇಜ್ ಪರಿವರ್ತನೆ ಕಾಮಗಾರಿ ನಡೆದ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಹಳೆಯ ನಿಲ್ದಾಣದ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ ಹಾಕಲಾಗಿತ್ತು.
ಮೂರು ವರ್ಷಗಳ ಅಭಿಯಾನ
ಈ ನಿಲ್ದಾಣದ ಪುನರಾರಂಭಕ್ಕಾಗಿ ಸ್ಥಳೀಯ ನಾಗರಿಕರು ಹಾಗೂ ಮುಳ್ಳುಪಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಆರ್. ಸೆಂಥಿಲ್ ಕುಮಾರ ಮೂರ್ತಿ ನೇತೃತ್ವದ ತಂಡವು ಕಳೆದ ಮೂರು ವರ್ಷಗಳಿಂದ ಸತತ ಪ್ರಚಾರ ಅಭಿಯಾನ ಮತ್ತು ಹೋರಾಟ ನಡೆಸಿತ್ತು. ಪೊಲ್ಲಾಚಿ ಸಂಸದ ಕೆ. ಈಶ್ವರಸಾಮಿ ಅವರು ಈ ಗಂಭೀರ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ರೈಲ್ವೆ ಸಚಿವಾಲಯದ ಗಮನ ಸೆಳೆದಿದ್ದರು. ಜೊತೆಗೆ ಪ್ರಚಾರಕರ ತಂಡವು ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಹಾಗೂ ಪಾಲಕ್ಕಾಡ್ ವಿಭಾಗೀಯ ರೈಲ್ವೆ ಮ್ಯಾನೇಜರ್‌ಗೆ ಹಕ್ಕುಪತ್ರಗಳನ್ನು ಸಲ್ಲಿಸಿ ತೀವ್ರ ಒತ್ತಡ ಹೇರಿದ್ದರ ಪರಿಣಾಮವಾಗಿ ಪ್ರಸ್ತಾವನೆಗೆ ಅಂತಿಮ ಒಪ್ಪಿಗೆ ದೊರೆತಿದೆ
ಏನೆಲ್ಲ ಅಭಿವೃದ್ದಿ ಆಗಲಿದೆ?
ಮಂಜೂರಾದ ಅನುದಾನದಲ್ಲಿ ಕೋವಿಲ್‌ಪಾಳಯಂ ಅನ್ನು ಒಂದು ಹೊಸ 'ಕ್ರಾಸಿಂಗ್ ನಿಲ್ದಾಣ'ವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಪ್ರಸ್ತುತ ಪೊದೆಗಳಿಂದ ತುಂಬಿರುವ ಆವರಣವನ್ನು ಸ್ವಚ್ಛಗೊಳಿಸಿ ನೂತನ ನಿಲ್ದಾಣ ಕಟ್ಟಡವನ್ನು ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಇದರೊಂದಿಗೆ ರೈಲುಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಹೆಚ್ಚುವರಿ ಕ್ರಾಸಿಂಗ್ ಟ್ರ್ಯಾಕ್ ಹಾಗೂ ಸುಧಾರಿತ ದೂರಸಂಪರ್ಕ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಭೌತಿಕ ನಿರ್ಮಾಣ ಕಾರ್ಯಗಳು ಮುಕ್ತಾಯಗೊಳ್ಳಲು ಕನಿಷ್ಠ ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ
ಪ್ರಯೋಜನಗಳು ಹಲವು
ಕಳೆದ ಮೂರು ದಶಕಗಳಲ್ಲಿ ಈ ಪ್ರದೇಶದಲ್ಲಿ ಜನಸಂಖ್ಯೆ ದ್ವಿಗುಣಗೊಂಡಿದ್ದು, ಹಲವಾರು ಹೊಸ ಕೈಗಾರಿಕೆಗಳು ತಲೆಎತ್ತಿವೆ. ಪ್ರಸ್ತುತ ಕೊಯಮತ್ತೂರಿಗೆ ತೆರಳಲು ಬಸ್ ಹಾಗೂ ದ್ವಿಚಕ್ರ ವಾಹನಗಳನ್ನು ಅವಲಂಬಿಸಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕಚೇರಿ ಉದ್ಯೋಗಿಗಳಿಗೆ ರೈಲು ಸಂಚಾರ ಮರುಆರಂಭವಾಗುವುದರಿಂದ ಪ್ರಯಾಣ ವೆಚ್ಚ ಹಾಗೂ ಸಮಯ ಅಪಾರವಾಗಿ ಉಳಿತಾಯವಾಗಲಿದೆ. ಅಲ್ಲದೆ, ಈ ಭಾಗದ ಕೈಗಾರಿಕೆಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಅವರು ತಮ್ಮ ಊರುಗಳಿಗೆ ರೈಲು ಹತ್ತಲು ಕೊಯಮತ್ತೂರಿಗೆ ಬಸ್‌ನಲ್ಲಿ ಪ್ರಯಾಣಿಸುವ ಸವಾಲು ತಪ್ಪಲಿದೆ. ಕೊಯಮತ್ತೂರು-ಪೊಲ್ಲಾಚಿ-ಪಳನಿ-ದಿಂಡಿಗಲ್ ಮಾರ್ಗದಲ್ಲಿ ರೈಲು ಸಂಪರ್ಕ ಸುಲಭಗೊಳ್ಳಲಿದ್ದು, ಈ ಭಾಗದಲ್ಲಿ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಬೇಕೆಂಬ ಬೇಡಿಕೆಯೂ ಹೆಚ್ಚಿದೆ.
ಮುಂದಿನ ಯೋಜಿತ ಹಂತಗಳು
ಅನುಮೋದನೆ ದೊರೆತಿದ್ದರೂ ಸಹ ಟೆಂಡರ್ ಪ್ರಕ್ರಿಯೆ ಮತ್ತು ಸ್ಥಳದಲ್ಲೇ ನಡೆಯುವ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರವೇ ರೈಲುಗಳು ಇಲ್ಲಿ ನಿಲ್ಲಲು ಪ್ರಾರಂಭಿಸುತ್ತವೆ. ಯೋಜನೆಯ ಮಂಜೂರಾತಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳಿಗೆ ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಧನ್ಯವಾದ ಮತ್ತು ನಿಲ್ದಾಣಕ್ಕೆ ಅಗತ್ಯವಿರುವ ಇತರೆ ಸೌಲಭ್ಯಗಳ ಕುರಿತು ಚರ್ಚಿಸಲು ಸ್ಥಳೀಯ ನಿವಾಸಿಗಳು ಸಭೆ ಸೇರಲು ಮುಂದಾಗಿದ್ದಾರೆ.




