KSTDC: ಮೈಸೂರು ದಸರಾ ವೀಕ್ಷಣೆಗೆ 7 ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಕೆಎಸ್‌ಟಿಡಿಸಿ ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಇದರೊಂದಿಗೆ ದೀಪಾಲಂಕಾರ ವೀಕ್ಷಿಸಲು 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಸೇವೆಯನ್ನೂ ಒದಗಿಸಲಾಗುತ್...

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್‌ಟಿಡಿಸಿ) ಒಟ್ಟು ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.
ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು ಮತ್ತು ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಕೆಎಸ್‌ಟಿಡಿಸಿಯ ಜನಪ್ರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ. ಈ ಬಸ್ಸು ಹಗಲಿನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನ ಪ್ರಯಾಣಕ್ಕಾಗಿ ಒಬ್ಬರಿಗೆ ₹250 ದರವನ್ನು ನಿಗದಿಪಡಿಸಲಾಗಿದೆ. ಮೈಸೂರು ದಸರಾ ಅಂಗವಾಗಿ 146 ಕಿ.ಮೀ. ವಿದ್ಯುತ್ ದೀಪಾಲಂಕಾರ ಇರಲಿದ್ದು, ಇದನ್ನು ವೀಕ್ಷಿಸಲು ಸಂಜೆ 6.30, ರಾತ್ರಿ 8 ಹಾಗೂ 9.30ಕ್ಕೆ ವಿಶೇಷ ಸವಾರಿಗಳ ವ್ಯವಸ್ಥೆ ಇರಲಿದೆ. ರಾತ್ರಿ ಸವಾರಿಯ ವೇಳೆ ಕೆಳಗಿನ ಡೆಕ್‌ಗೆ ₹250 ಹಾಗೂ ಮೇಲಿನ ಡೆಕ್‌ಗೆ ₹500 ದರವನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
7 ವಿಶೇಷ ಪ್ಯಾಕೇಜ್:
ಇದರೊಂದಿಗೆ ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ತೋರಿಸಲು ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಊಟಿಯ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು–ಹಳೇಬೀಡು–ಶ್ರವಣಬೆಳಗೊಳ, ಕೊಡಗಿನ ಪ್ರಮುಖ ತಾಣಗಳು, ಶಿವನಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ನಂಜನಗೂಡು ಸೇರಿದಂತೆ ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಒಂದು ಹಾಗೂ ಎರಡು ದಿನಗಳ ಪ್ಯಾಕೇಜ್‌ಗಳು ಲಭ್ಯವಿವೆ ಎಂದು ಸಚಿವರು ವಿವರಿಸಿದರು.
ಪ್ರವಾಸ ಪ್ಯಾಕೇಜ್‌ಗಳು, ‘ಅಂಬಾರಿ’ ಬಸ್ ಸೇವೆ ಹಾಗೂ ಬುಕ್ಕಿಂಗ್‌ಗೆ ಸಂಬಂಧಿಸಿದ ಮಾಹಿತಿಗಾಗಿ ಪ್ರವಾಸಿಗರು ಕೆಎಸ್‌ಟಿಡಿಸಿ ಸಹಾಯವಾಣಿ ಸಂಖ್ಯೆ 080-4334 4334/ 0821-2423652 ಅಥವಾ 8970656400 ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ info@kstdc.coಗೆ ಇ-ಮೇಲ್ ಮಾಡಬಹುದು.




