ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಪುನರಾರಂಭ
ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ (Hubli) ವಿಭಾಗದ ವ್ಯಾಪ್ತಿಯ ತಿನೈಘಾಟ್ ರೈಲು ನಿಲ್ದಾಣದಲ್ಲಿ (Tinai Ghat Railway Station) ಕಬ್ಬಿಣದ ಅದಿರು ಸಾಗಣೆ ಕಾರ್ಯಾಚರಣೆ ಪುನರಾರಂಭವಾಗಿದೆ. ಇದರಿಂದ ಕಬ್ಬಿಣದ ಅ...


ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ (Hubli) ವಿಭಾಗದ ವ್ಯಾಪ್ತಿಯ ತಿನೈಘಾಟ್ ರೈಲು ನಿಲ್ದಾಣದಲ್ಲಿ (Tinai Ghat Railway Station) ಕಬ್ಬಿಣದ ಅದಿರು ಸಾಗಣೆ ಕಾರ್ಯಾಚರಣೆ ಪುನರಾರಂಭವಾಗಿದೆ. ಇದರಿಂದ ಕಬ್ಬಿಣದ ಅದಿರು ವ್ಯಾಪಾರಿಗಳು, ಕೈಗಾರಿಕೆಗಳು ಹಾಗೂ ಸರಕು ಸಾಗಣೆ ನಿರ್ವಾಹಕರಿಗೆ ರೈಲ್ವೆ ಮೂಲಕ ಸರಕು ಸಾಗಿಸಲು ಮತ್ತಷ್ಟು ಅವಕಾಶ ಲಭ್ಯವಾಗಿದೆ.
ಈ ಕುರಿತು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಅಧಿಸೂಚನೆ ಹೊರಡಿಸಿದ್ದಾರೆ. ತಿನೈಘಾಟ್ ರೈಲು ನಿಲ್ದಾಣದಲ್ಲಿ ಸರಕು ಸಾಗಣೆ ಸೌಲಭ್ಯವು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಲಭ್ಯವಿರಲಿದೆ.
ಈ ಸೌಲಭ್ಯದ ಪುನರಾರಂಭದಿಂದ ರೈಲ್ವೆ ಮೂಲಸೌಕರ್ಯದ ಸಮರ್ಪಕ ಬಳಕೆಗೆ ಉತ್ತೇಜನ ದೊರೆಯಲಿದೆ. ಅಲ್ಲದೆ, ಸರಕು ಸಾಗಣೆಗೆ ಅಗತ್ಯವಿರುವ ವ್ಯಾಗನ್‌ಗಳ ಲಭ್ಯತೆ ಸುಧಾರಿಸಲು ಮತ್ತು ಸಾಗಣೆ ಕಾರ್ಯಾಚರಣೆಗಳ ದಕ್ಷತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಕಬ್ಬಿಣದ ಅದಿರು ವ್ಯಾಪಾರದಲ್ಲಿ ತೊಡಗಿರುವವರು ತಿನೈಘಾಟ್ ರೈಲು ನಿಲ್ದಾಣದಲ್ಲಿ ಲಭ್ಯವಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.




