ಸೈಂಟ್ ಆಗ್ನೆಸ್ ಕಾಲೇಜು: ದಸರಾ ರಜೆಯಲ್ಲೇ ಪರೀಕ್ಷೆ, ವಿದ್ಯಾರ್ಥಿಗಳ ಆಕ್ರೋಶ
ಮಂಗಳೂರು : ದಸರಾ ಹಬ್ಬದ ಸಂಭ್ರಮ ಹಾಗೂ ರಜೆಯ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವ ಮಂಗಳೂರಿನ ಪ್ರತಿಷ್ಠಿತ ಸೈಂಟ್... The post ದಸರಾ ರಜೆ ವೇಳೆಯೇ ಪದವಿ ಸೆಮಿಸ್ಟರ್ ಪರೀಕ್ಷೆ- ವಿದ್ಯಾರ್ಥಿಗಳ ಪ...

ಮಂಗಳೂರು : ದಸರಾ ಹಬ್ಬದ ಸಡಗರ ಹಾಗೂ ರಜೆಯ ದಿನಗಳಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿರುವ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯ ಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಮಂಗಳೂರಿನ ಬೆಂದೂರ್‌ವೆಲ್ ಸಮೀಪವಿರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ನಾಡಹಬ್ಬ ದಸರಾ ಆಚರಣೆ ಹಾಗೂ ಮಂಗಳೂರು ದಸರಾದಲ್ಲಿ ಪಾಲ್ಗೊಳ್ಳಬೇಕಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ, ರಜೆ ಘೋಷಿಸದೆ ಪರೀಕ್ಷೆ ನಡೆಸಲು ಮುಂದಾಗಿರುವ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.
ಆಡಳಿತ ಮಂಡಳಿಯಿಂದಿಲ್ಲ ಸ್ಪಂದನೆ ಪರೀಕ್ಷೆಯನ್ನು ಮುಂದೂಡುವಂತೆ ಕಾಲೇಜು ಆಡಳಿತಕ್ಕೆ ಮೊದಲೇ ಮನವಿ ಸಲ್ಲಿಸಿದ್ದರೂ, ಆಡಳಿತ ಮಂಡಳಿಯು ಯಾವುದೇ ಪ್ರತಿಕ್ರಿಯೆ ನೀಡದೆ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದರಿಂದ ಕೆರಳಿದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜಿನ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಎಬಿವಿಪಿ ವಿದ್ಯಾರ್ಥಿ ಸಂಘಟನೆಯು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿದ್ದು, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ಅಧಿಕೃತ ದೂರು ಸಲ್ಲಿಸಲಾಗಿದೆ.
ರಸ್ತೆ ಬಂದ್ ಮಾಡಿ ತೀವ್ರ ವಿರೋಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎಬಿವಿಪಿ ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲು ಪ್ರಯತ್ನಿಸಿದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಮತ್ತು ಕಾರ್ಯಕರ್ತರು ಪೊಲೀಸ್ ಜೀಪ್‌ಗೆ ಅಡ್ಡಲಾಗಿ ನಿಂತು, ರಸ್ತೆ ತಡೆದು ತೀವ್ರ ವಿರೋಧ ಸೂಚಿಸಿದರು.
ಡಿಸಿಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರೂ, ವಿದ್ಯಾರ್ಥಿಗಳು ಜೀಪ್ ಎದುರೇ ಮಲಗಿ ನಾಯಕರ ಬಿಡುಗಡೆಗೆ ಪಟ್ಟು ಹಿಡಿದರು. ವಿದ್ಯಾರ್ಥಿಗಳ ಆಕ್ರೋಶ ಹಾಗೂ ಪ್ರತಿರೋಧಕ್ಕೆ ಮಣಿದ ಪೊಲೀಸರು ಅಂತಿಮವಾಗಿ ಜೀಪನ್ನು ಬದಿಗೆ ಹಾಕಬೇಕಾಯಿತು. ಎಬಿವಿಪಿ ನಾಯಕರನ್ನು ಬಿಡುಗಡೆ ಮಾಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಗೇಟ್ ಎದುರು ಪೊಲೀಸರಿಗೆ ಸವಾಲು ಹಾಕಿ ಪ್ರತಿಭಟನೆ ಮುಂದುವರಿಸಿದ್ದಾರೆ. ದಸರಾ ರಜೆ ಸಮಯದಲ್ಲಿ ಹಬ್ಬದ ಉತ್ಸಾಹಕ್ಕೆ ತಣ್ಣೀರು ಎರಚಿರುವ ಕಾಲೇಜು ಆಡಳಿತದ ಈ ಧೋರಣೆಯು ಶೈಕ್ಷಣಿಕ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.




