ಜ್ಞಾನ ಪ್ರಕಾಶ ಸ್ವಾಮೀಜಿ: ನಮ್ಮ ಬಾಯಲ್ಲಿ ಭೀಮವಾದ, ಮನೆಗಳಲ್ಲಿ ಮನುವಾದ!
ಉಡುಪಿ, ಅ.11: ಅಸುರರು ಅಂದರೆ ಶೀಲವಂತರು, ದಾನವಂತರು, ರಕ್ಷರು. ದೇಶ, ಪ್ರಕೃತಿ, ಜನರನ್ನು ರಕ್ಷಿಸಿದ ಮಹಿಷಸುರ ಸಹಿತ ಎಲ್ಲ ಮಹಾ... The post ಬಾಯಲ್ಲಿ ಭೀಮವಾದ, ಮನೆಗಳಲ್ಲಿ ಮನುವಾದ ಆಚರಣೆ- ಪೆದ್ದಿಮಠದ ಜ್ಞಾನ ಪ್ರಕಾ...

ಉಡುಪಿ, ಅ.11: ಅಸುರರು ಎಂದರೆ ಶೀಲವಂತರು, ದಾನವಂತರು ಹಾಗೂ ರಕ್ಷಕರು ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ದೇಶ, ಪ್ರಕೃತಿ ಮತ್ತು ಜನರನ್ನು ರಕ್ಷಿಸಿದ ಮಹಿಷಾಸುರ ಸೇರಿದಂತೆ ಎಲ್ಲ ಮಹಾ ಪುರುಷರನ್ನು ರಾಕ್ಷಸರಂತೆ ಬಿಂಬಿಸಲಾಗಿದೆ. ಈ ಮೂಲಕ ದೇಶದ ಇತಿಹಾಸವನ್ನು ಪ್ರತಿ ಪುಟದಲ್ಲಿಯೂ, ಪದದಲ್ಲಿಯೂ ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಗ ಚಾಲ್ತಿಯಲ್ಲಿರುವ ಇತಿಹಾಸ ಭಾರತದ ನೈಜ ಇತಿಹಾಸವಲ್ಲ. ಇಲ್ಲಿನ ಇತಿಹಾಸವು ಬ್ರಾಹ್ಮಣ್ಯ ಮತ್ತು ಬೌದ್ಧ, ದ್ರಾವಿಡರು ಮತ್ತು ಆರ್ಯರು, ವೈದಿಕ ಮತ್ತು ಅವೈದಿಕರ ನಡುವಿನ ಸಂಘರ್ಷವಾಗಿದೆ ಎಂದು ಅವರು ಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಅಹಿಂದ ಕುಲಗಳ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ಮಹಿಷ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಸುರ ಎಂದರೆ ದೈತ್ಯ, ದಾನವ, ರಕ್ಷಕ ಎಂಬ ಅರ್ಥವಿದೆ. ಮಹಿಷಾಸುರ ಎಲ್ಲ ಆದಿವಾಸಿಗಳ ನಾಯಕರಾಗಿದ್ದರು. ನಮ್ಮಲ್ಲಿ ಇತಿಹಾಸದ ಬಗ್ಗೆ ಅರಿವು ಮೂಡಿ ನಾವು ಜಾಗೃತರಾದಾಗ ಮಾತ್ರವೇ ಈ ದೇಶದ ಅಧಿಕಾರವನ್ನು ಪಡೆಯಲು ಸಾಧ್ಯ. ಆದರೆ ಇಂದು ನಮ್ಮನ್ನು ಜಾಗೃತರಾಗಲು ಬಿಡುತ್ತಿಲ್ಲ. ನಮ್ಮ ಬಾಯಲ್ಲಿ ಭೀಮವಾದವಿದ್ದರೆ, ಮನೆಗಳಲ್ಲಿ ಮನುವಾದ ಆಚರಣೆಯಲ್ಲಿದೆ. ಈ ಮನುವಾದ ಇರುವ ಕಡೆ ಅಂಬೇಡ್ಕರ್ ಮತ್ತು ಬುದ್ಧ ಹೇಗೆ ಜೀವಂತವಾಗಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಮಹಿಷ ಎಂದರೆ ನಮ್ಮ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕರಾದ ರಾವಣಾಸುರ, ರಂಬಾಸುರ, ಮೂಕಾಸುರ, ಬಕಾಸುರ, ಹಿಂಡಬಸುರ, ಮಹಿಷಾಸುರ ಹಾಗೂ ಬಲಿಚಕ್ರವರ್ತಿ ಸೇರಿದಂತೆ ಅಸುರ ಪರಂಪರೆಯನ್ನು ಕೊಂದ ದಿನವನ್ನು ಇಂದು ಸಂಭ್ರಮಿಸಲಾಗುತ್ತಿದೆ. ಈ ದಿನ ದುಃಖಿಸಬೇಕಾದವರೇ ಇಂತಹ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ದುರಂತ ಎಂದು ಅವರು ಟೀಕಿಸಿದರು.
ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯ ಜ್ಞಾನವಿಲ್ಲದ ಸಮುದಾಯವು ಅಧಿಕಾರ ಮತ್ತು ಹಕ್ಕುಗಳಿಂದ ಸಂಪೂರ್ಣ ವಂಚಿತವಾಗಿ ಶಾಶ್ವತವಾಗಿ ನಾಶವಾಗುತ್ತದೆ. ಈ ದೇಶವನ್ನು ನಿರ್ಮಿಸಿದ ಮೂಲನಿವಾಸಿಗಳು ಇಂದು ಬೀದಿಯಲ್ಲಿದ್ದರೆ, ಹೊರಗಿನಿಂದ ಬಂದವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದಕ್ಕೆ ನಾವು ನಮ್ಮ ಇತಿಹಾಸವನ್ನು ಅಧ್ಯಯನ ಮಾಡದಿರುವುದೇ ಕಾರಣ. ಇದು ನಮಗೆ ನಾವೇ ಮಾಡಿಕೊಂಡ ದ್ರೋಹ ಮತ್ತು ವಂಚನೆಯಾಗಿದೆ ಎಂದು ಅವರು ತಿಳಿಸಿದರು.
ಕಸ ಗುಡಿಸುವವರ ಮಗಳು ಕಸವೇ ಗುಡಿಸಬೇಕು ಎಂದು ಮನು ಸಂವಿಧಾನ ಹೇಳಿದರೆ, ಕಸ ಗುಡಿಸುವವರ ಮಗಳು ಜಿಲ್ಲಾಧಿಕಾರಿ ಆಗಬಹುದು ಎಂಬುದನ್ನು ಅಂಬೇಡ್ಕರ್ ಸಂವಿಧಾನ ಹೇಳುತ್ತದೆ. ಆದುದರಿಂದ ನಾವು ಅಂಬೇಡ್ಕರ್ ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಹಿರಿಯ ಚಿಂತಕ ನಾರಾಯಣ ಮಣೂರು ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು.ಪರಮೇಶ್ವರ್ ಹಾಗೂ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಸನ್ಮಾನಿಸಲಾಯಿತು. ದಸಂಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು, ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ಉಪಸ್ಥಿತರಿದ್ದರು.
ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾಕರ ಮಲ್ಪೆ ಸ್ವಾಗತಿಸಿದರು. ರವಿರಾಜ್ ಲಕ್ಷ್ಮೀನಗರ ವಂದಿಸಿದರು. ರಾಘು ಶಿರೂರು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಕಲಾವಿದ ಶಂಕರ್‌ದಾಸ್ ಚೇಂಡ್ಕಳ ತಂಡ ಕ್ರಾಂತಿಗೀತೆಗಳನ್ನು ಪ್ರಸ್ತುತ ಪಡಿಸಿತು.
ಮತದಾನದ ಹಕ್ಕು ಕಿತ್ತುಕೊಳ್ಳಲು ಸಂಚು
ಈ ದೇಶದ ಬಹುಜನರು ಆಳುವ ದೊರೆಗಳಾಗಬೇಕೇ ಹೊರತು ಗುಲಾಮರಲ್ಲ. ಆಳುವ ಸಮುದಾಯದ ಲಕ್ಷಣ ಸ್ವಾಭಿಮಾನ ಮತ್ತು ಘನತೆ. ಅದು ಬಿಟ್ಟು ಗುಲಾಮಗಿರಿಯಲ್ಲ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಿ, ಅನಾಥರನ್ನಾಗಿಸಲಾಗಿದೆ. ಅವರ ಮತದಾನದ ಹಕ್ಕನ್ನು ಕಿತ್ತು ಅವರನ್ನು ದೇಶದ್ರೋಹಿಗಳನ್ನಾಗಿ ಮಾಡುವ ಸಂಚು ನಡೆಯುತ್ತಿದೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಆರೋಪಿಸಿದರು.
ಚರಿತ್ರೆಯಲ್ಲಿ ಮೂಲನಿವಾಸಿಗಳನ್ನು ಊರಿನಿಂದ ಹೊರಗಿಟ್ಟರೆ, ಇಂದು ಹಕ್ಕು ಮತ್ತು ಅಧಿಕಾರಗಳಿಂದ ವಂಚಿತರನ್ನಾಗಿಸಿ ಶಾಶ್ವತವಾಗಿ ದೂರ ಇಡಲಾಗುತ್ತಿದೆ. ಇಂದು ಇಡೀ ದೇಶದ ಸಂಪತ್ತು, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳು ನಾಶವಾಗುತ್ತಿವೆ. ಇನ್ನೊಂದೆಡೆ ದೇಶ ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದಕ್ಕೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮರಂಗಗಳು ನಿಷ್ಕ್ರಿಯವಾಗಿರುವುದೇ ಕಾರಣ. ಈ ಮೂಲಕ ನಮ್ಮ ಧ್ವನಿಯನ್ನು ಅಡಗಿಸುವ ಕಾರ್ಯ ನಡೆಯುತ್ತಿದೆ ಎಂದರು.
ಮಹಿಷ ಮಂಡಲದ ಒಡೆಯನಾಗಿರುವ ಮಹಿಷನ ಸ್ಮರಣೆ ಮಾಡುವುದು ನಿಜವಾದ ಇತಿಹಾಸವಾಗಿದೆ. ಅಸುರ ಪರಂಪರೆಯನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದು ನಮ್ಮ ಚರಿತ್ರೆ ಮತ್ತು ಸಂಸ್ಕೃತಿಯ ಮರುಸೃಷ್ಟಿಯೇ ಹೊರತು ಯಾವುದೇ ಸರಕಾರ ಅಥವಾ ಧರ್ಮಗಳಿಗೆ ಪರ್ಯಾಯವಾದ ಆಚರಣೆ ಅಲ್ಲ. ನಮ್ಮ ಸಂಸ್ಕೃತಿ ಮತ್ತು ನಾಯಕರ ಹಬ್ಬವನ್ನು ನಾವು ಆಚರಿಸುತ್ತೇವೆ. ನಿಮ್ಮ ಹಬ್ಬವನ್ನು ನೀವು ಆಚರಿಸಿ. ಆದರೆ ನಮ್ಮ ಸಾಂಸ್ಕೃತಿಕ ನಾಯಕರನ್ನು ರಾಕ್ಷಸರು ಎಂದು ಬಿಂಬಿಸುವುದನ್ನು ನಾವು ಒಪ್ಪುವುದಿಲ್ಲ – ಜ್ಞಾನ ಪ್ರಕಾಶ ಸ್ವಾಮೀಜಿ, ಮೈಸೂರು ಉರಿಲಿಂಗ ಪೆದ್ದಿಮಠ




