ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನೆ: ಮೌಂಟ್ ಕಾರ್ಮೆಲ್ ಕಾಲೇಜು ಹೋಟೆಲ್‌ನಲ್ಲಿ ಯಾರ ಜೊತೆ ಕೂತಿದ್ರಿ?
ಕಾಲೇಜು ಸಮೀಪದ ಹೊಟೆಲ್‌ನಲ್ಲಿ ಸ್ಟಿಂಗ್ ಆಪರೇಶನ್ ಮಾಡುವ ವ್ಯಕ್ತಿ ಜೊತೆ ಎಷ್ಟು ಹೊತ್ತು ಕೂತಿದ್ರಿ? ಆ ವ್ಯಕ್ತಿ ಯಾರು ಅನ್ನೋದು ಜನತೆ ಮುಂದೆ ಇಡಬೇಕಲ್ವಾ ಎಂದು ಹೆಚ್ ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ.

ಬೆಂಗಳೂರು (ಅ.11) ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಾಗೂ ಎನ್‌ಡಿಎ ನಡುವೆ ಸ್ಟಿಂಗ್ ಆಪರೇಶನ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಹೆಚ್ಚಾಗುತ್ತಿದೆ. ತಮ್ಮ ನಾಯಕರು ಮತ್ತು ಸಚಿವರ ಸ್ಟಿಂಗ್ ವಿಡಿಯೋಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂಬ ಗಂಭೀರ ಆಪಾದನೆಯು ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಆರೋಪ ಪ್ರತ್ಯಾರೋಪಗಳ ಸರಣಿಯಲ್ಲಿ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಆಪಾದನೆಗಳನ್ನು ಮಾಡಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಿನ ಸಮೀಪವಿರುವ ಹೊಟೆಲ್‌ನಲ್ಲಿ ಸ್ಟಿಂಗ್ ಆಪರೇಶನ್ ನಡೆಸುವ ವ್ಯಕ್ತಿಯೊಂದಿಗೆ ನೀವು ಎಷ್ಟು ಸಮಯ ಕಳೆದಿದ್ದೀರಿ ಎಂಬುದನ್ನು ಸಾರ್ವಜನಿಕರ ಮುಂದೆ ತಿಳಿಸಿ ಎಂದು ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಯಾರ ಜೊತೆ ಕೂತಿದ್ರಿ, ಜನರ ಮುಂದೆ ಇಡಿ
ಡಿಕೆ ಶಿವಕುಮಾರ್ ಸ್ಟಿಂಗ್ ಆಪರೇಶನ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನೂ ಸಹ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿರುವುದು ದೃಢಪಟ್ಟಂತಾಗಿದೆ. ಹಾಗಾದರೆ ಮೌಂಟ್ ಕಾರ್ಮೆಲ್ ಕಾಲೇಜಿನ ಹತ್ತಿರದ ಹೋಟೆಲ್‌ನಲ್ಲಿ ಸ್ಟಿಂಗ್ ಆಪರೇಶನ್ ಮಾಡುವ ವ್ಯಕ್ತಿಯ ಜೊತೆ ಎಷ್ಟು ಹೊತ್ತು ಕುಳಿತಿದ್ದಿರಿ? ಆ ವ್ಯಕ್ತಿ ಯಾರೆಂಬುದನ್ನು ಜನರ ಮುಂದಿಡಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿಗಳು ಜನರ ಮುಂದಿಡಬೇಕಿದೆ. ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಸ್ಟಿಂಗ್ ಆಪರೇಶನ್ ನಡೆದಿದೆ ಎಂಬ ವಿಷಯ ಹೊರಬಂದು ಬಳಿಕ ಸುಮ್ಮನಾಯಿತು. ನಮಗೆ ಸ್ಟಿಂಗ್ ಆಪರೇಶನ್ ಮಾಡುವ ಅಭ್ಯಾಸವಿಲ್ಲ. ಅವರನ್ನು ಸ್ಟಿಂಗ್ ಆಪರೇಶನ್ ನ ಪಿತಾಮಹ ಅಥವಾ ಸಾಮ್ರಾಟ ಎಂದು ಕರೆಯಬೇಕೋ ಎಂಬುದು ತಿಳಿಯುತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಯಾವ ಐದು ಮಂದಿ ಮೇಲೆ ಸ್ಟಿಂಗ್ ಆಗಿದೆ?
ಯಾವ ಐದು ನಾಯಕರ ಮೇಲೆ ಸ್ಟಿಂಗ್ ಆಪರೇಶನ್ ನಡೆದಿದೆ ಎಂಬ ಬಗ್ಗೆ ತನಿಖೆಯಾಗಬೇಕಲ್ಲವೇ? ನಿಮ್ಮದೇ ಸರ್ಕಾರ ಇರುವುದರಿಂದ ತನಿಖೆ ಮಾಡಿಸಿ ಎಂದು ಹೆಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಎಂತೆಂತಹವರ ಬಗ್ಗೆ ಏನೆಲ್ಲಾ ನಡೆಸಿದ್ದೀರಿ. ಈಗ ಐದು ಜನ ಮಂತ್ರಿಗಳ ಮೇಲೆ ಸ್ಟಿಂಗ್ ಆಗಿದೆ ಎಂದು ಹೇಳುತ್ತೀರಿ. ಅಂತಹ ಮಂತ್ರಿಗಳನ್ನು ಯಾಕೆ ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಜಯದಶಮಿ ಮುಂಚೆಯೇ ಬೆಳವಣಿಗೆ
ವಿಜಯದಶಮಿ ನಂತರ ಅನೇಕ ಬೆಳವಣಿಗೆಗಳು ಸಂಭವಿಸುತ್ತವೆ ಎಂದು ನಾನು ಹೇಳಿದ್ದೆ. ಆದರೆ ಅದಕ್ಕೂ ಮುನ್ನವೇ ಆರಂಭವಾಗಿದೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕು. ಎಲ್ಲರ ಗಮನ ನಾಡಿನ ಹಬ್ಬ ದಸರಾ ಕಡೆಗಿದೆ. ನಾನು ಅನಿವಾರ್ಯವಾಗಿ ಎರಡು ವಿಷಯಗಳನ್ನು ಪ್ರಸ್ತಾಪಿಸಬೇಕು ಎಂದು ಹೇಳಿದ ಹೆಚ್‌ಡಿ ಕುಮಾರಸ್ವಾಮಿ ಸ್ಟಿಂಗ್ ಆಪರೇಶನ್ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಗೃಹ ಸಚಿವರು ಸ್ಟಿಂಗ್ ಆಪರೇಷನ್ ಬಗ್ಗೆ ದೂರು ನೀಡಲಿ ಎಂದು ಹೇಳಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ದೂರು ನೀಡದೆಯೇ ತನಿಖೆಗೆ ಅವಕಾಶ ನೀಡಿಲ್ಲವೇ? ನಾಡಿನ ಜನರ ಮುಂದೆ ಅನೇಕ ಅನುಮಾನಗಳು ಮೂಡುವಂತೆ ಮುಖ್ಯಮಂತ್ರಿಗಳೇ ವೇದಿಕೆ ನಿರ್ಮಿಸಿಕೊಟ್ಟಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಮುಖ ವಿಷಯ ಚರ್ಚೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ಟಿಂಗ್ ಆಪರೇಶನ್ ಬಗ್ಗೆ ಸಿಎಂ ಸಚಿವರಿಗೆ ಎಚ್ಚರಿಕೆ ನೀಡಿದ್ದಷ್ಟೇ ಅಲ್ಲದೆ, ಅಂದು ಕ್ಯಾಬಿನೆಟ್ ಸಭೆಗೆ ಹೋಗುವಾಗ ಸ್ಟಿಂಗ್ ಆಪರೇಶನ್ ಕುರಿತ ಮಾಹಿತಿಯ ಕಡತವನ್ನೂ ತೆಗೆದುಕೊಂಡು ಹೋಗಿದ್ದರು ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.




