ಸಾವಿನಲ್ಲೂ ಒಂದಾದ ದಂಪತಿಗಳು ಗಂಡನ ಸಾವಿನ ಆಘಾತಕ್ಕೆ ಪತ್ನಿಯೂ ಸಾವು
ಸರಗೂರು ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಪತಿ ವೆಂಕಟಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾದ ಪತ್ನಿ ಚಿನ್ನಮ್ಮ ಕೂಡ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಒಂದೇ ದಿನ ದಂಪತಿ...

ಮೈಸೂರು: ಪತಿ ಹೃದಯಾಘಾತದಿಂದ ಮೃತಪಟ್ಟ ಕೆಲವೇ ಸಮಯದಲ್ಲಿ ಪತ್ನಿಯೂ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹಿರೇಹಳ್ಳಿ ಗ್ರಾಮದ ವೆಂಕಟಸ್ವಾಮಿ (77) ಅವರು ಎಂದಿನಂತೆ ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ಮರಳಿದ್ದರು. ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಮಾರ್ಗಮಧ್ಯೆಯೇ ವೆಂಕಟಸ್ವಾಮಿ ಮೃತಪಟ್ಟರು.
ಈ ವೇಳೆ ಕಾರಿನಲ್ಲಿದ್ದ ಪತ್ನಿ ಚಿನ್ನಮ್ಮ (70) ಅವರು, ಪತಿ ಮೃತಪಟ್ಟಿರುವುದನ್ನು ಕಂಡು ತೀವ್ರ ಆಘಾತಕ್ಕೊಳಗಾದರು. ಕೆಲವೇ ಸಮಯದ ಬಳಿಕ ಚಿನ್ನಮ್ಮ ಅವರೂ ಮೃತಪಟ್ಟರು.
ಜೊತೆಯಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು
ದಂಪತಿಯ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗ ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ವೆಂಕಟಸ್ವಾಮಿ ಮತ್ತು ಚಿನ್ನಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ
ದಂಪತಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಬಂಧುಗಳು ಅವರ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆದರು. ಬಳಿಕ ಇಬ್ಬರ ಪಾರ್ಥಿವ ಶರೀರಗಳನ್ನು ಗ್ರಾಮದ ಜಮೀನಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಜೀವನದ ಹಲವು ವರ್ಷಗಳನ್ನು ಜೊತೆಯಾಗಿ ಕಳೆದಿದ್ದ ದಂಪತಿ ಒಂದೇ ದಿನ ಮೃತಪಟ್ಟಿರುವ ಘಟನೆ ಹಿರೇಹಳ್ಳಿ ಗ್ರಾಮದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.




