ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಬೆಳಗಾವಿ: 40ಕ್ಕೂ ಹೆಚ್ಚು ಕ್ಲಬ್, ಪಬ್‌ಗಳ ಮೇಲೆ ಪೊಲೀಸ್ ದಾಳಿ, ನಿಯಮ ಉಲ್ಲಂಘಿಸಿದ ಅಡ್ಡಾಗಳು ಬಂದ್!

– ಪ್ರಭಾವಿ ರಾಜಕಾರಣಿಗಳ ಒಡೆತನದ ಅಡ್ಡಾಗಳಿಗೂ ಶಾಕ್ – ನಿಯಮ ಉಲ್ಲಂಘಿಸಿದ ಕ್ಲಬ್‌ಗಳು ತಕ್ಷಣ ಬಂದ್ ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ನಡೆಯುತ್ತಿದ್ದ ನೈಟ್‌ಲೈಫ್ ಚಟುವಟಿಕೆಗಳಿಗೆ ಬೆಳಗಾವಿ ನಗರ ಪೊಲೀಸ...

· ಬೆಳಗಾವಿ
ಬೆಳಗಾವಿಯಲ್ಲಿ ಖಾಕಿ ಘರ್ಜನೆ: 40ಕ್ಕೂ ಹೆಚ್ಚು ಕ್ಲಬ್, ಪಬ್, ಹೋಟೆಲ್‌ಗಳ ಮೇಲೆ ಏಕಕಾಲಕ್ಕೆ ರೇಡ್!
ಹಂಚಿಕೊಳ್ಳಿ:

ಪ್ರಭಾವಿ ರಾಜಕಾರಣಿಗಳ ಒಡೆತನದ ಅಡ್ಡಾಗಳಿಗೂ ಶಾಕ್

ನಿಯಮ ಉಲ್ಲಂಘಿಸಿದ ಕ್ಲಬ್‌ಗಳು ತಕ್ಷಣ ಬಂದ್

ಬೆಳಗಾವಿ: ನಿಯಮಗಳನ್ನು ಕಡೆಗಣಿಸಿ ಅಡೆತಡೆಯಿಲ್ಲದೆ ನಡೆಯುತ್ತಿದ್ದ ನೈಟ್‌ಲೈಫ್ ಚಟುವಟಿಕೆಗಳಿಗೆ ಬೆಳಗಾವಿ ನಗರ ಪೊಲೀಸರು(Belagavi Police) ಕಡಿವಾಣ ಹಾಕಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರ ಕಟ್ಟುನಿಟ್ಟಿನ ನೇತೃತ್ವದಲ್ಲಿ ನಗರದ ಒಟ್ಟು 40ಕ್ಕೂ ಹೆಚ್ಚು ಕ್ಲಬ್, ಪಬ್, ಪ್ರತಿಷ್ಠಿತ ಹೋಟೆಲ್‌ಗಳು ಮತ್ತು ಡಾಬಾಗಳ ಮೇಲೆ ಏಕಕಾಲದಲ್ಲಿ ದಾಳಿ(Raid) ನಡೆಸುವ ಮೂಲಕ ಆಘಾತ ನೀಡಲಾಗಿದೆ.

ಶನಿವಾರ ತಡರಾತ್ರಿ ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ಕೈಗೊಂಡ ಪೊಲೀಸರು, ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದ್ದ ಅನೇಕ ಅಡ್ಡಾಗಳನ್ನು ತಕ್ಷಣವೇ ಮುಚ್ಚಿಸಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರದ ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿವೆ ಎಂದು ಹೇಳಲಾದ ಕೆಲವು ಪ್ರಮುಖ ಮತ್ತು ಪ್ರತಿಷ್ಠಿತ ಕ್ಲಬ್‌ಗಳ ಮೇಲೂ ಪೊಲೀಸರು ದಾಳಿ ಮಾಡಿದ್ದಾರೆ. ಪ್ರಭಾವ ಅಥವಾ ಪ್ರತಿಷ್ಠೆಗೆ ಬಗ್ಗದ ಅಧಿಕಾರಿಗಳು ಪ್ರತಿಯೊಂದು ವಿಭಾಗದಲ್ಲೂ ಕಠಿಣ ಪರಿಶೀಲನೆ ನಡೆಸಿದ್ದಾರೆ.

ಕೆಲವು ಪಬ್(Pub) ಮತ್ತು ಕ್ಲಬ್‌ಗಳಲ್ಲಿ ನಿಯಮಬಾಹಿರವಾಗಿ ಅಪ್ರಾಪ್ತರಿಗೆ ಪ್ರವೇಶ ಕಲ್ಪಿಸಿರುವುದು ದಾಳಿಯ ಸಂದರ್ಭದಲ್ಲಿ ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು, ಅಪ್ರಾಪ್ತರಿಗೆ ಅವಕಾಶ ನೀಡಿದ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ, ನಿಗದಿತ ಡೆಸಿಬಲ್ ಮಿತಿಯನ್ನು ಮೀರಿ ಜೋರಾದ ಶಬ್ದದೊಂದಿಗೆ ಡಿಜೆ/ಸೌಂಡ್ ಸಿಸ್ಟಮ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗಿದೆ.

ಪರವಾನಗಿ ನಿಯಮಗಳು, ನಿಗದಿತ ಸಮಯ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕ್ಲಬ್ ಮತ್ತು ಪಬ್‌ಗಳನ್ನು ಪೊಲೀಸರು ಸ್ಥಳದಲ್ಲೇ ಬಂದ್ ಮಾಡಿಸಿದ್ದಾರೆ. ನೂರಾರು ಪೊಲೀಸರು ಏಕಕಾಲದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರಿಂದ ಕ್ಲಬ್-ಪಬ್ ಮಾಲೀಕರು ಮತ್ತು ಪಾರ್ಟಿ ಪ್ರಿಯರಲ್ಲಿ ಆತಂಕ ಮನೆಮಾಡಿದೆ.

ಕಾನೂನು ಪಾಲನೆ ಕಡ್ಡಾಯ

ನಗರದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಎಷ್ಟೇ ಪ್ರಭಾವಿ ವ್ಯಕ್ತಿಗಳ ಸಂಸ್ಥೆಗಳಾಗಿದ್ದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸುವ, ಅಪ್ರಾಪ್ತರಿಗೆ ಪ್ರವೇಶ ನೀಡುವ ಹಾಗೂ ನಿಗದಿತ ಸಮಯ ಮೀರಿ ವ್ಯವಹರಿಸುವ ಯಾವುದೇ ಅಡ್ಡೆಗಳಿಗೂ ರಿಯಾಯಿತಿ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಖಡಕ್ ಸಂದೇಶ ನೀಡಿದ್ದಾರೆ.

ಪರಿಶೀಲನೆ ಪೂರ್ಣಗೊಂಡ ನಂತರ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಪರವಾನಗಿ ರದ್ದುಗೊಳಿಸಲು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಹಂಚಿಕೊಳ್ಳಿ: