ಸ್ಟುವರ್ಟ್ ಬ್ರಾಡ್ ಆಯ್ಕೆ: 21ನೇ ಶತಮಾನದ ಟಾಪ್ 10 ಟೆಸ್ಟ್ ಬ್ಯಾಟರ್‌ಗಳ ಪಟ್ಟಿ ಪ್ರಕಟ, ಸಚಿನ್‌ಗೆ ಮೊದಲ ಸ್ಥಾನ!
ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ 21ನೇ ಶತಮಾನದ ಟಾಪ್ 10 ಶ್ರೇಷ್ಠ ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದು, ಕೇವಲ ಓರ್ವ ಇಂಗ್ಲೆಂಡ್ ಆಟಗ...

ಬೆಂಗಳೂರು: 21ನೇ ಶತಮಾನದ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಯಾರು ಎಂಬ ಚರ್ಚೆ ಪದೇಪದೇ ಚಾಲ್ತಿಗೆ ಬರುತ್ತದೆ. ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಬ್ಯಾಟರ್‌ಗಳನ್ನು ಆರಿಸಿದ್ದಾರೆ. ವಿಶೇಷವೆಂದರೆ, ಇಂಗ್ಲೆಂಡ್‌ನ ಬೌಲರ್ ಆಗಿದ್ದರೂ ಸ್ಟುವರ್ಟ್ ಬ್ರಾಡ್, ಈ ಪಟ್ಟಿಯಲ್ಲಿ ಕೇವಲ ಒಬ್ಬ ಇಂಗ್ಲೆಂಡ್ ಬ್ಯಾಟರ್‌ಗೆ ಮಾತ್ರ ಅವಕಾಶ ನೀಡಿದ್ದಾರೆ.
ಜೋಸ್ ಬಟ್ಲರ್ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ ಸ್ಟುವರ್ಟ್ ಬ್ರಾಡ್, 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್‌ಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಅಗ್ರಸ್ಥಾನ ನೀಡಿದ್ದಾರೆ. ಇನ್ನು ಚೇಸ್ ಮಾಸ್ಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಗೆ 10ನೇ ಸ್ಥಾನವನ್ನು ನೀಡಿದ್ದಾರೆ.
ಟಾಪ್ 10 ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ
ಸ್ಟುವರ್ಟ್ ಬ್ರಾಡ್ ಆಯ್ಕೆ ಮಾಡಿದ 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಜೊತೆಗೆ ದಿ ವಾಲ್ ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂವರು ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ 38,439 ರನ್ ಗಳಿಸಿದ್ದಾರೆ. 117 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ. ಪ್ರಸ್ತುತ ಈ ಮೂವರು ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್
ಇನ್ನು ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಜೋ ರೂಟ್‌ಗೆ ಸ್ಥಾನ ಕಲ್ಪಿಸಿದ್ದಾರೆ. ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, 14,000+ ರನ್ ಗಳಿಸಿ ಮುನ್ನಡೆಯುತ್ತಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ನಂತರ ಅತಿಹೆಚ್ಚು ರನ್ ಗಳಿಸಿದ ದಾಖಲೆ ರೂಟ್ ಅವರ ಹೆಸರಿನಲ್ಲಿದೆ.
ಇನ್ನುಳಿದಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ 400 ರನ್ ಗಳಿಸಿ ಇಂದಿಗೂ ಅಚ್ಚರಿಯ ಗರಿಷ್ಠ ವೈಯುಕ್ತಿಕ ಸ್ಕೋರ್ ಹೊಂದಿರುವ ವಿಂಡೀಸ್ ದಂತಕಥೆ ಬ್ರಿಯನ್ ಲಾರಾ, ಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕರ ಕೂಡಾ ಸ್ಥಾನ ಪಡೆದಿದ್ದಾರೆ.
ಸ್ಟುವರ್ಟ್ ಬ್ರಾಡ್ ಆಯ್ಕೆ ಮಾಡಿದ 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್‌ಗಳು ಇವರೇ ನೋಡಿ
1. ಸಚಿನ್ ತೆಂಡೂಲ್ಕರ್
2. ಬ್ರಿಯನ್ ಲಾರಾ
3. ಸ್ಟೀವ್ ಸ್ಮಿತ್
4. ಜೋ ರೂಟ್
5. ರಿಕಿ ಪಾಂಟಿಂಗ್
6. ಕುಮಾರ ಸಂಗಕ್ಕರ
7. ಜಾಕ್ ಕಾಲಿಸ್
8. ಎಬಿ ಡಿವಿಲಿಯರ್ಸ್
9. ರಾಹುಲ್ ದ್ರಾವಿಡ್
10. ವಿರಾಟ್ ಕೊಹ್ಲಿ.




