ರಣಜಿ ಟ್ರೋಫಿ: 22 ರನ್‌ಗೆ 4 ವಿಕೆಟ್ ಪತನ, ನಾಯಕ ಸ್ಮರಣ್ ಅಮೋಘ ಶತಕದಿಂದ ಕರ್ನಾಟಕಕ್ಕೆ ಆಸರೆ
ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ 22 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ, ರವಿಚಂದ್ರನ್ ಸ್ಮರಣ್ ಅವರ ಅಮೋಘ ಶತಕದ ನೆರವಿನಿಂದ 274 ರನ್ ಕಲೆಹಾಕಿದೆ. ದಿನದಂತ್ಯಕ್ಕೆ ಬೌಲಿಂಗ್‌ನಲ್ಲೂ ಮಿಂಚಿದ ಕರ...

ವಿಜಯವಾಡ: ರವಿಚಂದ್ರನ್ ಸ್ಮರಣ್ ಅವರು ಸಿಡಿಸಿದ ಅದ್ಭುತ ಶತಕದ ಬಲದಿಂದ, ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡವು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಿಂದ ಪಾರಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕರ್ನಾಟಕ, ಕೇವಲ 22 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ನಾಯಕ ಸ್ಮರಣ್ ಜವಾಬ್ದಾರಿಯುತ ಆಟವಾಡಿದ್ದರಿಂದ, ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್‌ಗಳನ್ನು ದಾಖಲಿಸಲು ಸಾಧ್ಯವಾಯಿತು.
ಕಳೆದ ಬಾರಿಯ ರನ್ನರ್-ಅಪ್ ಆಗಿರುವ ಕರ್ನಾಟಕ, ಮೊದಲ ದಿನದ ಅಂತ್ಯಕ್ಕೆ ಎದುರಾಳಿ ಆತಿಥೇಯ ತಂಡದ 2 ವಿಕೆಟ್‌ಗಳನ್ನು ಉರುಳಿಸಿದೆ. ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದ್ದರೂ, ಆರಂಭದಲ್ಲೇ ಮಯಾಂಕ್ ಅಗರ್‌ವಾಲ್ (5), ಕೆ.ವಿ.ಅನೀಶ್ (0), ಕೆ.ಎಲ್.ರಾಹುಲ್ (4) ಹಾಗೂ ಕರುಣ್ ನಾಯರ್ (8) ವಿಕೆಟ್‌ಗಳನ್ನು ಕರ್ನಾಟಕ ಕಳೆದುಕೊಂಡಿತು.
ರಾಜ್ಯ ತಂಡಕ್ಕೆ ಆಸರೆಯಾದ ನಾಯಕ ಸ್ಮರಣ್
ತಂಡವು ತೀವ್ರ ಒತ್ತಡದಲ್ಲಿದ್ದಾಗ ಸ್ಮರಣ್ ಮತ್ತು ಕೆ.ಎಲ್.ಶ್ರೀಜಿತ್ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿಯು 5ನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟವನ್ನು ನೀಡಿತು. 58 ರನ್ ಗಳಿಸಿದ್ದ ಶ್ರೀಜಿತ್ ವಿಕೆಟ್ ಒಪ್ಪಿಸಿದ ಬಳಿಕ, ಸ್ಮರಣ್ ಅವರು 8ನೇ ವಿಕೆಟ್‌ಗೆ ಮಾಧವ್ ಬಜಾಜ್ ಅವರೊಂದಿಗೆ ಸೇರಿ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು.
ತನ್ನ ಚೊಚ್ಚಲ ಪಂದ್ಯವನ್ನಾಡುತ್ತಿರುವ ಗುಲ್ಬರ್ಗಾದ ಮಾಧವ್, 33 ರನ್ ಬಾರಿಸಿ 59 ರನ್‌ಗಳ ಜೊತೆಯಾಟದಲ್ಲಿ ಸಾಥ್ ನೀಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 8ನೇ ಶತಕ ಪೂರೈಸಿದ ಸ್ಮರಣ್, 218 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ ಒಟ್ಟು 126 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಗೌರವಾನ್ವಿತ ಮೊತ್ತವನ್ನು ಕಲೆಹಾಕಿದ ನಂತರ ದಿನದ ಅಂತಿಮ ಅವಧಿಯಲ್ಲಿ 5 ಓವರ್‌ಗಳನ್ನು ಬೌಲಿಂಗ್ ಮಾಡಿದ ಕರ್ನಾಟಕ, 16 ರನ್ ನೀಡಿ ಆಂಧ್ರದ 2 ವಿಕೆಟ್‌ಗಳನ್ನು ಕಬಳಿಸಿತು. ಹೇಮಂತ್ ರೆಡ್ಡಿ 1 ರನ್ ಮತ್ತು ತ್ರಿಪುರಾಣ ವಿಜಯ್ 4 ರನ್‌ಗಳಿಗೆ ನಿರ್ಗಮಿಸಿದರು. ಸ್ಪಿನ್ನರ್‌ಗಳಾದ ಶಿಖರ್ ಶೆಟ್ಟಿ ಹಾಗೂ ಮಾಧವ್ ತಲಾ 1 ವಿಕೆಟ್ ಪಡೆದರು. ಆಂಧ್ರ ಇನ್ನೂ 258 ರನ್‌ಗಳ ಹಿನ್ನಡೆಯಲ್ಲಿದ್ದು, ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವತ್ತ ಗಮನ ಹರಿಸಿದೆ.
ಸ್ಕೋರ್: ಕರ್ನಾಟಕ 82.2 ಓವರಲ್ಲಿ 274/10 (ಸ್ಮರಣ್ 126, ಶ್ರೀಜಿತ್ 58, ಸೌರಭ್ 3-69), ಆಂಧ್ರ 1ನೇ ದಿನದಂತ್ಯಕ್ಕೆ 16/2
ಸರಣಿ ವೈಟ್‌ವಾಶ್‌ನಿಂದ ಪಾರಾದ ಭಾರತ ‘ಎ’ತಂಡ
ಪುದುಚೇರಿ: ಆಸ್ಟ್ರೇಲಿಯಾ ‘ಎ’ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 49 ರನ್‌ಗಳ ಗೆಲುವು ದಾಖಲಿಸುವ ಮೂಲಕ ಭಾರತ ‘ಎ’ ತಂಡವು ಸರಣಿ ವೈಟ್‌ವಾಶ್ ಮುಖಭಂಗದಿಂದ ಪಾರಾಗಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ‘ಎ’ ತಂಡವು 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಭಾರತ 47.3 ಓವರಲ್ಲಿ 275 ರನ್‌ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ 46.2 ಓವರಲ್ಲಿ 226 ರನ್‌ಗಳಿಗೆ ಸರ್ವಪತನ ಕಂಡಿತು.




