ಹ್ಯಾಟ್ರಿಕ್ ಹೀರೋ ಶಿವಣ್ಣ ಪಾರು – ಪಟಾಕಿ ಸ್ಫೋಟದಿಂದ ಆತಂಕ
ಚಿತ್ರದುರ್ಗ: ತಮ್ಮ ಬಹುನಿರೀಕ್ಷಿತ ಬೇಲ್(Bail) ಚಿತ್ರದ ಪ್ರಚಾರಾರ್ಥ ಕೋಟೆನಾಡು ಚಿತ್ರದುರ್ಗಕ್ಕೆ(Chitradurga) ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್(Shivarajkumar) ಅವರಿಗೆ ಅದ್ಧೂರಿ ಸ್ವಾಗತ ಕೋರುವ...


ಚಿತ್ರದುರ್ಗ: ತಮ್ಮ ಬಹುನಿರೀಕ್ಷಿತ ಬೇಲ್(Bail) ಚಿತ್ರದ ಪ್ರಚಾರಾರ್ಥ ಕೋಟೆನಾಡು ಚಿತ್ರದುರ್ಗಕ್ಕೆ(Chitradurga) ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್(Shivarajkumar) ಅವರಿಗೆ ಅದ್ಧೂರಿ ಸ್ವಾಗತ ಕೋರುವ ವೇಳೆ ಆತಂಕಕಾರಿ ಘಟನೆಯೊಂದು ನಡೆದಿದೆ. ಖಾಸಗಿ ಶೋರೂಂ ಬಳಿ ಅಭಿಮಾನಿಗಳು ಪಟಾಕಿ ಸಿಡಿಸುತ್ತಿದ್ದ ಸಂದರ್ಭದಲ್ಲಿ, ಶಿವಣ್ಣ ಅವರ ಎದುರೇ ಅನಿರೀಕ್ಷಿತವಾಗಿ ಪಟಾಕಿ ಬಾಕ್ಸ್ ಒಂದು ಸ್ಫೋಟಗೊಂಡಿದೆ.
ಶೋರೂಂ ಪ್ರವೇಶಿಸುತ್ತಿದ್ದ ವೇಳೆಯೇ ದಿಢೀರನೆ ಪಟಾಕಿ ಸಿಡಿದಿದ್ದು, ಅದರ ಕಿಡಿಗಳು ಶಿವರಾಜ್‌ಕುಮಾರ್ ಅವರ ಮೇಲೂ ಬಿದ್ದಿವೆ. ಕ್ಷಣಕಾಲ ಶಿವಣ್ಣ ಆಘಾತಕ್ಕೆ ಒಳಗಾದರಾದರೂ, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದ ಪರಿಣಾಮ ಕೆಲಕಾಲ ನೂಕುನುಗ್ಗಲು ಉಂಟಾಯಿತು.
ಘಟನೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದೊಂದು ಸಂಪೂರ್ಣ ಫ್ಯಾಮಿಲಿ ಎಂಟರ್‌ಟೈನರ್ ಎಂದರು. ಇದನ್ನೂ ಓದಿ: ನನ್ನ ಎಲಿಮಿನೇಷನ್‌ಗೆ ನಾನೇ ಕಾರಣ, ಆಟವನ್ನು ಗಂಭೀರವಾಗಿ ತಗೋಬೇಕಿತ್ತು: ಲಿಖಿತ್
ಸಿನಿಮಾವನ್ನು ಬಿಗ್ ಬಜೆಟ್, ಸ್ಮಾಲ್ ಬಜೆಟ್ ಎಂದು ಅಳೆಯಬಾರದು. ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ ಮಾತ್ರಕ್ಕೆ ಅದು ಗೆಲ್ಲುತ್ತದೆ ಎಂಬುದು ಸುಳ್ಳು. ಸಿನಿಮಾದ ಕಥೆ ಜನರಿಗೆ ಇಷ್ಟವಾಗಬೇಕು ಮತ್ತು ಕುಟುಂಬ ಸಮೇತರಾಗಿ ಕುಳಿತು ನೋಡುವಂತಿರಬೇಕು ಎಂದು ಹೇಳಿದರು.
ಕೇವಲ ದುಡ್ಡು ಸುರಿದರೆ ಸಿನಿಮಾ ಗೆಲ್ಲುತ್ತೆ ಅನ್ನೋದು ದೊಡ್ಡ ಭ್ರಮೆ. ಆ ಭ್ರಮೆಯಿಂದ ಹೊರಬಂದು ರಿಯಾಲಿಟಿಯಲ್ಲಿ ಬದುಕಬೇಕು. ಕೆಲವೊಮ್ಮೆ ಅತ್ಯುತ್ತಮ ಸಿನಿಮಾಗಳೂ ಸೋಲುತ್ತವೆ, ಅದಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸಿನಿಮಾ ಸರಳವಾಗಿ ಪ್ರೇಕ್ಷಕರಿಗೆ ಅರ್ಥವಾಗುವಂತಿರಬೇಕು ಎಂದರು.




