ಖಾಸಗಿ ಶಾಲೆಗೆ ಲಕ್ಷ ಲಕ್ಷ ಫೀಸ್ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್: ರೇಷನ್ ಕಾರ್ಡ್ ರದ್ದು ಮಾಡುವಂತೆ ಸಿಎಂಗೆ ಯುವಕನ ಪತ್ರ!
ಬೆಂಗಳೂರು: ಸರ್ಕಾರಿ ಶಾಲೆ ಬೇಡ, ಆದರೆ ಸರ್ಕಾರಿ ಯೋಜನೆಗಳು ಬೇಕೇ ಬೇಕು! ಇದು, ಅದೆಷ್ಟೋ ಜನರ ಆಸೆ, ಹಾಗಾಗಿಯೇ, ಲಕ್ಷಾಂತರ ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರ...

ಬೆಂಗಳೂರು: ಸರ್ಕಾರಿ ಶಾಲೆ ಬೇಡ, ಆದರೆ ಸರ್ಕಾರಿ ಯೋಜನೆಗಳು ಬೇಕೇ ಬೇಕು! ಇದು, ಅದೆಷ್ಟೋ ಜನರ ಆಸೆ, ಹಾಗಾಗಿಯೇ, ಲಕ್ಷಾಂತರ ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಆದರೆ, ಈಗ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬಂದಿದೆ. ಅದರಂತೆ, ಖಾಸಗಿ ಶಾಲೆಗಳಿಗೆ ಲಕ್ಷ ಲಕ್ಷ ರೂಪಾಯಿ ಶುಲ್ಕ ನೀಡಿ ಮಕ್ಕಳನ್ನು ಓದಿಸುವ ಬಿಪಿಎಲ್ ಕಾರ್ಡ್‌ದಾರರ ರೇಷನ್ ಕಾರ್ಡ್‌ಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹೊಸನಗರದ ಯುವಕನೊಬ್ಬ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ಯುವಕನ ವಾದವೇನು?
ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಮತ್ತು ಫೀಸ್ ಕಟ್ಟಿ ಮಕ್ಕಳನ್ನು ಓದಿಸಲು ಶಕ್ತರಾಗಿರುವ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಅವರು ಹೇಗೆ ಬಡತನ ರೇಖೆಗಿಂತ ಕೆಳಗಿನವರು ಆಗಲು ಸಾಧ್ಯ ಎಂದು ಯುವಕ ಪ್ರಶ್ನಿಸಿದ್ದಾನೆ. ಜೊತೆಗೆ, ಇಂತಹ ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ಪರಿಶೀಲಿಸಿ ರದ್ದುಗೊಳಿಸಿದರೆ, ಉಚಿತ ರೇಷನ್ ಮತ್ತು ಸರ್ಕಾರದ ಸೌಲಭ್ಯಗಳು ನಿಜವಾದ ಬಡ ಕುಟುಂಬಗಳಿಗೆ ತಲುಪುತ್ತವೆ. ಜೊತೆಗೆ, ಈ ಕ್ರಮದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಪ್ರೇರೇಪಿತರಾಗುತ್ತಾರೆ ಹಾಗೂ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ ಎಂಬುದು ಯುವಕನ ಆಶಯವಾಗಿದೆ.
ಮೊಬೈಲ್‌ನಲ್ಲಿ e-KYC ಮಾಡಿದರೆ ಮಾನ್ಯವಲ್ಲ; Ration Card ಬಳಕೆದಾರಿಗೆ ಆಹಾರ ಇಲಾಖೆ ಖಡಕ್ ಎಚ್ಚರಿಕೆ
ಏತನ್ಮಧ್ಯೆ, ಈ ಪತ್ರ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಲ್ಲಿ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವು ಜನರು ಯುವಕನ ಸಲಹೆಯನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು "ಬಡ ಕುಟುಂಬಗಳ ಮಕ್ಕಳು ಕಷ್ಟಪಟ್ಟು ಖಾಸಗಿ ಶಾಲೆಯಲ್ಲಿ ಓದಬಾರದೇ? ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದ ಕಾರಣಕ್ಕೆ ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುತ್ತಾರೆ, ಹಾಗಂದ ಮಾತ್ರಕ್ಕೆ ಅವರ ಕಾರ್ಡ್ ರದ್ದು ಮಾಡುವುದು ತಪ್ಪು" ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.




