ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಭಾರತ

ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿರುವ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೆರವಿನೊಂದಿಗೆ 'ಮತ ಕಳ್ಳತನ' ನಡೆಸಿ ದೇಶವನ್ನು ತಮ್ಮ...

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿರುವ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ; ರಾಹುಲ್ ಗಾಂಧಿ
ಹಂಚಿಕೊಳ್ಳಿ:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಸಹಕಾರದೊಂದಿಗೆ 'ಮತ ಕಳ್ಳತನ' ಮಾಡುವ ಮೂಲಕ ರಾಷ್ಟ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ದೂರಿದ್ದಾರೆ.

'ದೇಶದ್ರೋಹ' ಎಸಗಿದ ಕಾರಣಕ್ಕಾಗಿ ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಯಾರೊಬ್ಬರೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಗಾಂಧಿ ತಿಳಿಸಿದ್ದಾರೆ.

ಬಿಜೆಪಿ ಏನು ಹೇಳುತ್ತದೆ ಎಂಬುದರಲ್ಲಿ ನನಗೆ ಆಸಕ್ತಿಯಿಲ್ಲ. ನಾನು ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಇಲ್ಲಿ ಬಂದಿದ್ದೇನೆ. ನನ್ನೊಂದಿಗೆ 300 ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ಇದ್ದರು, ಅವರು ಕೂಡ ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಯತ್ನದಲ್ಲಿದ್ದಾರೆ ಎಂದು ಅವರು ನುಡಿದರು.

ಚುನಾವಣಾ ಆಯೋಗದ ಕಚೇರಿಗೆ ತೆರಳಲು ಯತ್ನಿಸಿದಾಗ ಪೊಲೀಸರೊಂದಿಗೆ ವಾಗ್ವಾದ ನಡೆದಿದ್ದರಿಂದ, ಆಕಾಶವಾಣಿ ಭವನದ ಆವರಣದಿಂದಲೇ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗಾಣಿಸಿದ್ದಾರೆ. ಇಡೀ ದೇಶ ಇದನ್ನು ನಂಬಿದೆ. ದೇಶದ ಯುವಜನತೆಯೂ ಇದನ್ನು ನಂಬಿದ್ದಾರೆ. ನನ್ನನ್ನು ತಡೆದ ಪೊಲೀಸರು ಕೂಡ ಇದನ್ನೇ ಹೇಳುತ್ತಿದ್ದಾರೆ. ಸತ್ಯ ಎಲ್ಲರಿಗೂ ತಿಳಿದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ನುಡಿದರು.

ಪ್ರಧಾನಿ ಮೋದಿ, ಶಾ ಮತ್ತು ಭಾಗವತ್ ಅವರು 'ಮತ ಕಳ್ಳತನ'ದ ಮೂಲಕ ದೇಶವನ್ನು ವಶಪಡಿಸಿಕೊಂಡಿದ್ದಾರೆ. ಜ್ಞಾನೇಶ್ ಕುಮಾರ್ ಅವರು ಇದಕ್ಕೆ ಸಾಥ್ ನೀಡಿದರು ಎಂದು ಅವರು ಆರೋಪಿಸಿದರು.

ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಧಾನಿ ಮೋದಿ, ಗೃಹ ಸಚಿವ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅಥವಾ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ - ಇವರಲ್ಲಿ ಯಾರನ್ನೂ ಬಿಡುವುದಿಲ್ಲ. ನಮ್ಮ ದೇಶಕ್ಕೆ ಮಾಡಿರುವ ಈ ಕೆಲಸ ದೇಶದ್ರೋಹದ ಕೃತ್ಯವಾಗಿದೆ. ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಇದಕ್ಕೂ ಮುನ್ನ, 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಗಾಂಧಿ, ವಿರೋಧ ಪಕ್ಷದ 300ಕ್ಕೂ ಹೆಚ್ಚು ಸಂಸದರು ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಸಂಸತ್ತಿನಿಂದ ಮೆರವಣಿಗೆ ಹೊರಟಿದ್ದೆವು. ನಾವು ಕೋಟ್ಯಂತರ ಭಾರತೀಯರ ಪ್ರತಿನಿಧಿಗಳು. ಚುನಾವಣಾ ಆಯುಕ್ತರು ನಮ್ಮನ್ನು ಏಕೆ ಭೇಟಿಯಾಗುತ್ತಿಲ್ಲ? ಪೊಲೀಸರು ನಮ್ಮನ್ನು ತಡೆದು ಏಕೆ ಬೆದರಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದರು.

ಮಂಗಳವಾರ ಸಂಸತ್ ಭವನದ ರಸ್ತೆಯಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ನಡೆದ 'ಇಂಡಿಯಾ' (INDIA) ಮೈತ್ರಿಕೂಟದ ಮೆರವಣಿಗೆಯಲ್ಲಿ ತೀವ್ರ ನಾಟಕೀಯ ಸನ್ನಿವೇಶಗಳು ಕಂಡುಬಂದವು; ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತರ ಕೆಲವರೊಂದಿಗೆ ಚುನಾವಣಾ ಆಯೋಗದ ಕಚೇರಿ ತಲುಪುವ ಸಲುವಾಗಿ ಆಕಾಶವಾಣಿ ಭವನದ ಆವರಣದೊಳಗೆ ಪ್ರವೇಶಿಸಿದರು.

ಪೊಲೀಸರು ಮೆರವಣಿಗೆಯನ್ನು ತಡೆದ ನಂತರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಓ'ಬ್ರಿಯನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆಯಲಾಯಿತು.

ಮುಖ್ಯ ಚುನಾವಣಾ ಆಯುಕ್ತರ (CEC) ರಾಜೀನಾಮೆಗೆ ಆಗ್ರಹಿಸಿ ಮೆರವಣಿಗೆ ನಡೆಸುತ್ತಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಗೂ ಇತರ ಸಂಸದರನ್ನು, ಭದ್ರತಾ ಸಿಬ್ಬಂದಿ ಸಂಸತ್ ರಸ್ತೆಯಲ್ಲಿರುವ ಆಕಾಶವಾಣಿ ಭವನ ಮತ್ತು ನೀತಿ ಆಯೋಗದ ಕಚೇರಿಯ ಮುಂದೆ ತಡೆದಿದ್ದರು.

ಹಂಚಿಕೊಳ್ಳಿ: