ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಕರ್ನಾಟಕ

ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್‌ಗೆ ಕರ್ನಾಟಕ ರತ್ನ ಪ್ರಶಸ್ತಿಗಾಗಿ ಸರಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪತ್ರ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

· 1 ನಿಮಿಷ ಓದು· ಮಂಡ್ಯ
ಮಂಡ್ಯದ ಗಂಡು ಅಂಬರೀಶ್‌ಗೆ ಸಿಗುತ್ತಾ ಕರ್ನಾಟಕ ರತ್ನ? ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪತ್ರ
ಹಂಚಿಕೊಳ್ಳಿ:

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ಸಮಾಜಕ್ಕೆ ಅಂಬರೀಶ್ ಅವರು ನೀಡಿರುವ ಅಪ್ರತಿಮ ಕೊಡುಗೆ, ಅವರ ಜನಪ್ರಿಯತೆ ಮತ್ತು ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಮರಣೋತ್ತರವಾಗಿ ಘೋಷಿಸಬೇಕು ಎಂದು ಲಿಖಿತವಾಗಿ ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪತ್ರದಲ್ಲಿ ಏನಿದೆ?

ಕನ್ನಡ ಚಿತ್ರರಂಗದ ದಿವಂಗತ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಈ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ,  "ಅಂಬರೀಶ್ ಅವರು ಕೇವಲ ಒಬ್ಬ ಅದ್ಭುತ ನಟರಾಗಿ ಮಾತ್ರವಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ, ಜನಪ್ರಿಯ ರಾಜಕಾರಣಿಯಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕಾವೇರಿ ನೀರಾವರಿ ಹೋರಾಟದ ಸಂದರ್ಭದಲ್ಲಿ ಅವರು ಮಂಡ್ಯದ ಜನರ ಹಿತಕ್ಕಾಗಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಿದ ಮಹಾನ್ ನಾಯಕ. ಚಿತ್ರರಂಗ ಮತ್ತು ಸಮಾಜಕ್ಕೆ ಅವರು ಸಲ್ಲಿಸಿದ ನಿರುಪಮಾನ ಸೇವೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು" ಎಂದು ವಿನಂತಿಸಿದ್ದಾರೆ.

ಮುಂದುವರೆದು, ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ. ಅಂಬರೀಶ್ ಅಭಿಮಾನಿಗಳ ಸಂಘ ಸಲ್ಲಿಸಿರುವ ಮನವಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ಸಚಿವ ರಾಮಲಿಂಗಾರೆಡ್ಡಿ, ಅಂಬರೀಶ್ ಅವರ ಸೇವೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಪುರಸ್ಕರಿಸಿ ಮುಂಬರುವ ಕನ್ನಡ ರಾಜ್ಯೋತ್ಸವ ಅಥವಾ ಯಾವುದೇ ಸೂಕ್ತ ಸಂದರ್ಭದಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಬೇಕು ಎಂದು ಕೋರಿದ್ದಾರೆ. ಸಚಿವರ ಈ ನಡೆಗೆ ಅಂಬಿ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಏತನ್ಮಧ್ಯೆ, ಈ ಹಿಂದೆ ಹಿರಿಯ ನಟಿ ತಾರಾ ಅನುರಾಧ ಅವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಖುದ್ದಾಗಿ ಭೇಟಿಯಾಗಿ ಅಂಬರೀಶ್ ಅವರಿಗೆ ಪ್ರಶಸ್ತಿ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದರು.

ಹಂಚಿಕೊಳ್ಳಿ: