ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಭಾರತ

ಕಾವೇರಿ ಜಲ ವಿವಾದ: ಪ್ರತಿಬಾರಿಯೂ ತಮಿಳುನಾಡು ಸಮಸ್ಯೆ ಹೇಳುತ್ತಿದೆ ಎಂದ ಸುಪ್ರೀಂಕೋರ್ಟ್

ಕಾವೇರಿ ನೀರು ಬಿಡುಗಡೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರತಿಬಾರಿಯೂ ತಮಿಳುನಾಡು ಸಮಸ್ಯೆಗಳನ್ನೇ ಹೇಳುತ್ತಿದೆ ಎಂದು ಅಭಿಪ್ರಾಯಪಟ್ಟು ತೀರ್ಪನ್ನು ಕಾಯ್ದಿರಿಸಿದೆ. ತಮಿಳುನಾಡು...

· ಬೆಂಗಳೂರು ನಗರ
‘ಪ್ರತಿಬಾರಿಯೂ ತಮಿಳುನಾಡು ಸಮಸ್ಯೆ ಹೇಳುತ್ತಿದೆ’: ಕಾವೇರಿ ಜಲ ವಿವಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್​
ಹಂಚಿಕೊಳ್ಳಿ:

ನವದೆಹಲಿ, ಅಕ್ಟೋಬರ್​​ 12: ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಸುಪ್ರೀಂಕೋರ್ಟ್​​ನಲ್ಲಿ ಇಂದು ಜರುಗಿತು. ನಿಗದಿತ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡು ಆರೋಪಿಸಿದ್ದು, CWMA ಆದೇಶದ ಪ್ರಕಾರ ಬಾಕಿ ಇರುವ ನೀರನ್ನು ಹರಿಸುವಂತೆ ಕೋರಿದೆ. ಇದಕ್ಕೆ ಪ್ರತಿಯಾಗಿ, ಜಲಾಶಯಗಳಲ್ಲಿ ನೀರಿನ ಕೊರತೆ ಇದೆ ಎಂದು ನ್ಯಾ.ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಕರ್ನಾಟಕ ಸರ್ಕಾರ ವಿವರಿಸಿದೆ. ಕಳೆದ ಬಾರಿ ವಿಚಾರಣೆ ನಡೆದಾಗ CWMA ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್​​ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಮಿಳುನಾಡಿನ ವಾದವೇನು?

ತಮಿಳುನಾಡು ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಾ, ಎಲ್‌ನಿನೋ ಕಾರಣದಿಂದಾಗಿ ಇದು ಮಳೆ ಕೊರತೆಯ ವರ್ಷವಾಗಿದೆ ಎಂದು ತಿಳಿಸಿದರು. ನೀರಿಲ್ಲದೆ ಬೆಳೆಗಳು ಒಣಗುತ್ತಿವೆ ಎಂದು ಹೇಳಿದ ಅವರು, ಜುಲೈ ತಿಂಗಳಿನಿಂದ ಇಲ್ಲಿಯವರೆಗೆ 11 ಟಿಎಂಸಿ ನೀರನ್ನು ಕಡಿಮೆ ಹರಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪೀಠ, ಹಿಂದೆಲ್ಲಾ ಮಂಡಳಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ನೀರು ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನು ನೀಡಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ತಮಿಳುನಾಡು ಪರ ವಕೀಲರು, 3 ಸಾವಿರ ಕ್ಯೂಸೆಕ್ ನೀರು ಬಿಡುವುದು ಮುಖ್ಯವಲ್ಲ, ಬಾಕಿ ಇರುವ 11 ಟಿಎಂಸಿ ನೀರನ್ನು ಹರಿಸುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು. ನೀರು ಹೆಚ್ಚುವರಿಯಾಗಿದ್ದರೆ ಮಾತ್ರ ಬಾಕಿ ನೀರನ್ನು ಬಿಡಲು ಸಾಧ್ಯ, ಹೆಚ್ಚುವರಿ ನೀರು ಇಲ್ಲದಿದ್ದಾಗ ಬಾಕಿ ನೀರನ್ನು ಬಿಡುವುದು ಹೇಗೆ ಎಂದು ಕೋರ್ಟ್​​ ಮರುಪ್ರಶ್ನಿಸಿತು. ಈ ವೇಳೆ ಮಳೆ ಕೊರತೆಯಿದ್ದಾಗ ಕೊಡಬೇಕಾದ ನೀರನ್ನೂ ನೀಡಿಲ್ಲ ಎಂದು ತಮಿಳುನಾಡು ಕೋರ್ಟ್​​ಗೆ ತಿಳಿಸಿತು.

LIVE TV

ಕರ್ನಾಟಕದ ವಾದವೇನು?

ಕರ್ನಾಟಕದ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸುತ್ತಾ, CWRC ಮತ್ತು CWMA ಎರಡೂ ಸಂಸ್ಥೆಗಳಲ್ಲಿ ತಜ್ಞ ಅಧಿಕಾರಿಗಳಿದ್ದಾರೆ ಎಂದು ಹೇಳಿದರು. ಎರಡೂ ರಾಜ್ಯಗಳ ಪ್ರತಿನಿಧಿಗಳ ವಾದವನ್ನು ಆಲಿಸಿದ ನಂತರವೇ ಅವರು ತೀರ್ಮಾನ ಕೈಗೊಂಡಿದ್ದಾರೆ ಎಂದು ವಿವರಿಸಿದರು. ಈ ವರ್ಷ ಕರ್ನಾಟಕಕ್ಕೆ ಅತ್ಯಂತ ಕಷ್ಟಕರವಾದ ಬರಗಾಲದ ವರ್ಷವಾಗಿದೆ. ಅಣೆಕಟ್ಟುಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ರೈತರು ಬೆಳೆ ಬೆಳೆಯದಂತೆ ಮನವಿ ಮಾಡಿಕೊಳ್ಳಲಾಗಿದೆ. ಒಟ್ಟು 57 ಟಿಎಂಸಿ ನೀರಿನಲ್ಲಿ 45 ಟಿಎಂಸಿ ನೀರು ಬೆಂಗಳೂರು ಮತ್ತು ಮೈಸೂರು ನಗರಗಳ ಕುಡಿಯುವ ನೀರಿನ ಅಗತ್ಯಕ್ಕೆ ಬೇಕಿದೆ ಎಂದು ತಿಳಿಸಿದರು. ಕರ್ನಾಟಕಕ್ಕೆ ಮಳೆ ತರುವ ನೈಋತ್ಯ ಮಾನ್ಸೂನ್ ಮುಕ್ತಾಯಗೊಂಡಿದೆ, ಆದರೆ ತಮಿಳುನಾಡಿಗೆ ಈಶಾನ್ಯ ಮಾರುತಗಳಿಂದ ಮಳೆ ಬರುವ ಸಾಧ್ಯತೆಗಳಿವೆ. CWMA ಸೂಚನೆಯಂತೆ ಕರ್ನಾಟಕ ನೀರು ಬಿಡುತ್ತಿದ್ದು, 2000 ಕ್ಯೂಸೆಕ್ಸ್ ಮಾತ್ರ ಬಿಡಲು ಸಾಧ್ಯ ಎಂದು ಕರ್ನಾಟಕ ಹೇಳಿತ್ತು. ಆದರೆ CWMA 3000 ಕ್ಯೂಸೆಕ್ಸ್ ನೀರು ಬಿಡಲು ಆದೇಶಿಸಿದೆ, ನಾವು ನೀರು ಬಿಡುತ್ತಿದ್ದೇವೆ ಎಂದು ಕರ್ನಾಟಕ ತನ್ನ ವಾದ ಮಂಡಿಸಿತು. ಈ ವೇಳೆ ತಮಿಳುನಾಡು ಪ್ರತಿಬಾರಿಯೂ ಸಮಸ್ಯೆಗಳನ್ನು ಹೇಳುತ್ತಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್​​, ಅರ್ಜಿಗಳ ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೆ, ತಮಿಳುನಾಡು ರೈತರ ಪರ ವಕೀಲರ ವಾದವನ್ನು ಆಲಿಸಲು ನ್ಯಾಯಾಲಯ ನಿರಾಕರಿಸಿತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಹಂಚಿಕೊಳ್ಳಿ: