ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಭಾರತ

ಕೊಲ್ಲಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಕಣಿವೆಗೆ ತಳ್ಳಿ ಕೊಲೆಗೈದ ಬಾಯ್​ಫ್ರೆಂಡ್​!

ಕೊಲ್ಲಾಪುರ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ, ಯುವಕನೊಬ್ಬ ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಜಲಪಾತವೊಂದರ ಸಮೀಪವಿರುವ ಆಳವಾದ ಕಂದಕಕ್ಕೆ ತಳ್ಳಿ ಕೊಲೆಗೈದ ಘಟನೆ ನಡೆದಿದೆ.ಆರಂಭದಲ್ಲಿ ಯುವತಿ ನಾಪ...

ಕೊಲ್ಲಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಕಣಿವೆಗೆ ತಳ್ಳಿ ಕೊಲೆಗೈದ ಬಾಯ್​ಫ್ರೆಂಡ್​!
ಹಂಚಿಕೊಳ್ಳಿ:

ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ, ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಜಲಪಾತದ ಬಳಿಯಿರುವ ಆಳವಾದ ಕಂದಕಕ್ಕೆ ತಳ್ಳಿ ಹತ್ಯೆಗೈದ ಘಟನೆ ವರದಿಯಾಗಿದೆ.

ಈ ಪ್ರಕರಣದಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.

ಪ್ರಕರಣವನ್ನು ಭೇದಿಸಿರುವ ಪೊಲೀಸರು, ನಾಯ್ಕವಾಡಿ ಜಲಪಾತದ ಸಮೀಪದ ಕಂದಕದಿಂದ ತರನ್ನಮ್ ಎಂಬ ಯುವತಿಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಬಾಯ್ ಫ್ರೆಂಡ್, ಶ್ರೀಪಾದ್ ವದಾರ್(25) ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 9 ರಂದು ಭುದರಗಢ ತಾಲೂಕಿನ ಪಾಟ್ಗಾಂವ್ ಗ್ರಾಮದ ಹತ್ತಿರವಿರುವ ಪ್ರವಾಸಿ ತಾಣಕ್ಕೆ ಶ್ರೀಪಾದ್ ವದಾರ್, ತರನ್ನಮ್ ಅವರನ್ನು ಕರೆದೊಯ್ದಿದ್ದಾಗ ಈ ಕೃತ್ಯ ನಡೆದಿದೆ ಎಂದು ಭುದರಗಢ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೀಪ್ ಜಗತಾಪ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಗಾರ್ಗೋಟಿ ಪಟ್ಟಣದ ನಿವಾಸಿಗಳಾದ ಇವರಿಬ್ಬರೂ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ನಾಲ್ಕು ತಿಂಗಳ ಹಿಂದೆ ತರನ್ನಮ್‌ಗೆ ವಿವಾಹ ನಿಶ್ಚಯವಾಗಿದ್ದರಿಂದ ಆಕೆ ಶ್ರೀಪಾದ್ ವದಾರ್‌ನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.

ಆಕೆಯ ವರ್ತನೆಯಿಂದ ಕುಪಿತಗೊಂಡಿದ್ದ ಶ್ರೀಪಾದ್ ವದಾರ್, ಮದುವೆಗೆ ಮುನ್ನ ಕೊನೆಯ ಬಾರಿ ಭೇಟಿಯಾಗೋಣ ಎಂದು ಆಕೆಯನ್ನು ಈ ಸ್ಥಳಕ್ಕೆ ಕರೆದೊಯ್ದಿದ್ದನು. ಈ ವೇಳೆ ಶ್ರೀಪಾದ್ ವದಾರ್ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದನು. ಆದರೆ ಆಕೆ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ನಂತರ ಆಕೆಯನ್ನು ಕಂದಕಕ್ಕೆ ತಳ್ಳಿದ್ದಾನೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಂತರ ಮನೆಗೆ ಹಿಂದಿರುಗಿದ ಆತ, ತರನ್ನಮ್ ನಾಪತ್ತೆಯಾಗಿದ್ದಾಳೆ ಎಂದು ತನ್ನ ಕುಟುಂಬದವರ ಬಳಿ ಹೇಳಿಕೊಂಡಿದ್ದನು.

ಮೊದಲಿಗೆ ಇದು ನಾಪತ್ತೆ ಪ್ರಕರಣದಂತೆ ಕಂಡುಬಂದರೂ, ಆರೋಪಿ ನೀಡಿದ ಹೇಳಿಕೆಯಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ ಪೊಲೀಸರು, ತೀವ್ರ ವಿಚಾರಣೆ ನಡೆಸಿದಾಗ ಆತ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ತಾನು ಸಂತ್ರಸ್ತೆಯನ್ನು ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಹಂಚಿಕೊಳ್ಳಿ: