ಉಡುಪಿ: ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ – ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲು
ಕೌಟುಂಬಿಕ ಕಲಹ ವರದಕ್ಷಿಣೆ ಕಿರುಕುಳ ಆರೋಪ ಪತಿ ಹಾಗೂ ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲು

ಉಡುಪಿ: ಮಹಿಳೆಯೊಬ್ಬರಿಗೆ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಡೊಂಗರಕೇರಿಯ ಶ್ರೀಮತಿ ಮೇಘನಾ (37) ಅವರು ನೀಡಿದ ದೂರಿನ ಪ್ರಕಾರ, 2022ರ ಏಪ್ರಿಲ್ 25ರಂದು ಮಂಗಳೂರಿನ ಸಾಯಿ ಪ್ಯಾಲೇಸ್ನಲ್ಲಿ ಪ್ರಣಾಮ್ ಎಂಬವರೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಬಳಿಕ 2022ರ ಸೆಪ್ಟೆಂಬರ್ 5ರಂದು ಕುದ್ರೋಳಿ ಗೋಕರ್ಣನಾಥೇಶ್ವರ ಸಭಾಭವನದಲ್ಲಿ ವಿವಾಹ ನೆರವೇರಿದ್ದು, ಸೆಪ್ಟೆಂಬರ್ 7ರಂದು ಟಿ.ಎಂ.ಎ. ಪೈ ಹಾಲ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು ಎನ್ನಲಾಗಿದೆ.
ಮದುವೆಯ ಖರ್ಚು ವೆಚ್ಚಗಳಿಗಾಗಿ ಸುಮಾರು ₹13 ಲಕ್ಷವನ್ನು ತಮ್ಮ ತಾಯಿಯವರೇ ಭರಿಸಿದ್ದರು ಎಂದು ಪಿರ್ಯಾದಿದಾರರು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ತವರು ಮನೆಯವರು ಪತಿ ಪ್ರಣಾಮ್ ಅವರಿಗೆ ವಜ್ರದ ಉಂಗುರ, ಚಿನ್ನದ ಸರ ಹಾಗೂ ಚಿನ್ನದ ಬ್ರಾಸ್ಲೈಟ್ ಅನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಮದುವೆಯ ನಂತರ ಮಲ್ಪೆಯಲ್ಲಿರುವ ಪತಿಯ ಮನೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಪತಿ ಪ್ರಣಾಮ್ ಅವರು ವಿನಾಕಾರಣ ಜಗಳವಾಡಿ, ಅವಾಚ್ಯವಾಗಿ ನಿಂದಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಪತಿಯ ತಂದೆ ನಾರಾಯಣ ಶೆಟ್ಟಿ ಹಾಗೂ ತಾಯಿ ಶಶಿಕಲಾ ಅವರು ಇದಕ್ಕೆ ಪ್ರಚೋದನೆ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಪತಿಯೊಂದಿಗೆ ವಿದೇಶದಲ್ಲಿದ್ದ ಸಂದರ್ಭದಲ್ಲಿಯೂ ಪತಿ ಕೈಯಿಂದ ಹಲ್ಲೆ ನಡೆಸಿ, ನಿಂದಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು ಎಂದು ಮೇಘನಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆ (IPC) ಕಲಂ 498A, 323, 504 ಜೊತೆಗೆ 34ರ ಪ್ರಕಾರ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಪೊಲೀಸರ ತನಿಖೆಯ ನಂತರ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.




