ಪಡುಬಿದ್ರಿ: ಬಪ್ಪನಾಡು ದೇವಸ್ಥಾನಕ್ಕೆಂದು ತೆರಳಿದ್ದ ವ್ಯಕ್ತಿ ನಾಪತ್ತೆ
ಪಡುಬಿದ್ರಿ ಸಮೀಪದ ಹೆಜಮಾಡಿ ಗ್ರಾಮದ ನಿವಾಸಿ ವಿಶ್ವನಾಥ ಎಂಬುವವರು ನಾಪತ್ತೆಯಾಗಿದ್ದು, ಈ ಸಂಬಂಧ ಅವರ ಸಹೋದರ ಮಾಧವ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, 48 ವರ್ಷದ ವಿಶ್ವ...

ಪಡುಬಿದ್ರಿ ಸಮೀಪದ ಹೆಜಮಾಡಿ ಗ್ರಾಮದ ನಿವಾಸಿ ವಿಶ್ವನಾಥ ಎಂಬುವವರು ನಾಪತ್ತೆಯಾಗಿದ್ದು, ಈ ಸಂಬಂಧ ಅವರ ಸಹೋದರ ಮಾಧವ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, 48 ವರ್ಷದ ವಿಶ್ವನಾಥ ಅವರು ಹುಟ್ಟಿನಿಂದಲೂ ಬುದ್ಧಿಮಾಂದ್ಯರಾಗಿದ್ದು, ತಮ್ಮ ಅಣ್ಣನ ಮನೆಯಲ್ಲಿಯೇ ವಾಸವಾಗಿದ್ದರು. ದಿನಾಂಕ 30/10/2026 ರಂದು ಬೆಳಿಗ್ಗೆ 11 ಗಂಟೆಗೆ ತಾನು ಮುಲ್ಕಿಯ ಬಪ್ಪನಾಡು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟವರು ವಾಪಾಸು ಬಂದಿರುವುದಿಲ್ಲ.
ವಿಶ್ವನಾಥ ಅವರು ಯಾವುದೇ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಈ ಹಿಂದೆಯೂ ಅವರು ಮನೆಬಿಟ್ಟು ಹೋಗಿ ಕೆಲವು ದಿನಗಳ ಬಳಿಕ ವಾಪಾಸು ಬಂದಿದ್ದರಿಂದ, ಈ ಬಾರಿಯೂ ಅದೇ ರೀತಿ ಮರಳಿ ಬರಬಹುದು ಎಂದು ಭಾವಿಸಿ ಆರಂಭದಲ್ಲಿ ದೂರು ನೀಡಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಸಂಬಂಧಿಕರ ಮನೆಗಳು ಸೇರಿದಂತೆ ಎಲ್ಲಾ ಕಡೆ ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ. ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಈಗ ದೂರು ನೀಡಲಾಗಿದೆ.
ಈ ಪ್ರಕರಣವು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 134/2026 ರ ಅಡಿಯಲ್ಲಿ ಗಂಡಸು ಕಾಣೆಯಾದ ಬಗ್ಗೆ ಪ್ರಕರಣವಾಗಿ ದಾಖಲಾಗಿದೆ.
ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
ಪಡುಬಿದ್ರಿ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 134/2026




