ಲೇಸರ್ ಸುನ್ನತ್ ಬದಲು ಸಾಮಾನ್ಯ ಶಸ್ತ್ರಚಿಕಿತ್ಸೆ: ವೈದ್ಯನ ಯಡವಟ್ಟಿನಿಂದ ಬಾಲಕನ ನರಳಾಟ!
ಬೆಂಗಳೂರಿನ ಫ್ರೇಜರ್ ಟೌನ್ ಆಸ್ಪತ್ರೆಯಲ್ಲಿ ಲೇಸರ್ ಶಸ್ತ್ರಚಿಕಿತ್ಸೆ ನೀಡುವುದಾಗಿ ನಂಬಿಸಿ, 12 ವರ್ಷದ ಬಾಲಕನಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಬಾಲಕ ತೀವ್ರ ನೋವಿನ...


ಬೆಂಗಳೂರು, ಅಕ್ಟೋಬರ್ 13: ನಗರದ 12 ವರ್ಷದ ಬಾಲಕನಿಗೆ ಲೇಸರ್ ಸುನ್ನತ್ ಮಾಡಿಸುವುದಾಗಿ ನಂಬಿಸಿ, ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯನೊಬ್ಬ ವಂಚಿಸಿರುವ ಘಟನೆ ನಡೆದಿದೆ. ಈಗ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದ್ದು, ಫ್ರೇಜರ್ ಟೌನ್‌ನ ‘ನ್ಯೂ ಹೋಪ್ ಸೆಕ್ಸಾಲಜಿಸ್ಟ್ ಅಂಡ್ ಇನ್‌ಫರ್ಟಿಲಿಟಿ ಆಸ್ಪತ್ರೆ’ಯ ವೈದ್ಯ ಡಾ. ರಿಯಾಜ್ ವಿರುದ್ಧ ಬಾಲಕನ ಪೋಷಕರು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಲೇಸರ್ ಸುನ್ನತ್ ಬಗ್ಗೆ ನೋಡಿದ್ದ ತಂದೆ
ಚಿಕ್ಕಮಗಳೂರು ಮೂಲದ ತಬ್ರೇಜ್ ಖಾನ್ ಹಾಗೂ ಗಫಾರ್ ದಂಪತಿಯ 12 ವರ್ಷದ ಮಗನಿಗೆ ಈ ಅಚಾತುರ್ಯ ಸಂಭವಿಸಿದೆ. ಬಾಲಕನು ಚಿಕ್ಕಂದಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಮಗುವಿಗೆ ಮೂರು ತಿಂಗಳಿದ್ದಾಗಲೇ ಹೃದಯ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಈ ಕಾರಣದಿಂದಾಗಿ ಇದುವರೆಗೂ ಸುನ್ನತ್ ಮಾಡಿಸಿರಲಿಲ್ಲ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೇಸರ್ ಸುನ್ನತ್ ಬಗ್ಗೆ ನೋಡಿದ್ದ ತಬ್ರೇಜ್ ಖಾನ್, ಮಗನಿಗೆ ನೋವುರಹಿತ ಲೇಸರ್ ಚಿಕಿತ್ಸೆ ಮಾಡಿಸಬಹುದಲ್ಲ ಎಂದು ಯೋಚಿಸಿದ್ದರು. ಈ ಬಗ್ಗೆ ಬೆಂಗಳೂರಿನ ವೈದ್ಯ ಡಾ. ರಿಯಾಜ್ ಅವರನ್ನು ಸಂಪರ್ಕಿಸಿದ್ದರು. ಪೋಷಕರ ಮನವಿಯಂತೆ ಬಾಲಕನಿಗೆ ಲೇಜರ್ ಸುನ್ನತ್ ಮಾಡುತ್ತೇನೆಂದು ವೈದ್ಯ ಕೂಡ ನಂಬಿಸಿದ್ದ.
LIVE TV
ಹಣ ಪಡೆದು ಯಾಮಾರಿಸಿದ ಡಾಕ್ಟರ್, ಬಾಲಕನ ನರಳಾಟ
ಅದರಂತೆ ಶನಿವಾರ (ಅ.10) ಚಿಕ್ಕಮಗಳೂರಿಂದ ಬೆಂಗಳೂರಿಗೆ ಆಗಮಿಸಿದ್ದ ಪೋಷಕರು ಮಗುವಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಆಪರೇಷನ್ಗೂ ಮುಂಚೆ ಪೋಷಕರಿಂದ 19 ಸಾವಿರ ರೂ. ಪಡೆದಿದ್ದರು. ಹಣ ಪಡೆದ ಮೇಲೂ ಹುಡುಗನಿಗೆ ಲೇಸರ್ ಸುನ್ನತ್ ಬದಲಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇದರಿಂದಾಗಿ ಬಾಲಕ ತೀವ್ರ ನೋವಿನಿಂದ ನರಳಾಡುತ್ತಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಕೂಡಲೇ ಎಚ್ಚೆತ್ತ ತಂದೆ, ಗಾಯಾಳು ಬಾಲಕನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಬಾಲಕನ ತಂದೆ ತಬ್ರೇಜ್ ಖಾನ್ ನೀಡಿದ ದೂರಿನ ಮೇರೆಗೆ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


