ತೀರ್ಥಹಳ್ಳಿಗೆ ರೈಲು? ಅರಸಾಳು ನಿಲ್ದಾಣಕ್ಕೆ ಟ್ರೈನ್ ನಿಲುಗಡೆಗೆ ಅರಗ ಜ್ಞಾನೇಂದ್ರ ಮನವಿ
ಅರಸಾಳು ನಿಲ್ದಾಣದಲ್ಲಿ ಎಲ್ಲಾ ರೈಲುಗಳ ನಿಲುಗಡೆ ಹಾಗೂ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವಂತೆ ಶಾಸಕ ಅರಗ ಜ್ಞಾನೇಂದ್ರ ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ-ಶೃಂಗೇರಿ ರೈಲು...

ರಿಪ್ಪನ್‍ಪೇಟೆ: ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಓಡಾಡುವ ಎಲ್ಲಾ ರೈಲುಗಳನ್ನು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಹಾಗೂ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರಿಗೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಪ್ರಾಸ್ತಾವನೆಯೊಂದಿಗೆ ಮನವಿ ಸಲ್ಲಿಸಿದರು.
ಅರಸಾಳು ರೈಲ್ವೆ ನಿಲ್ದಾಣ
ಮಾದ್ಯಮದವರೊಂದಿಗೆ ಮಾತನಾಡಿ, ಶಿವಮೊಗ್ಗ ತಾಳಗುಪ್ಪ ನಡುವಿನ ಅರಸಾಳು ರೈಲ್ವೆ ನಿಲ್ದಾಣ ಹೊಸನಗರ ತಾಲೂಕಿನ ಪೂರ್ಣ ಭಾಗ ತೀರ್ಥಹಳ್ಳಿ ತಾಲೂಕಿನ ಅರ್ಧ ಭಾಗದ ಪ್ರಯಾಣಿಕರಿಗೆ ಈ ರೈಲ್ವೆ ನಿಲ್ದಾಣ ಪ್ರಯಾಣಿಸಲು ಹೆಚ್ಚು ಅನುಕೂಲಕರವಾಗಿದೆ. ಆ ಕಾರಣ ಈ ರೈಲು ನಿಲ್ದಾಣದ ಮೂಲಕ ಸಂಚರಿಸುವ ಎಲ್ಲಾ ರೈಲುಗಳಿಗೂ ನಿಲುಗಡೆಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದರು.
ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡಂತಹ ಪ್ರಸಿದ್ಧ ರೈಲ್ವೆ ನಿಲ್ದಾಣ
ಜಿಲ್ಲೆಯ ರೈಲು ಸಂಚಾರ ಇತಿಹಾಸದಲ್ಲಿ ಅರಸಾಳು ರೈಲು ನಿಲ್ದಾಣಕ್ಕೆ ತನ್ನದೇ ಅದ ವಿಶೇಷ ಹಿನ್ನಲೆ ಇದ್ದು, ಕನ್ನಡದ ಸುಪ್ರಸಿದ್ದ ನಟ ದಿವಂಗತ ಶಂಕರನಾಗ್‌ರವರ ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡಂತಹ ಪ್ರಸಿದ್ಧ ರೈಲ್ವೆ ನಿಲ್ದಾಣವಾಗಿದೆ. ಇದೀಗ ಬಹಳ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಹೋಗಿ ಬರುತ್ತಿದ್ದು, ಸಾವಿರಾರು ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಎಲ್ಲಾ ಕಾರಣಕ್ಕಾಗಿ ಈ ಕೂಡಲೇ ಅಧಿಕಾರಿಗಳಿಗೆ ನಿಲ್ದಾಣದ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಳಿಗೆ ನಿಲುಗಡೆಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ದೇಶದ ಪ್ರಸಿದ್ಧ ಮತ್ತು ಧಾರ್ಮಿಕ ಸ್ಥಳ ಶಂಕರಾಚಾರ್ಯರ ಶೃಂಗೇರಿಗೆ ಶಿವಮೊಗ್ಗದಿಂದ ರೈಲು ಸಂಚಾರ ಮಾರ್ಗವನ್ನು ಅರಂಭಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದೆ ಇದ್ದು, ಶಿವಮೊಗ್ಗ ಶೃಂಗೇರಿ ನಡುವಿನ ತೀರ್ಥಹಳ್ಳಿ ಮೂಲಕ ಹಾದು ಹೋಗುವಂತೆ ಕ್ರಮವಹಿಸಬೇಕು ಹಾಗೂ ಮಲೆನಾಡಿನ ಮೂಲಸೆಲೆಯಂತಿರುವ ತೀರ್ಥಹಳ್ಳಿಯು ಕೂಡಾ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಹೊಂದಿದ್ದು ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ, ಕುಂದಾದ್ರಿ, ತೀರ್ಥಹಳ್ಳಿಗೆ ಸಮೀಪವಿರುವ ಕೊಡಚಾದ್ರಿ, ಪ್ರಕೃತಿಯ ಸೊಬಗಿನ ಅಗುಂಬೆ ಕೈನರ ಪ್ರಸಿದ್ಧ ಯಾತ್ರಾ ಸ್ಥಳ ಹೊಂಬುಜ ಸೇರಿದಂತೆ ಹಲವು ಧಾರ್ಮಿಕ ಐತಿಹಾಸಿಕ ಸ್ಥಳಗಳು ತೀರ್ಥಹಳ್ಳಿಯಲ್ಲಿದ್ದು, ರೈಲು ಸಂಚಾರ ಅರಂಭವಾದರೆ ಪ್ರವಾಸೋದ್ಯಮಕ್ಕೆ ಉತ್ತಮ ವಾತವರಣ ನಿರ್ಮಾಣವಾಗಲಿದೆ.
ಶಾಂತವೇರಿ ಗೋಪಾಲಗೌಡರು ಕಡಿದಾಳ್ ಮಂಜಪ್ಪರಂತಹ ಅದರ್ಶ ನಾಯಕರು ಪ್ರತಿನಿಧಿಸಿದ್ದ ತೀರ್ಥಹಳ್ಳಿ ಮೂಲಕ ರೈಲು ಮಾರ್ಗವನ್ನು ಶೃಂಗೇರಿಗೆ ತಗೆದುಕೊಂಡು ಹೋಗುವುದರಿಂದ ಗೋಪಾಲಗೌಡರ ಅಭಿಮಾನಿಯಾಗಿರುವ ನಿಮ್ಮಿಂದ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಆಗಬೇಕೆಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರಿಗೆ ಮನವಿ ಮೂಲಕ ಶಾಸಕ ಅರಗ ಜ್ಞಾನೇಂದ್ರ ಅಗ್ರಹಿಸಿದ್ದಾರೆ.




