ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ವಿಶ್ವ

ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ: ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ

ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ ತೀವ್ರಗೊಂಡಿದೆ. ಈ ದಾಳಿಯಿಂದ ಹಲವು ಸಾವುನೋವುಗಳು ಸಂಭವಿಸಿವೆ, ಭಾರತೀಯ ಪ್ರಜೆಯೂ ಮೃತಪಟ್ಟಿದ್ದಾರೆ. ಅಮೆರಿಕ ಸೇನೆ ಯುದ್ಧಕ್ಕೆ ಪ್ರವೇಶಿಸುವ ಸಾಧ್ಯತೆ ಇ...

ಹಂಚಿಕೊಳ್ಳಿ:

ರಿಯಾದ್, ಅಕ್ಟೋಬರ್ 12: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಗಳು ತೀವ್ರಗೊಂಡಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 14ಕ್ಕೆ ತಲುಪಿದೆ. ಶನಿವಾರ ಸಂಭವಿಸಿದ ಭೀಕರ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಸೇರಿದಂತೆ 13 ಮಂದಿ ಮೃತಪಟ್ಟ ನಂತರ, ಭಾನುವಾರ ಟರ್ಮಿನಲ್ 4ಕ್ಕೆ ಮತ್ತೊಂದು ಸ್ಫೋಟಕ ಅಪ್ಪಳಿಸಿದ್ದರಿಂದ ಮತ್ತೊಬ್ಬರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ.

ಭೀಕರ ಸ್ಫೋಟ ಮತ್ತು ಸಿಸಿಟಿವಿ ದೃಶ್ಯಾವಳಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಯು ದಾಳಿಯ ಭೀಕರತೆಯನ್ನು ತೋರಿಸಿದೆ. ಉಮ್ರಾ ಯಾತ್ರಿಕರು ಮತ್ತು ಪ್ರಯಾಣಿಕರು ವಿಮಾನ ಹತ್ತಲು ಗೇಟ್ ಬಳಿ ಕಾಯುತ್ತಿದ್ದಾಗ, ಅನಿರೀಕ್ಷಿತವಾಗಿ ಕಿತ್ತಳೆ ಬಣ್ಣದ ಜ್ವಾಲೆಯೊಂದಿಗೆ ದೊಡ್ಡ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಟರ್ಮಿನಲ್‌ನ ಮೇಲ್ಛಾವಣಿ ಕುಸಿದಿದ್ದು, ರಕ್ತಸಿಕ್ತರಾದ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳು ದಾಖಲಾಗಿವೆ. ಕಳೆದ ಐದು ದಿನಗಳಲ್ಲಿ ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ನಾಲ್ಕನೇ ದಾಳಿ ಇದಾಗಿದ್ದು, ಇದರಿಂದ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದಮ್ಮಾಮ್ ವಿಮಾನ ನಿಲ್ದಾಣಕ್ಕೂ ಟಾರ್ಗೆಟ್: ಕಾರ್ಯಾಚರಣೆ ಸ್ಥಗಿತ

ವಿಮಾನ ಸಂಚಾರ ರದ್ದು: ನಿರಂತರ ದಾಳಿಗಳ ಕಾರಣದಿಂದಾಗಿ ಕಿಂಗ್ ಖಾಲಿದ್ ವಿಮಾನ ನಿಲ್ದಾಣದ ನಾಗರಿಕ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ರಿಯಾದ್ ಅಷ್ಟೇ ಅಲ್ಲದೆ, ಪೂರ್ವ ಪ್ರಾಂತ್ಯದ ದಮ್ಮಾಮ್‌ನಲ್ಲಿರುವ ಕಿಂಗ್ ಫಹ್ದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅರಾಮ್ಕೊ ತೈಲ ಸಂಸ್ಥೆಯ ಘಟಕಗಳ ಮೇಲೆ ಕೂಡ ತಾವು ದಾಳಿ ನಡೆಸಿರುವುದಾಗಿ ಹೌತಿಗಳು ಘೋಷಿಸಿದ್ದಾರೆ.

ಪ್ರಯಾಣಿಕರಿಗೆ ಎಚ್ಚರಿಕೆ: ಸೌದಿ ವಾಯುಪ್ರದೇಶವನ್ನು ಬಳಸದಂತೆ ಹೌತಿಗಳು ಎಚ್ಚರಿಕೆ ನೀಡಿದ್ದು, ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಅನೇಕ ದೇಶಗಳ ರಾಯಭಾರ ಕಚೇರಿಗಳು ತಮ್ಮ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿವೆ.

ವಿಡಿಯೋ

ಅಮೆರಿಕದ ಎಂಟ್ರಿ ಸಾಧ್ಯತೆ ಮತ್ತು ಯುದ್ಧದ ತೀವ್ರತೆ

ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡ ಈ ಕೃತ್ಯವನ್ನು ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು “ಪೂರ್ಣ ಪ್ರಮಾಣದ ಯುದ್ಧ ಅಪರಾಧ” ಎಂದು ಬಣ್ಣಿಸಿದ್ದು, ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಸೌದಿ ಅರೇಬಿಯಾ ಮೇಲಿನ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಹೌತಿಗಳ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಯು ಪಾಲ್ಗೊಳ್ಳುವ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಭಾರತೀಯನ ಸಾವು ದೃಢ: ಶನಿವಾರದ ದಾಳಿಯಲ್ಲಿ ಹೈದರಾಬಾದ್‌ನ ಮೊಹಮ್ಮದ್ ಯೂಸುಫ್ (46) ಎಂಬ ಭಾರತೀಯ ಪ್ರಜೆ ಮೃತಪಟ್ಟಿರುವುದನ್ನು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ. ಮೃತಪಟ್ಟವರಲ್ಲಿ ಅಮೆರಿಕ, ಬಾಂಗ್ಲಾದೇಶ, ಜೋರ್ಡಾನ್, ಸಿರಿಯಾ ಮತ್ತು ಸೌದಿ ಪ್ರಜೆಗಳು ಸೇರಿದ್ದಾರೆ.

ತೈಲ ಮಾರುಕಟ್ಟೆ ಮೇಲೆ ಕರಿನೆರಳು: ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಅಸ್ಥಿರತೆಯ ನಡುವೆಯೇ ಸೌದಿಯ ಸಾರಿಗೆ ಮತ್ತು ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಗೆ ಹಾಗೂ ಜಾಗತಿಕ ವಿಮಾನಯಾನ ವ್ಯತ್ಯಯಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂಚಿಕೊಳ್ಳಿ: