ರಷ್ಯಾ-ಉಕ್ರೇನ್ ಯುದ್ಧ: ಇಂಧನ ಕದನವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್
ರಷ್ಯಾ ಮತ್ತು ಉಕ್ರೇನ್ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಇಂಧನ ವಲಯಕ್ಕೆ ಸಂಬಂಧಿಸಿದ ಕದನವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಎರಡೂ ದೇಶಗಳು ಈ ಒಪ್ಪಂದಕ್ಕೆ ಸಮ್...
ವಾಷಿಂಗ್ಟನ್, ಅಕ್ಟೋಬರ್ 11: ರಷ್ಯಾ ಮತ್ತು ಉಕ್ರೇನ್ ನಡುವೆ ತಕ್ಷಣವೇ ಜಾರಿಗೆ ಬರುವಂತೆ “ಇಂಧನ ಕದನವಿರಾಮ” ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು (ಅಕ್ಟೋಬರ್ 11) ಪ್ರಕಟಿಸಿದ್ದಾರೆ. ಈ ಕದನವಿರಾಮಕ್ಕೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ಟ್ರಂಪ್ ಹೇಳಿದ್ದಾರೆ. ‘ಟ್ರೂತ್ ಸೋಶಿಯಲ್’ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿರುವ ಟ್ರಂಪ್, ಮಾಸ್ಕೋ ಮತ್ತು ಕೈವ್ ಈ ಒಪ್ಪಂದವನ್ನು ಉಲ್ಲಂಘಿಸದಂತೆ ಕೋರಿದ್ದಾರೆ.
ಆದರೆ, ಈ ಕದನವಿರಾಮದ ಅವಧಿ ಎಷ್ಟು ಅಥವಾ ಇದನ್ನು ಯಾವ ರೀತಿ ಜಾರಿಗೆ ತರಲಾಗುತ್ತದೆ ಎಂಬುದರ ಬಗ್ಗೆ ಟ್ರಂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಷ್ಟೇ ಅಲ್ಲದೆ, ರಷ್ಯಾ ಅಥವಾ ಶ್ವೇತಭವನ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಮುನ್ನವೇ ಟ್ರಂಪ್ ಈ ಪೋಸ್ಟ್ ಮಾಡಿದ್ದಾರೆ.
‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಟ್ರಂಪ್, “ತಕ್ಷಣದಿಂದ ಜಾರಿಗೆ ಬರುವಂತೆ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಇಂಧನ ಕದನವಿರಾಮ ಜಾರಿಯಾಗಿದೆ. ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಇದನ್ನು ಯಾರೂ ಮುರಿಯಬೇಡಿ! ಈ ವಿಷಯವನ್ನು ಗಮನಿಸಿದ್ದಕ್ಕೆ ಧನ್ಯವಾದಗಳು” ಎಂದು ನಮೂದಿಸಿದ್ದಾರೆ. ಸದ್ಯಕ್ಕೆ ರಷ್ಯಾ ಅಥವಾ ಉಕ್ರೇನ್ ಈ ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ಇಂಧನ ಕದನವಿರಾಮ ಎಂದರೆ ಎರಡೂ ದೇಶಗಳು ಪರಸ್ಪರರ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸದಿರಲು ಮಾಡಿಕೊಂಡಿರುವ ಸೀಮಿತ ಮತ್ತು ಪರಸ್ಪರ ಒಪ್ಪಂದವಾಗಿದೆ. ಇದು ಸಂಪೂರ್ಣ ಕದನವಿರಾಮವಲ್ಲ, ಬದಲಿಗೆ ಇಂಧನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುವ ನಿರ್ಧಾರವಾಗಿದೆ. ಸರಳವಾಗಿ ಹೇಳುವುದಾದರೆ, ಉಕ್ರೇನ್ ರಷ್ಯಾದ ತೈಲ ಸಂಸ್ಕರಣಾಗಾರಗಳು, ತೈಲ ಸಂಗ್ರಹಾಗಾರಗಳು, ಅನಿಲ ಘಟಕಗಳು ಅಥವಾ ಇಂಧನ ರಫ್ತು ಕೇಂದ್ರಗಳ ಮೇಲೆ ಡ್ರೋನ್ ಅಥವಾ ಕ್ಷಿಪಣಿ ದಾಳಿ ಮಾಡುವುದಿಲ್ಲ. ಅದೇ ರೀತಿ, ರಷ್ಯಾ ಉಕ್ರೇನ್‌ನ ವಿದ್ಯುತ್ ಗ್ರಿಡ್‌ಗಳು, ವಿದ್ಯುತ್ ಸ್ಥಾವರಗಳು, ಹೀಟಿಂಗ್ ವ್ಯವಸ್ಥೆಗಳು, ಸಬ್‌ಸ್ಟೇಷನ್‌ಗಳು ಮತ್ತು ತೈಲ ಪಂಪ್‌ಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುತ್ತದೆ. ಇಂಧನ ಮೂಲಸೌಕರ್ಯ ಹೊರತುಪಡಿಸಿ ಯುದ್ಧದ ಉಳಿದ ಭಾಗಗಳು ಎಂದಿನಂತೆ ಮುಂದುವರಿಯಲಿವೆ.
ಉಕ್ರೇನ್‌ಗೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದ ಟ್ರಂಪ್:
ರಷ್ಯಾದ ಡೀಸೆಲ್ ಘಟಕಗಳ ಮೇಲೆ ದಾಳಿ ನಡೆಸಿ ಜಾಗತಿಕ ಇಂಧನ ಕೊರತೆಗೆ ಕಾರಣರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟ್ರಂಪ್ ಶನಿವಾರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಯುದ್ಧವನ್ನು ಅಂತ್ಯಗೊಳಿಸಲು ಝೆಲೆನ್ಸ್ಕಿ ಸೂಕ್ತ ಕ್ರಮ ಕೈಗೊಂಡಿಲ್ಲ ಮತ್ತು ಅಮೆರಿಕದಲ್ಲಿ ಡೀಸೆಲ್ ಬೆಲೆ ಏರಿಕೆಗೆ ಅವರೇ ಕಾರಣ ಎಂದು ಆರೋಪಿಸಿದ್ದ ಟ್ರಂಪ್, ಉಕ್ರೇನ್‌ಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದರು.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಝೆಲೆನ್ಸ್ಕಿ, ರಷ್ಯಾ 60 ದಿನಗಳ ಕಾಲ ಪೂರ್ಣ ಕದನವಿರಾಮಕ್ಕೆ ಒಪ್ಪಿಕೊಂಡರೆ ಉಕ್ರೇನ್‌ನಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದಿದ್ದರು. “ನಮಗೆ 2 ತಿಂಗಳು, ಅಂದರೆ 60 ದಿನಗಳ ಕಾಲ ಸಂಪೂರ್ಣ ಯುದ್ಧ ವಿರಾಮ ನೀಡಿ. ನಾವು ಚುನಾವಣೆ ಆಯೋಜಿಸುತ್ತೇವೆ. ಜನ ನೀಡುವ ತೀರ್ಪನ್ನು ನಾವು ಸ್ವೀಕರಿಸುತ್ತೇವೆ” ಎಂದು ಅವರು ತಿಳಿಸಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


