ನೇಪಾಳ: ಬುಧಿ ಗಂಡಕಿ ನದಿಯಲ್ಲಿ ದಿಢೀರ್ ಪ್ರವಾಹ, 10ಕ್ಕೂ ಹೆಚ್ಚು ಮಂದಿ ನಾಪತ್ತೆ
ನೇಪಾಳದ ಗೋರ್ಖಾ ಜಿಲ್ಲೆಯ ಬುಧಿ ಗಂಡಕಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, 15ಕ್ಕೂ ಹೆಚ್ಚು ಮನೆಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಸಿಲುಕಿದ್ದ 50 ಜನರನ್ನು ರಕ್ಷಿಸಲಾಗಿದ್ದು, 10ಕ್ಕೂ ಹೆಚ್ಚು...

ಕಠ್ಮಂಡು: ಕಳೆದ ಆಗಸ್ಟ್ ತಿಂಗಳಲ್ಲಿ 7000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೀಕರ ಪ್ರವಾಹದ ಕಹಿ ನೆನಪುಗಳು ಇನ್ನೂ ಮಾಸುವ ಮೊದಲೇ ನೇಪಾಳದಲ್ಲಿ ಮತ್ತೊಂದು ಭೀಕರ ದಿಡೀರ್ ಪ್ರವಾಹ ಉಂಟಾಗಿದೆ. ಭಾನುವಾರ ಬುಧಿ ಗಂಡಕಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಗೋರ್ಖಾ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದೆ. ಪ್ರವಾಹದ ರಭಸಕ್ಕೆ 15ಕ್ಕೂ ಹೆಚ್ಚು ಮನೆಗಳು, ಸೇತುವೆ ಮತ್ತು 2 ಜಲವಿದ್ಯುತ್ ಯೋಜನೆಗಳ ಘಟಕಗಳು ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 50 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಕಾರಣ ತಿಳಿದುಬಂದಿಲ್ಲ
ನದಿಯಲ್ಲಿ ನೀರು ಅತಿ ವೇಗವಾಗಿ ಹರಿಯುತ್ತಿದ್ದು, ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಜನರಲ್ಲಿ ಆತಂಕ ಮೂಡಿಸಿವೆ. ಈ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ದಡದಲ್ಲಿರುವ ಗ್ರಾಮಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕಳೆದ ಆ.26ರಂದು ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ 7000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಬುಧಿ ಗಂಡಕಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಇದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಸ್ಥಳೀಯರ ಮಾಹಿತಿಯ ಪ್ರಕಾರ ಲೋಕ್ಪಾ ಮತ್ತು ಚುಮುಲಿಂಗ್ ನಡುವೆ ಗಂಡಕಿ ನದಿಯ ಉಪನದಿಯಾದ ಸ್ಯಾರ್‌ನಲ್ಲಿ ನೀರಿನ ಹರಿವಿಗೆ ಅಡಚಣೆಯುಂಟಾಗಿ ಈ ದಿಢೀರ್ ಪ್ರವಾಹ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇನಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

