ಯಾರು, ಯಾರ ವಿರುದ್ಧ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ: ಗೋವಿಂದ ಕಾರಜೋಳ
ಚಿತ್ರದುರ್ಗ: ಸಿಎಂ ಡಿಕೆ ಶಿವಕುಮಾರ್‌ರವರು (DK Shivakumar) ಸ್ಟಿಂಗ್ ಆಪರೇಷನ್ (Sting Operation) ವಿಚಾರಕ್ಕೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು. ಅವರು, ಯಾರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡುತ್ತಾರೆ...


ಚಿತ್ರದುರ್ಗ: ಸಿಎಂ ಡಿಕೆ ಶಿವಕುಮಾರ್‌ರವರು (DK Shivakumar) ಸ್ಟಿಂಗ್ ಆಪರೇಷನ್ (Sting Operation) ವಿಚಾರಕ್ಕೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು. ಅವರು, ಯಾರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡುತ್ತಾರೆ ಎಂಬುದರ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ (Govinda Karajola) ಸವಾಲು ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಭೀತಿ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಬರಗಾಲದಿಂದ ಜನ ಸಂಕಷ್ಟದಲ್ಲಿದ್ದಾರೆ.ಈ ವೇಳೆ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಈ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಸ್ಟಿಂಗ್ ಪಿತಾಮಹಾನೇ ರಾಜ್ಯದ ಮುಖ್ಯಮಂತ್ರಿ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದು, ದಾಖಲೆ ಬಿಡುಗಡೆಗೆ ಸಮಯ ಕೇಳುವುದು ಗಾಳಿಯಲ್ಲಿ ಗುಂಡು ಹೊಡೆದಂತೆ ಎಂದು ಟೀಕಿಸಿದರು.
ಜೊತೆಗೆ ರಾಜ್ಯದಲ್ಲಿ ಬರಗಾಲದಿಂದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಸರ್ಕಾರದಿಂದ ಜನಪರವಾದ ನಯಾಪೈಸೆಯ ಕೆಲಸವೂ ಆಗಿಲ್ಲ ಎಂದು ಗುಡುಗಿದ್ದು, ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಕಾಂಗ್ರೆಸ್ ಆಗ್ರಹಕ್ಕೆ ಕಾರಜೋಳ ತಿರುಗೇಟು ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು. ಈ ದೇಶಕ್ಕೆ ಸ್ವಾತಂತ್ರ‍್ಯ ಬಂದ ಆರಂಭದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಕೆಲವರಿಗೆ ಮತದಾನ ಮಾಡುವುದು ಕೂಡ ತಿಳಿದಿರಲಿಲ್ಲ. ಕೈಹಿಡಿದು ಮತದಾನ ಮಾಡಿಸುವಂತಹ ವಾತಾವರಣ ಇತ್ತು. ಆದರೆ, ಈಗ ಶೇಕಡಾ 80ರಷ್ಟು ಜನ ವಿದ್ಯಾವಂತರಿದ್ದಾರೆ. ಹೀಗಿರುವಾಗ ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂಬ ಕಾಂಗ್ರೆಸ್ ಆಗ್ರಹ ಅಗತ್ಯವಿಲ್ಲ ಎಂದರು.
ಜೊತೆಗೆ ಇದು ಭಾರತೀಯ ನಾಗರಿಕರಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ ಎನಿಸಿದ್ದು, ಇವಿಎಂ ಮೂಲಕವೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಗೆದ್ದಿದ್ದಾರೆ. ಹಾಗೆಯೇ ಕರ್ನಾಟಕ ಮತ್ತು ತೆಲಂಗಾಣದಲ್ಲೂ ಕಾಂಗ್ರೆಸ್ ಇವಿಎಂ ಮೂಲಕವೇ ಗೆಲುವು ಸಾಧಿಸಿದೆ. ಹೀಗಾಗಿ ಕೈ ನಾಯಕರಿಗೆ ಇವಿಎಂ ಬಗ್ಗೆ ಅನುಮಾನವಿದ್ದರೆ, ಕಾಂಗ್ರೆಸ್ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದು, ಚುನಾವಣಾ ವ್ಯವಸ್ಥೆ ವಿಚಾರದಲ್ಲಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದು ಸಂಸದ ಕಾರಜೋಳ ಹರಿಹಾಯ್ದರು.




