ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಕರ್ನಾಟಕ

ಕನ್ನಡ ಹಾಡು ಹಾಡಿ, ಕವಿತೆ ಹೇಳಿ: ಉಚಿತ ಸಸಿ ಮನೆಗೆ ಕೊಂಡೊಯ್ಯಿರಿ; ಮೈಸೂರು ದಸರಾದಲ್ಲಿ ವಿನೂತನ ಹಸಿರು ಅಭಿಯಾನ..!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಪುಸ್ತಕ ಪ್ರದರ್ಶನದಲ್ಲಿ ಪರಿಸರ ಜಾಗೃತಿ ಹಾಗೂ ಕನ್ನಡ ಭಾಷಾ ಪ್ರೇಮವನ್ನು ಬೆಸೆಯುವ ಅಪೂರ್ವ ಅಭಿಯಾನವೊಂದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.ಇಲ್ಲಿಗೆ ಭೇ...

· ಮೈಸೂರು
ಕನ್ನಡ ಹಾಡು ಹಾಡಿ, ಕವಿತೆ ಹೇಳಿ: ಉಚಿತ ಸಸಿ ಮನೆಗೆ ಕೊಂಡೊಯ್ಯಿರಿ; ಮೈಸೂರು ದಸರಾದಲ್ಲಿ ವಿನೂತನ ಹಸಿರು ಅಭಿಯಾನ..!
ಹಂಚಿಕೊಳ್ಳಿ:

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಪುಸ್ತಕ ಪ್ರದರ್ಶನದಲ್ಲಿ ಪರಿಸರ ಜಾಗೃತಿ ಹಾಗೂ ಕನ್ನಡ ಭಾಷಾ ಪ್ರೇಮವನ್ನು ಬೆಸೆಯುವ ಅಪೂರ್ವ ಅಭಿಯಾನವೊಂದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇಲ್ಲಿಗೆ ಭೇಟಿ ನೀಡುವ ಭೇಟಿಗಾರರು ಕನ್ನಡ ಹಾಡು ಅಥವಾ ಕವಿತೆ ಹಾಡಿದರೆ ಉಚಿತವಾಗಿ ಸಸಿಗಳನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.

ಪರಿಸರ ಸಂರಕ್ಷಣೆ ಹಾಗೂ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಬಿಎಂಟಿಸಿ ಮೆಕ್ಯಾನಿಕ್‌ ಒಬ್ಬರು ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಕನ್ನಡ ಹಾಡು ಹಾಡುವವರಿಗೆ ಅಥವಾ ಕವಿತೆ ವಾಚಿಸುವವರಿಗೆ ಉಚಿತವಾಗಿ ಸಸಿಗಳನ್ನು ನೀಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಯಾಂತ್ರಿಕ ವಿಭಾಗದಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ಮಡೆನೂರು ಅವರು ದಸರಾ ಪುಸ್ತಕ ಪ್ರದರ್ಶನದಲ್ಲಿ ‘ಕವಿತೆ ಹೇಳಿ, ಗಿಡ ಪಡೆಯಿರಿ’ ಎಂಬ ವಿನೂತನ ಅಭಿಯಾನದಡಿ ಮಳಿಗೆಯೊಂದನ್ನು ತೆರೆದಿದ್ದಾರೆ.

ಇಲ್ಲಿ ಕನ್ನಡ ಹಾಡು ಹಾಡುವ ಅಥವಾ ಸ್ವರಚಿತ ಹಾಗೂ ಇತರ ಕವಿಗಳ ಕವಿತೆಗಳನ್ನು ವಾಚಿಸುವವರಿಗೆ ಔಷಧೀಯ ಸಸಿ ಅಥವಾ ಹಣ್ಣಿನ ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ.

ಈ ಉಪಕ್ರಮದ ಉದ್ದೇಶ ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕನ್ನಡ ಸಾಹಿತ್ಯವನ್ನು ಮೆಚ್ಚಿ, ಪ್ರೋತ್ಸಾಹಿಸುವಂತೆ ಜನರನ್ನು ಉತ್ತೇಜಿಸುವುದಾಗಿದೆ ಎಂದು ಸಂತೋಷ್ ಅವರು ತಿಳಿಸಿದ್ದಾರೆ.

ಸುಮಾರು 25 ವರ್ಷಗಳ ಹಿಂದೆ ಅವರು ‘ಸಸ್ಯ ಯಜ್ಞ’ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಅಂದಿನಿಂದ ಬೆಂಗಳೂರಿನ ಬಿಎಂಟಿಸಿಯ 16 ಡಿಪೋಗಳಲ್ಲಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ 181 ಸರ್ಕಾರಿ ಶಾಲೆಗಳಲ್ಲಿ ಒಟ್ಟು 19,400 ಸಸಿಗಳನ್ನು ನೆಟ್ಟಿದ್ದಾರೆ. ಅಲ್ಲದೆ, ಇದುವರೆಗೆ 50,000ಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಹಂಚಿಕೊಳ್ಳಿ: