ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಕರ್ನಾಟಕ

ಇಡಗುಂಜಿ ದೇವಾಲಯದಲ್ಲಿ ಪೂಜಾ ವಿವಾದ; ಮಹಾಗಣಪತಿ ಪೂಜೆಯನ್ನೇ ಬಹಿಷ್ಕರಿಸಿದ ಅರ್ಚಕರು

ಕಾರವಾರ: ನವರಾತ್ರಿಯ ಮೊದಲ ದಿನವೇ ಉತ್ತರ ಕನ್ನಡ ಜಿಲ್ಲೆಯ (Uttara Kannada) ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಾಲಯದಲ್ಲಿ ಪೂಜಾ ವಿವಾದ ತಾರಕಕ್ಕೇರಿದೆ. ಪೂಜಾ ಕಮಿಷನ್‌ ಹಣದ ವಿಚಾರವಾಗಿ ಅಸಮಾಧಾನಗೊಂಡ ಅರ್ಚಕರು ಪೂಜೆ...

· ಉತ್ತರ ಕನ್ನಡ
ಇಡಗುಂಜಿ ದೇವಾಲಯದಲ್ಲಿ ಪೂಜಾ ವಿವಾದ; ಮಹಾಗಣಪತಿ ಪೂಜೆಯನ್ನೇ ಬಹಿಷ್ಕರಿಸಿದ ಅರ್ಚಕರು
ಹಂಚಿಕೊಳ್ಳಿ:

ಕಾರವಾರ: ನವರಾತ್ರಿಯ ಮೊದಲ ದಿನವೇ ಉತ್ತರ ಕನ್ನಡ ಜಿಲ್ಲೆಯ (Uttara Kannada) ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಾಲಯದಲ್ಲಿ ಪೂಜಾ ವಿವಾದ ತಾರಕಕ್ಕೇರಿದೆ. ಪೂಜಾ ಕಮಿಷನ್‌ ಹಣದ ವಿಚಾರವಾಗಿ ಅಸಮಾಧಾನಗೊಂಡ ಅರ್ಚಕರು ಪೂಜೆಯನ್ನೇ ಬಹಿಷ್ಕರಿಸಿದ್ದಾರೆ.

ಅರ್ಚಕರ ವಿವಾದದಿಂದ ದೇವರ ದರ್ಶನಕ್ಕೆ ಬಂದ ಭಕ್ತರು ದೇವಾಲಯದ ಹೊರಗಡೆಯೇ ಹಣ್ಣು-ಕಾಯಿ ಸಮರ್ಪಿಸಿ, ಹೊರಗಿನಿಂದಲೇ ದರ್ಶನ ಪಡೆದು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವಾಲಯದಲ್ಲಿ ಪೂಜೆ ನಡೆಯದಿರುವುದಕ್ಕೆ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ನವರಾತ್ರಿಯ ಮೊದಲ ದಿನವೇ ಇಂತಹ ಬೆಳವಣಿಗೆ ನಡೆದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಾಲಯದ ಮೂಲ ಹಕ್ಕು ಮತ್ತು ಪೂಜೆಯ ಆದಾಯದ ವಿಚಾರವಾಗಿ ದೇವಾಲಯದ ಟ್ರಸ್ಟ್‌ ಹಾಗೂ ಮೂರು ಅರ್ಚಕರ ಕುಟುಂಬಗಳ ನಡುವೆ ಈ ಹಿಂದಿನಿಂದಲೂ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ವಿವಾದದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶದಂತೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರನ್ನು ರಿಸೀವರ್‌ ಆಗಿ ನೇಮಿಸಲಾಗಿತ್ತು.

ದೇವಾಲಯದಲ್ಲಿ ಮೂರು ಅರ್ಚಕರ ಕುಟುಂಬಗಳು ಪಾಳಿಯ ಆಧಾರದ ಮೇಲೆ ಪೂಜೆ ನೆರವೇರಿಸುತ್ತಿವೆ. ಸದ್ಯ ಮಂಜುನಾಥ್‌ ಭಟ್‌ ಅವರ ಕುಟುಂಬದ ಪಾಳಿ ನಡೆಯುತ್ತಿದೆ. ಇದೇ ವೇಳೆ, ಪೂಜಾ ಕಮಿಷನ್‌ ಹಣದ ವಿಚಾರವಾಗಿ ನಾರಾಯಣ್‌ ಭಟ್‌ ಅವರ ಕುಟುಂಬ ಹೊನ್ನಾವರದ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ನ್ಯಾಯಾಲಯದಲ್ಲಿ ತೀರ್ಪು ಹೊರಬರುವವರೆಗೆ ಪೂಜಾ ಕಮಿಷನ್‌ ಹಣವನ್ನು ಮಂಜುನಾಥ್‌ ಭಟ್‌ ಅವರ ಕುಟುಂಬಕ್ಕೆ ನೀಡಬಾರದು ಎಂದು ಆಡಳಿತಾಧಿಕಾರಿಗೂ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಪೂಜಾ ಕಮಿಷನ್‌ ಹಣವನ್ನು ತಡೆಹಿಡಿಯಲಾಗಿತ್ತು ಎನ್ನಲಾಗಿದೆ.

ಇದರಿಂದ ಅಸಮಾಧಾನಗೊಂಡ ಮಂಜುನಾಥ್‌ ಭಟ್‌ ಅವರು ನವರಾತ್ರಿಯ ಮೊದಲ ದಿನವಾದ ಇಂದು ಪೂಜೆಯನ್ನು ಬಹಿಷ್ಕರಿಸಿದ್ದಾರೆ. ಅಲ್ಲದೆ, ಇತರ ಅರ್ಚಕರು ಪೂಜೆ ನೆರವೇರಿಸಲೂ ಅಡ್ಡಿಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಭಕ್ತರ ಪಾಲಿಗೆ ಮಹತ್ವದ ಧಾರ್ಮಿಕ ಕ್ಷೇತ್ರವಾಗಿರುವ ಇಡಗುಂಜಿ ಮಹಾಗಣಪತಿ ದೇವಾಲಯದಲ್ಲಿ ಪೂಜೆಯೇ ಸ್ಥಗಿತಗೊಂಡಿರುವುದು ಭಕ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪೂಜಾ ವಿವಾದಕ್ಕೆ ಶೀಘ್ರ ಪರಿಹಾರ ಸಿಗಬೇಕು ಮತ್ತು ದೇವರ ದರ್ಶನಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ.

ಹಂಚಿಕೊಳ್ಳಿ: