ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಕರ್ನಾಟಕ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ; ಸ್ನೇಹಿತನಿಂದಲೇ ನಡೀತಾ ಯುವತಿ ಕೊಲೆ?

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಯುವತಿಯೊಬ್ಬಳು (Road Accident) ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇದು ಕೇವಲ ರಸ್ತೆ ಅಪಘಾತವಲ್ಲ, ಇದರ ಹಿಂದೆ ಕೊಲೆ ಸಂಚು ಇದೆ ಎಂದು...

· ರಾಮನಗರ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ; ಸ್ನೇಹಿತನಿಂದಲೇ ನಡೀತಾ ಯುವತಿ ಕೊಲೆ?
ಹಂಚಿಕೊಳ್ಳಿ:

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಯುವತಿಯೊಬ್ಬಳು (Road Accident) ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇದು ಕೇವಲ ರಸ್ತೆ ಅಪಘಾತವಲ್ಲ, ಇದರ ಹಿಂದೆ ಕೊಲೆ ಸಂಚು ಇದೆ ಎಂದು ಮೃತ ಯುವತಿ ಭೂಮಿಕಾ ಪೋಷಕರು ಆರೋಪಿಸಿದ್ದಾರೆ.

ಪೋಷಕರು ಯುವತಿಯ ಸ್ನೇಹಿತನ ವಿರುದ್ಧ ಅನುಮಾನ ವ್ಯಕ್ತಪಡಿಸಿ ಚನ್ನಪಟ್ಟಣ ಟೌನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಘಾತಕ್ಕೂ ಮುನ್ನ ಭೂಮಿಕಾ ಮೇಲೆ ಹಲ್ಲೆ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿದ್ದು, ಪ್ರಕರಣ ಈಗ ಕುತೂಹಲ ಮೂಡಿಸಿದೆ.

ಅಕ್ಟೋಬರ್‌ 3ರಂದು ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿತ್ತು. ಬೆಂಗಳೂರಿನ ರಾಮೋಹಳ್ಳಿಯ 23 ವರ್ಷದ ಭೂಮಿಕಾ, ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆರಂಭದಲ್ಲಿ ಚನ್ನಪಟ್ಟಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಮಗಳ ಸಾವು ಅಪಘಾತದಿಂದ ಆಗಿದ್ದಲ್ಲ, ಇದರ ಹಿಂದೆ ಬೇರೆ ಕಾರಣವಿದೆ ಎಂದು ಪೋಷಕರು ಇದೀಗ ಆರೋಪಿಸಿದ್ದಾರೆ.

ಸ್ನೇಹಿತನ ಭೇಟಿಗೆ ಬಂದಿದ್ದ ಭೂಮಿಕಾ
ಭೂಮಿಕಾ ಬೆಂಗಳೂರಿನಿಂದ ಕಿರಣ್‌ ಎಂಬಾತನನ್ನು ಭೇಟಿಯಾಗಲು ಚನ್ನಪಟ್ಟಣಕ್ಕೆ ಬಂದಿದ್ದರು. ಇಬ್ಬರ ನಡುವೆ ಪ್ರೀತಿ ಇತ್ತು ಎಂದು ಹೇಳಲಾಗಿದ್ದು, ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ಕಿರಣ್‌ ತನ್ನ ಸಹೋದರ ಆಶಿತ್‌ ಜೊತೆ ಸೇರಿ ಭೂಮಿಕಾ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬುದು ಅವರು ಆರೋಪಿಸಿದ್ದಾರೆ.

ಭೂಮಿಕಾ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದರೂ, ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸಿದ್ದು ಯಾಕೆ? ಬೈಕ್‌ನಿಂದ ಇಳಿದು ರಸ್ತೆ ದಾಟುವಾಗ ಕೆಳಗೆ ಬಿದ್ದ ಭೂಮಿಕಾಳನ್ನು ಬಿಟ್ಟು ಜೊತೆಗಿದ್ದವರು ಸ್ಥಳದಿಂದ ತೆರಳಿದ್ದು ಯಾಕೆ? ಎಂಬ ಪ್ರಶ್ನೆಗಳನ್ನು ಪೋಷಕರು ಎತ್ತಿದ್ದಾರೆ.

ಇದಲ್ಲದೆ, ಜಗಳದ ವೇಳೆ ಭೂಮಿಕಾ ಬಂದಿದ್ದ ಕಾರಿನ ಕೀಯನ್ನು ಕಿರಣ್‌ ಕಿತ್ತುಕೊಂಡಿದ್ದ ಮತ್ತು ಕಾರಿನ ಚಾಲಕನಿಗೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಬಳಿಕ ತನ್ನ ಸಹೋದರನನ್ನು ಕರೆಸಿ ಭೂಮಿಕಾ ಮೇಲೆ ಹಲ್ಲೆ ನಡೆಸಿ, ಆಕೆ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಗಂಭೀರ ಆರೋಪವನ್ನೂ ಪೋಷಕರು ಮಾಡಿದ್ದಾರೆ.

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಕನ್ನಡಪರ ಹೋರಾಟಗಾರರೊಂದಿಗೆ ಚನ್ನಪಟ್ಟಣ ಟೌನ್‌ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ನೇಹಿತ ಕಿರಣ್‌ ವಿರುದ್ಧ ಮಾಡಿರುವ ಆರೋಪಗಳು ಹಾಗೂ ಅಪಘಾತದ ಸುತ್ತ ಎದ್ದಿರುವ ಅನುಮಾನಗಳ ಬಗ್ಗೆ ತನಿಖೆಯಿಂದಲೇ ಸ್ಪಷ್ಟತೆ ಸಿಗಬೇಕಿದೆ.

 

ಹಂಚಿಕೊಳ್ಳಿ: