ಒಂದಾನೊಂದು ಕಾಲದಲ್ಲಿ ಥಿಯೇಟರ್ ಟಾರ್ಚ್ ಬಾಯ್, ಈಗ ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ನಿರ್ದೇಶಕ
‘ಪ್ರೇಮದ ಊರಲಿ’ ಚಿತ್ರದ ನಿರ್ದೇಶಕ ಮನೋಜ್ ಕುಮಾರ್‌ರ ಬದುಕಿನ ಸ್ಫೂರ್ತಿದಾಯಕ ಕಥೆ ಇದೀಗ ವೈರಲ್ ಆಗಿದೆ. ಒಂದು ಕಾಲದಲ್ಲಿ ಇದೇ ಚಿತ್ರಮಂದಿರಗಳಲ್ಲಿ ಟಾರ್ಚ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ..

ಎರಡು ದಿನಗಳ ಹಿಂದಿನ ಘಟನೆಯಿದು. ಸ್ಥಳ ನರ್ತಕಿ ಚಿತ್ರಮಂದಿರ. ಥಿಯೇಟರ್ ಹೊರಗೆ ಹೌಸ್‌ಫುಲ್ ಬೋರ್ಡ್ ರಾರಾಜಿಸುತ್ತಿತ್ತು. ಪ್ರವೇಶ ದ್ವಾರದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಇದ್ದ ಟಾರ್ಚ್ ಪಡೆದ ಯುವಕನೊಬ್ಬ, ಅದರ ಬೆಳಕಿನ ಸಹಾಯದಿಂದ ಕಿಕ್ಕಿರಿದು ತುಂಬಿದ್ದ ಥಿಯೇಟರ್ ಒಳಗೆ ಪ್ರವೇಶಿಸುತ್ತಾನೆ. ಹೀಗೆ ಒಳನುಗ್ಗುತ್ತಿದ್ದಂತೆ ಆತ ಭಾವುಕರಾಗುತ್ತಾರೆ. ಈ ದೃಶ್ಯ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೀಗೆ ಜನಜಂಗುಳಿಯಿಂದ ಕೂಡಿದ ಚಿತ್ರಮಂದಿರದ ಕತ್ತಲಲ್ಲಿ ಟಾರ್ಚ್ ಹಿಡಿದು ಒಳಗೆ ಬಂದವರು ‘ಪ್ರೇಮದ ಊರಲಿ’ ಚಿತ್ರದ ನಿರ್ದೇಶಕ ಮನೋಜ್ ಕುಮಾರ್. ಈ ಬ್ಯಾಟರಿ ಸನ್ನಿವೇಶ ವೈರಲ್ ಆಗಲು ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿಗಿಂತ ಹೆಚ್ಚಾಗಿ ನಿರ್ದೇಶಕರ ಹಿನ್ನೆಲೆಯೇ ಕಾರಣ ಎಂಬುದು ಬಹುತೇಕರಿಗೆ ತಿಳಿದಿಲ್ಲ ಎನಿಸುತ್ತದೆ. ಹೌದು, ತಾವು ನಿರ್ದೇಶಿಸಿದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದಾಗ ಟಾರ್ಚ್ ಬಾಯ್‌ನಂತೆ ಪ್ರವೇಶಿಸಿದ ಮನೋಜ್ ಕುಮಾರ್ ಅವರಿಗೆ ಚಿತ್ರರಂಗದಲ್ಲಿ ದೊರೆತ ಮೊದಲ ಉದ್ಯೋಗವೇ ಅದೇ ಥಿಯೇಟರ್ ಟಾರ್ಚ್ ಬಾಯ್ ಕೆಲಸವಾಗಿತ್ತು.
ಡಾ ರಾಜ್‌ಕುಮಾರ್ ಅವರ ಸ್ಫೂರ್ತಿಯಿಂದ ಸಿದ್ಧವಾದ ಕಥೆಯುಳ್ಳ ‘ಅಕ್ಷಿ’ ಚಿತ್ರ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದವರು, ದರ್ಶನ್ ಹಾಗೂ ಮಾಲಾಶ್ರೀ ಅವರ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದವರು, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಬಳಿ ಸಹಾಯಕನಾಗಿದ್ದವರು ಎಂಬುದು ಮನೋಜ್ ಕುಮಾರ್ ಅವರ ಬಗೆಗಿನ ಪರಿಚಿತ ಮಾಹಿತಿ. ಆದರೆ, ಇದೆಲ್ಲಕ್ಕೂ ಮುನ್ನ ಅವರು ಟಾರ್ಚ್ ಬಾಯ್ ಆಗಿ ದುಡಿದಿದ್ದರು ಎಂಬುದು ಅಚ್ಚರಿಯ ವಿಷಯ. ಆ ಕುರಿತು ಅವರ ಮಾತುಗಳಲ್ಲೇ ಕೇಳಿ.
ಟಾರ್ಚ್ ಬಾಯ್ ಕೆಲಸ
ನಾನು ನಿರ್ದೇಶಕನಾಗುವ ಗುರಿಯೊಂದಿಗೆ ಗಾಂಧಿನಗರಕ್ಕೆ ಬಂದೆ. ಆದರೆ, ಅಂದುಕೊಂಡಷ್ಟು ಬೇಗ ಆ ಅವಕಾಶ ಸಿಗಲಿಲ್ಲ. ಬದುಕು ಸಾಗಿಸುವುದೇ ಸವಾಲಾಗಿತ್ತು. ಅಂತಹ ಸಂಕಷ್ಟದ ಸಮಯದಲ್ಲಿ ಚಿತ್ರರಂಗದಲ್ಲಿ ನನಗೆ ಸಿಕ್ಕ ಮೊದಲ ಕೆಲಸ ಸಂತೋಷ್ ಚಿತ್ರಮಂದಿರದಲ್ಲಿ ಟಾರ್ಚ್ ಬಾಯ್ ಆಗಿ. ನಾನು ಅನೇಕ ಸಿನಿಮಾಗಳಿಗೆ ಟಾರ್ಚ್ ಬಾಯ್ ಆಗಿ ದುಡಿದಿದ್ದೇನೆ. ಈ ಪೈಕಿ ಪುನೀತ್ ರಾಜ್‌ಕುಮಾರ್ ನಟನೆಯ ‘ಅರಸು’ ಚಿತ್ರವನ್ನು ನಾನು ಮರೆಯಲಾರೆ.
ನಾನು ಟಾರ್ಚ್ ಬಾಯ್ ಆಗಿ ಕೆಲಸ ಮಾಡಿದ್ದ ಸಂತೋಷ್ ಥಿಯೇಟರ್ ಪಕ್ಕದಲ್ಲೇ ಇರುವ ನರ್ತಕಿ ಚಿತ್ರಮಂದಿರದಲ್ಲಿ ಈಗ ನನ್ನ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ರಾತ್ರಿ ವೇಳೆ ಹೌಸ್‌ಫುಲ್ ಆದಾಗ ನಮ್ಮನ್ನು ಥಿಯೇಟರ್ ಒಳಗೆ ಬಿಡುತ್ತಿರಲಿಲ್ಲ. ಶೋ ಮುಗಿದ ಮೇಲೆ ಅಲ್ಲೇ ಹಾಸಿಗೆ ಹಾಸಿಕೊಂಡು ಥಿಯೇಟರ್ ಮುಂದೆ ಮಲಗುತ್ತಿದ್ದೆವು. ಇವತ್ತು ಅದೇ ಥಿಯೇಟರ್ ಮುಂದೆ ನನ್ನ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇದು ನನ್ನ 18 ವರ್ಷಗಳ ಕನಸು. ‘ಪ್ರೇಮದ ಊರಲಿ’ ಚಿತ್ರಕ್ಕೆ ಮತ್ತು ಈ ಚಿತ್ರವನ್ನು ಗೆಲ್ಲಿಸುತ್ತಿರುವ ಇಡೀ ಕರ್ನಾಟಕಕ್ಕೆ ನಾನು ಋಣಿ ಎಂದು ಮನೋಜ್ ಕುಮಾರ್ ಭಾವುಕರಾಗುತ್ತಾರೆ.
17 ಕೋಟಿಗೂ ಹೆಚ್ಚು ಕೆಲೆಕ್ಷನ್
ಟಾರ್ಚ್ ಬಾಯ್ ಆಗಿ ಕೆಲಸ ಮಾಡುತ್ತಾ, ಸಿನಿಮಾ ಕನಸುಗಳನ್ನು ಕಾಣುತ್ತಲೇ ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರವು ಇಲ್ಲಿಯವರೆಗೆ 17 ಕೋಟಿಗೂ ಹೆಚ್ಚು ಕೆಲೆಕ್ಷನ್ ಮಾಡಿದೆ. ಇದೇ ಕಲೆಕ್ಷನ್ ಮುಂದುವರೆದರೆ 50 ಕೋಟಿ ಗಳಿಕೆಯ ಮೈಲಿಗಲ್ಲು ತಲುಪುವುದು ಖಚಿತ ಎನ್ನುತ್ತಿದೆ ಚಿತ್ರರಂಗ. ಒಂದು ವೇಳೆ ಹಾಗಾದಲ್ಲಿ, ಇದು ಕನ್ನಡ ಚಿತ್ರವೊಂದರ ಐತಿಹಾಸಿಕ ದಾಖಲೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ಜೊತೆಗೆ ‘50 ಕೋಟಿ ಮುಟ್ಟಿದ ಟಾರ್ಚ್ ಬಾಯ್ ನಿರ್ದೇಶನದ ಚಿತ್ರ’ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಲಿದೆ.




