ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿ ವೇಷ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ ಸಂಪನ್ನ 180ಕ್ಕೂ ಅಧಿಕ ಜನರಿಂದ ಶಿಬಿರದ ಸದುಪಯೋಗ
ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿ ವೇಷ ತಂಡ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ ಸಂಪನ್ನ

ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್ ತನ್ನ 11ನೇ ವರ್ಷದ ಸೇವೆಯ ಅಂಗವಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ, ಉಡುಪಿ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿತು. ಅಕ್ಟೋಬರ್ 2ರಂದು ಬೆಳಿಗ್ಗೆ ಬೈಲೂರು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆದ ಶಿಬಿರದಲ್ಲಿ 180ಕ್ಕೂ ಹೆಚ್ಚು ಮಂದಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. ಅಗತ್ಯವಿರುವವರಿಗೆ ಉಚಿತ ಔಷಧಿ ವಿತರಿಸಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಮುಂದಿನ ಚಿಕಿತ್ಸೆಗೆ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಯಿತು. ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆಗೆ ವ್ಯವಸ್ಥೆ ಮಾಡಲಾಯಿತು. ಶಿಬಿರವನ್ನು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಾದ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಮಾತನಾಡಿ ಕಣ್ಣಿನ ತಪಾಸಣೆಯನ್ನು ಆರಂಭದಲ್ಲಿಯೇ ಮಾಡಿಸಿಕೊಳ್ಳದೇ ದೃಷ್ಟಿಹೀನತ್ವ ಹೊಂದುತ್ತಾರೆ. ನಾವು ಉಡುಪಿಯ ಶಾಸಕರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿ ನಮ್ಮ ತಾಲೂಕನ್ನು ಅಂಧಮುಕ್ತ ಮಾಡುವ ನಿಟ್ಟಿನಲ್ಲಿ 'ಸರ್ವರಿಗೂ ನಯನ' ಸರಣಿ ಉಚಿತ ಶಿಬಿರಗಳನ್ನು ನಡೆಸಿ ಕಣ್ಣಿನ ಸ್ವಾಸ್ಥ್ಯ ಕಾಪಾಡಲು ನಿಶ್ಚಯಿಸಿದ್ದೇವೆ ಎಂದರು. ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ತಾನು ಕಂಡಂತೆ ಅತೀ ಶಿಸ್ತಿನ ಹುಲಿವೇಷ ತಂಡವಾಗಿದ್ದು, ಅರ್ಹವಾಗಿಯೇ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿರುತ್ತದೆ ಎಂದರು. ಸ್ವತಃ ಶಿಬಿರದಲ್ಲಿ ಭಾಗವಹಿಸಿ ರೋಗಿಗಳ ನೇತ್ರ ತಪಾಸಣೆ ನಡೆಸಿ, ಅವರ ಕಣ್ಣಿನ ಸಮಸ್ಯೆಗಳನ್ನು ಪರಿಶೀಲಿಸಿದರು ಹಾಗೂ ಅಗತ್ಯ ಚಿಕಿತ್ಸೆಯ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಯಶ್ಪಾಲ್ ಎ. ಸುವರ್ಣ ಅವರು ಭಾಗವಹಿಸಿದರು. ಅವರು ಮಾತನಾಡುತ್ತಾ, ಪ್ರಸಾದ್ ನೇತ್ರಾಲಯ ಹಾಗೂ ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಜಂಟಿಯಾಗಿ ನಡೆಸುತ್ತಿರುವ ಈ ಶಿಬಿರವು ಜನರಿಗೆ ನೇತ್ರ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗಲಿ, ಇಂತಹ ಸಮಾಜ ಸೇವಾ ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದರು. ಗೌರವ ಅತಿಥಿಗಳಾಗಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ, ಬೈಲೂರು ಇದರ ಮೊಕ್ತೇಸರರಾದ ಶ್ರೀ ಮೋಹನ್ ಮುದ್ದಣ್ಣ ಶೆಟ್ಟಿ ಹಾಗೂ ತಂಡದ ಸಂಚಾಲಕ ಶ್ರೀ ನಾಗರಾಜ್ ಐತಾಳ್ ಉಪಸ್ಥಿತರಿದ್ದರು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ತಂತ್ರಿ ಅವರು ಶುಭಾಶಯದ ಮಾತನಾಡುತ್ತಾ, ದುರ್ಲಭವಾದ ಮಾನವ ಜನ್ಮ ದೊರೆತಿರುವಾಗ, ಅದನ್ನು ಇನ್ನೊಬ್ಬರ ಆರೋಗ್ಯ ಸೇವೆಗಾಗಿ ಮುಡಿಪಾಗಿಡುವುದು ಅತ್ಯಂತ ಶ್ರೇಯಸ್ಕರ ಕಾರ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಹಾಗೂ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಲಹಾ ಸಮಿತಿ ಸದಸ್ಯರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ ಅವರು ವಹಿಸಿದ್ದು, ಮಾತನಾಡುತ್ತಾ, ಹುಲಿವೇಷ ತಂಡದಲ್ಲಿ ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಹೇಗೆ ಪ್ರಥಮ ಸ್ಥಾನದಲ್ಲಿದೆಯೋ, ನೇತ್ರ ಆರೋಗ್ಯ ರಕ್ಷಣೆಯಲ್ಲಿ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ದೇಶದಲ್ಲಿಯೇ ಮುಂಚೂಣಿಯಲ್ಲಿದ್ದಾರೆ ಎಂದರು. ತಂಡದ ಸಂಚಾಲಕ ಶ್ರೀ ನಾಗರಾಜ್ ಐತಾಳ್ ಹಾಗೂ ಸದಸ್ಯರು ಈ ಸಂಧರ್ಭದಲ್ಲಿ ನೇತ್ರದಾನದ ಲಿಖಿತ ಪ್ರತಿಜ್ಞೆ ಮಾಡಿದರು. ಸಾರ್ವಜನಿಕರಲ್ಲಿ ನೇತ್ರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು, ಕಣ್ಣಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಹಾಗೂ ಅಗತ್ಯವಿರುವವರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿತ್ತು. ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್ನ 11ನೇ ವರ್ಷದ ಸೇವಾ ಕಾರ್ಯದ ಅಂಗವಾಗಿ ನಡೆದ ಈ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಶ್ರೀಮತಿ ವಿಭಾ ಆಚಾರ್ಯ ಪ್ರಾರ್ಥನೆ ನಡೆಸಿದರು. ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಶ್ರೀ ಮಧ್ವ ವಲ್ಲಭ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ತಂಡದ ನಾಯಕ ಶ್ರೀ ಗೌತಮ್ ಕೆ. ಬಿ ಕಾರ್ಯಕ್ರಮ ಸಂಯೋಜಿಸಿದರು.




