ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ಆಂಧ್ರಕ್ಕೆ 57 ರನ್ ಮುನ್ನಡೆ; 19ರ ಹರೆಯದ ರಾಹುಲ್ ಶತಕ
ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಆಂಧ್ರ ತಂಡವು ಮುನ್ನಡೆ ಸಾಧಿಸಿದೆ. ಸೀರಾಂ ವೆಂಕಟ ರಾಹುಲ್ ಅವರ ಅಜೇಯ ಶತಕ ಮತ್ತು ರೇವಂತ್ ರೆಡ್ಡಿ ಅವರ ಅದ್ಭುತ ಆಟದಿಂದ ಆಂಧ್ರ ತಂಡವು ಎರಡನೇ ದಿನದಂತ್ಯಕ...

ವಿಜಯವಾಡ: ಈ ಬಾರಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ಸಾಧಾರಣ ಬ್ಯಾಟಿಂಗ್ ಬಳಿಕ ಬೌಲಿಂಗ್ ವಿಭಾಗದ ನೀರಸ ಪ್ರದರ್ಶನದಿಂದಾಗಿ ರಾಜ್ಯ ತಂಡ ಆಂಧ್ರಕ್ಕೆ ಮುನ್ನಡೆ ಬಿಟ್ಟುಕೊಟ್ಟಿತು. 2ನೇ ದಿನದಂತ್ಯಕ್ಕೆ ಆಂಧ್ರ 6 ವಿಕೆಟ್ ನಷ್ಟದಲ್ಲಿ 331 ರನ್ ಕಲೆಹಾಕಿದ್ದು, 57 ರನ್ ಮುನ್ನಡೆ ಪಡೆದಿದೆ.
ಮೊದಲ ದಿನ ರಾಜ್ಯ ತಂಡ 274 ರನ್‌ಗೆ ಅಲೌಟಾಗಿತ್ತು. ಇದಕ್ಕೆ ಉತ್ತರವಾಗಿ ಆಂಧ್ರ 2 ವಿಕೆಟ್‌ಗೆ 16 ರನ್ ಗಳಿಸಿತ್ತು. ಸೋಮವಾರ ಮೊದಲ ಅವಧಿಯಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ, ಬಳಿಕ ತಂಡ ಚೇತರಿಸಿಕೊಂಡಿತು. ಒಂದು ಹಂತದಲ್ಲಿ ತಂಡ 116 ರನ್‌ಗೆ 5 ವಿಕೆಟ್ ನಷ್ಟಕ್ಕೊಳಗಾಗಿತ್ತು. ಶೇಖ್ ರಶೀದ್(54 ರನ್) ಅರ್ಧಶತಕ ಸಿಡಿಸಿದರೂ ತಂಡ ಹಿನ್ನಡೆ ಭೀತಿಯಲ್ಲಿತ್ತು. ಈ ವೇಳೆ ತಂಡಕ್ಕೆ ನೆರವಾಗಿದ್ದು ಸೀರಾಂ ವೆಂಕಟ ರಾಹುಲ್ ಹಾಗೂ ರೇವಂತ್ ರೆಡ್ಡಿ.
2 ದಿನಗಳ ಹಿಂದಷ್ಟೇ 19ನೇ ವರ್ಷಕ್ಕೆ ಕಾಲಿಟ್ಟಿದ್ದ ರಾಹುಲ್ ಅಜೇಯ ಶತಕ(187 ಎಸೆತಗಳಲ್ಲಿ 108) ಸಿಡಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರ ಜೊತೆ 6ನೇ ವಿಕೆಟ್‌ಗೆ 202 ರನ್ ಜೊತೆಯಾಟವಾಡಿದ ರೇವಂತ್ 97 ರನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಶತಕದಿಂದ ವಂಚಿತರಾದರು. ರಾಜ್ಯದ ಪರ ಶಿಖರ್ ಶೆಟ್ಟಿ 3, ಮಾಧವ್ ಬಜಾಜ್ 2 ವಿಕೆಟ್ ಕಿತ್ತರು.
ಸ್ಕೋರ್: ಕರ್ನಾಟಕ 82.2 ಓವರಲ್ಲಿ 274/10, ಆಂಧ್ರ 2ನೇ ದಿನದಂತ್ಯಕ್ಕೆ 331/6 (ರಾಹುಲ್ ಔಟಾಗದೆ 108, ರೇವಂತ್ ರೆಡ್ಡಿ 97, ಶಿಖರ್ ಶೆಟ್ಟಿ 3-72, ಮಾಧವ್ 2-88).
ಕೇರಳದ ವಿರುದ್ಧ ಜಾರ್ಖಂಡ್ 587
ಜಮ್ಶೆಡ್‌ಪುರ: ಕೇರಳ ವಿರುದ್ಧ ರಣಜಿ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಾರ್ಖಂಡ್ ತಂಡ 587 ರನ್‌ಗೆ ಆಲೌಟಾಯಿತು. ಶಿಖರ್ ಮೋಹನ್ 143, ನಾಯಕ ವಿರಾಟ್ ಸಿಂಗ್ 108, ಆದಿತ್ಯ ಸಿಂಗ್ 147 ರನ್ ಸಿಡಿಸಿದರು. ಕೇರಳ ಪರ ವೈಶಾಕ್ ಚಂದ್ರನ್ 5, ಜಲಜ್ ಸಕ್ಸೇನಾ 3 ವಿಕೆಟ್ ಕಿತ್ತರು.
ಜಮ್ಮು-ಕಾಶ್ಮೀರಕ್ಕೆ ಇನ್ನಿಂಗ್ಸ್ ಹಿನ್ನಡೆ
ಶ್ರೀನಗರ: ರಣಜಿಯ ಹಾಲಿ ಚಾಂಪಿಯನ್ ಜಮ್ಮು-ಕಾಶ್ಮೀರ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮಧ್ಯಪ್ರದೇಶ 196ಕ್ಕೆ ಆಲೌಟಾಗಿತ್ತು. ಜೆಕೆ 120 ರನ್‌ಗೆ ಆಲೌಟಾಗಿ 76 ರನ್ ಹಿನ್ನಡೆಗೊಳಗಾಯಿತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಮಧ್ಯಪ್ರದೇಶ 5 ವಿಕೆಟ್‌ಗೆ 59 ರನ್ ಗಳಿಸಿದ್ದು, 135 ರನ್ ಮುನ್ನಡೆಯಲ್ಲಿದೆ.
ತುಷಾರ್ ಹ್ಯಾಟ್ರಿಕ್; ಮುಂಬೈ ಅಧಿಪತ್ಯ
ಮುಂಬೈ: ಚಂಡೀಗಢ ವಿರುದ್ಧ ಪಂದ್ಯದಲ್ಲಿ ಮುಂಬೈ ಸಂಪೂರ್ಣ ಮೇಲುಗೈ ಸಾಧಿಸಿದೆ. ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 429 ರನ್ ಗಳಿಸತ್ತು. ಬಳಿಕ ಚಂಡೀಗಢ ಕೇವಲ 78 ರನ್‌ಗೆ ಆಲೌಟಾಯಿತು. ತುಷಾರ್ ದೇಶಪಾಂಡೆ ಹ್ಯಾಟ್ರಿಕ್ ಸಹಿತ 5 ವಿಕೆಟ್ ಕಿತ್ತರು. ಫಾಲೋಆನ್‌ಗೆ ತುತ್ತಾದ ಚಂಡೀಗಢ 0 ರನ್‌ಗೆ 1 ವಿಕೆಟ್ ಕಳೆದುಕೊಂಡಿದೆ.




