ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕ್ರೀಡೆ

Hong Kong Sixes ಟೂರ್ನಿಗೆ ಬಲಿಷ್ಠ ಪಾಕಿಸ್ತಾನ ತಂಡ ಪ್ರಕಟ; ಮೊದಲ ದಿನವೇ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ..!

ಅಕ್ಟೋಬರ್ 30ರಿಂದ ಆರಂಭವಾಗಲಿರುವ ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಅಬ್ಬಾಸ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡ ಪ್ರಕಟವಾಗಿದೆ. ಇದೇ ದಿನ ಭುವನೇಶ್ವರ್ ಕುಮಾರ್ ನೇತೃತ್ವದ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪ...

Hong Kong Sixes ಟೂರ್ನಿಗೆ ಬಲಿಷ್ಠ ಪಾಕಿಸ್ತಾನ ತಂಡ ಪ್ರಕಟ; ಮೊದಲ ದಿನವೇ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ..!
ಹಂಚಿಕೊಳ್ಳಿ:

ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಪಾಕ್ ಸಿದ್ಧತೆ; ಹಾಂಕಾಂಗ್ ಸಿಕ್ಸಸ್‌ಗೆ ಬಲಿಷ್ಠ ತಂಡ ಪ್ರಕಟ

ಇಸ್ಲಾಮಾಬಾದ್: 2026ನೇ ಸಾಲಿನ ಹಾಂಕಾಂಗ್ ಸಿಕ್ಸಸ್ ಟೂರ್ನಿಯು ಇದೇ ಅಕ್ಟೋಬರ್ 30ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಕೆಲವು ದಿನಗಳ ಹಿಂದಷ್ಟೇ ಏಳು ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿತ್ತು. ಇದೀಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಈ ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಕಳೆದ ಸೀಸನ್ ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಬ್ಬಾಸ್ ಅಫ್ರಿದಿ ನೇತೃತ್ವದಲ್ಲಿ ಪಾಕಿಸ್ತಾನ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಅಬ್ಬಾಸ್ ಅಫ್ರಿದಿ ನೇತೃತ್ವದಲ್ಲೇ ಪಾಕಿಸ್ತಾನ ತಂಡವು ಕಪ್ ಗೆಲ್ಲುವ ಕನಸಿನೊಂದಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ರೆಡಿಯಾಗಿದೆ.

ಬಲಿಷ್ಠ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ:

2025ನೇ ಸಾಲಿನ ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಬ್ಬಾಸ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ಕುವೈತ್ ತಂಡವನ್ನು 43 ರನ್‌ಗಳ ಅಂತರದಲ್ಲಿ ಅನಾಯಾಸವಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಲಿಷ್ಠ ಆಟಗಾರರನ್ನೊಳಗೊಂಡ ತಂಡವನ್ನೇ ಈ ಬಾರಿ ಕಣಕ್ಕಿಳಿಸಿದೆ.

ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಬ್ಬಾಸ್ ಅಫ್ರಿದಿ ಪಾಕಿಸ್ತಾನ ತಂಡದ ನಾಯಕರಾಗಿದ್ದು, ಖವಾಜಾ ನಫೆ, ಇರ್ಫಾನ್ ಖಾನ್, ಮೊಹಮ್ಮದ್ ಶೆಹಜಾದ್, ಅಹಮದ್ ಡೇನಿಯಲ್, ಅಬ್ದುಲ್ ಸಮದ್ ಹಾಗೂ ಸಾದ್ ಮಸೂದ್ ಅವರನ್ನು ನೇಮಕ ಮಾಡಲಾಗಿದೆ.

ಅಕ್ಟೋಬರ್ 30ರಂದೇ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್:

ಹಾಂಕಾಂಗ್ ಸಿಕ್ಸಸ್ ಟೂರ್ನಿಯು ಕೇವಲ ಮೂರು ದಿನಗಳ ಕಾಲ ನಡೆಯುವ ಹೈವೋಲ್ಟೇಜ್ ಸರಣಿಯಾಗಿದೆ. ಅಕ್ಟೋಬರ್ 30ರಂದು ಟೂರ್ನಿ ಆರಂಭವಾಗಲಿದ್ದು, ನವೆಂಬರ್ 01ರಂದು ಫೈನಲ್ ಪಂದ್ಯ ನಡೆಯಲಿದೆ. ಪಾಕಿಸ್ತಾನ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ. ಪಾಕಿಸ್ತಾನವು ಅಕ್ಟೋಬರ್ 30ರಂದು ಯುಎಇ ಎದುರು ಮೊದಲ ಪಂದ್ಯವನ್ನಾಡಲಿದೆ. ಅದೇ ದಿನವೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೂಡಾ ಕಾದಾಡಲಿವೆ. ಮೇಲ್ನೋಟಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು, ಜಿದ್ದಾಜಿದ್ದಿನ ಪೈಪೋಟಿ ಮೂಡಿಬರುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡ ಹೀಗಿದೆ: ಭುವನೇಶ್ವರ್ ಕುಮಾರ್(ನಾಯಕ), ಕೃನಾಲ್ ಪಾಂಡ್ಯ, ನಿತೀಶ್ ರಾಣಾ, ಶಶಾಂಕ್ ಸಿಂಗ್, ಟಿ ನಟರಾಜನ್, ರಾಹುಲ್ ತ್ರಿಪಾಠಿ ಹಾಗೂ ರಾಹುಲ್ ತೆವಾಟಿಯಾ.

ಹಂಚಿಕೊಳ್ಳಿ: