ಸ್ಟಿಂಗ್ ಪಾರ್ಟ್-2: ವಿಷಯ ಗೊತ್ತಾದ ಮೇಲೆ ತಿಳಿಸುತ್ತೇವೆ ಎಂದ ಸತೀಶ್ ಜಾರಕಿಹೊಳಿ
ಅಹಿಂದ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಆದರೆ ಎಸ್‌ಐಆರ್ ಹೋರಾಟ ಮುಗಿಯುವವರೆಗೆ ಯಾವುದೇ ಡಿನ್ನರ್ ಸಭೆ ನಡೆಸುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳು ಕ...

ಬೆಂಗಳೂರು: ಅಹಿಂದ ನಾಯಕರು ಪುನಃ ಒಂದಾಗುವುದಲ್ಲ, ಅಹಿಂದ ವಿಷಯ ಬಂದಾಗ ನಾವೆಲ್ಲರೂ ಒಂದಾಗಿಯೇ ಇದ್ದೇವೆ. ಎಸ್‌ಐಆರ್ ಹೋರಾಟ ಮುಕ್ತಾಯವಾಗುವವರೆಗೆ ಸದ್ಯಕ್ಕೆ ಯಾವುದೇ ಸಭೆಯನ್ನು ಆಯೋಜಿಸುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಅಹಿಂದ ವಿಷಯದಲ್ಲಿ ನಾವು ಒಗ್ಗಟ್ಟಾಗಿಯೇ ಇರುತ್ತೇವೆ. ಇತರೆ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿ ಇರುತ್ತವೆ. ಆದರೆ ಅಹಿಂದ ವಿಚಾರದಲ್ಲಿ ನಮ್ಮಲ್ಲಿ ಒಗ್ಗಟ್ಟು ಇದೆ ಎಂದು ಅವರು ನುಡಿದರು.
ಅಹಿಂದ ನಾಯಕರ ಡಿನ್ನರ್ ಸಭೆ ನಡೆಸುವ ಕುರಿತು ಪ್ರತಿಕ್ರಿಯೆ ನೀಡಿ, ‘ಸದ್ಯಕ್ಕೆ ಇಲ್ಲ, ಎಸ್‌ಐಆರ್ ಮುಗಿಯುವ ತನಕ ಯಾವುದೇ ಸಭೆ ಇರುವುದಿಲ್ಲ. ದೆಹಲಿಯಲ್ಲಿ ಎಸ್‌ಐಆರ್ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾನೂ ದೆಹಲಿಗೆ ತೆರಳುತ್ತೇನೆ. ಬೇರೆ ಬೇರೆ ದಿನಗಳಲ್ಲಿ ನಾವು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ’ ಎಂದು ಮಾತ್ರ ಹೇಳಿದರು.
ಸ್ಟಿಂಗ್ ಪಾರ್ಟ್-2 ಗೊತ್ತಾದ ಮೇಲೆ ಹೇಳ್ತೇನೆ
ಸ್ಟಿಂಗ್ ಪರಿಣಿತರನ್ನು ಮುಖ್ಯಮಂತ್ರಿ ಭೇಟಿ ಮಾಡಿದ್ದರು ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ನಮಗೆ ತಿಳಿದಿಲ್ಲ, ನಮಗೆ ಗೊತ್ತಿರುವಷ್ಟನ್ನು ಹೇಳಿದ್ದೇವೆ. ಇದರ ಮುಂದಿನ ಭಾಗ ನಮ್ಮ ಬಳಿ ಇಲ್ಲ. ಪಾರ್ಟ್-1 ಅನ್ನು ಹೇಳಿದ್ದೇವೆ, ಆದರೆ ಪಾರ್ಟ್-2 ಏನು ಎಂಬುದು ನಮಗೆ ತಿಳಿದಿಲ್ಲ. ವಿಷಯ ಗೊತ್ತಾದ ಮೇಲೆ ಅದನ್ನೂ ತಿಳಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ ನುಡಿದರು.
ಎಷ್ಟು ಪಾರ್ಟ್ ಇವೆ ಎಂಬ ಪ್ರಶ್ನೆಗೆ, ‘ಇದೆ ಎಂದು ಅವರು (ಸಿಎಂ) ಹೇಳಿಲ್ಲ. ಯಾರದು ಇದೆ ಎಂದಲ್ಲ, ಈ ರೀತಿ ಆಗಬಹುದು, ಮಾಡಬಹುದು. ಟ್ರ್ಯಾಪ್ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದರು. ಯಾರೇ ಬಂದರೂ ಎಚ್ಚರವಾಗಿರಿ ಎಂದಿದ್ದರು. ಸ್ಟಿಂಗ್ ಮಾಡಿದ್ದಾರೆ ಎಂದು ಎಲ್ಲೂ ಹೇಳಿಲ್ಲ’ ಎಂದು ಅವರು ತಿಳಿಸಿದರು.
ಬಹಿರಂಗ ಯಾರು ಪಡಿಸಬೇಕು?
ಯಾರ ಮೇಲೆ ಸ್ಟಿಂಗ್ ಆಗಿದೆ ಎಂಬುದನ್ನು ಬಹಿರಂಗಪಡಿಸಬೇಕೆಂಬ ಪ್ರತಿಪಕ್ಷಗಳ ಒತ್ತಾಯಕ್ಕೆ, ‘ಬಹಿರಂಗ ಯಾರು ಪಡಿಸಬೇಕು? ಯಾವ ಸಚಿವರ ಹೆಸರನ್ನೂ ಅವರು ಹೇಳಿಲ್ಲ. ಈ ರೀತಿ ಆಗಬಹುದು ಎಂದು ಮಾತ್ರ ಹೇಳಿದ್ದಾರೆ. ಹೀಗಿರುವಾಗ ಯಾರ ಹೆಸರನ್ನು ಬಹಿರಂಗಪಡಿಸಬೇಕು?’ ಎಂದು ಅವರು ಮರುಪ್ರಶ್ನಿಸಿದರು.



