‘ಪ್ರಜ್ವಲ್ ಪ್ರಕರಣದ ಹಿಂದಿದ್ದವರಿಂದಲೇ ಮಾಜಿ ಸಿಎಂ ಸ್ಟಿಂಗ್ ಆಪರೇಷನ್’: ಹೆಚ್ಡಿಕೆ ಸ್ಫೋಟಕ ಆರೋಪ
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ಹಿಂದೆ ಪ್ರಜ್ವಲ್ ರೇವಣ್ಣ ಪ್ರಕರಣದ ರೂವಾರಿಗಳೇ ಇದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 4 ನಿವೃತ್ತ ಪೊಲ...

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕದ ರಾಜಕೀಯ ವಲಯದಲ್ಲಿ ಸ್ಟಿಂಗ್ ಆಪರೇಷನ್ ವಿಷಯ ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಸಿದೆ. ಸಚಿವ ಸಂಪುಟದ ಸಭೆಯಲ್ಲಿ ಮಂತ್ರಿಗಳ ಸ್ಟಿಂಗ್ ಆಪರೇಷನ್ ನಡೆಯುತ್ತಿರುವ ವಿಚಾರವನ್ನು ಸಿಎಂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ ಬೆನ್ನಲ್ಲೇ, ರಾಜ್ಯದ ಮಾಜಿ ಸಿಎಂ ಒಬ್ಬರು ಸ್ಟೇ ತಂದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪಗಳನ್ನು ಮಾಡಿದ್ದು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. ಶಿವಕುಮಾರ್ ಅವರೇ ಸ್ವತಃ ನೀರು ಹಾಕಿ ಬೆಳೆಸಿದ ಸ್ಟಿಂಗ್ ಆಪರೇಷನ್ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಅವರು ಹೇಳಿದ್ದಾರೆ.
ಪ್ರಜ್ವಲ್ ಕೇಸ್ ಉಲ್ಲೇಖಿಸಿ ಡಿಕೆಶಿಗೆ ಹೆಚ್ಡಿಕೆ ಡಿಚ್ಚಿ
ನಮ್ಮ ಕುಟುಂಬದ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಚುನಾವಣೆ ನಡೆಯಲು 2 ದಿನ ಬಾಕಿ ಇರುವಾಗ ವಿಡಿಯೋಗಳನ್ನು ಪೆನ್ಡ್ರೈವ್ ಮಾಡಿ ಹಂಚುವ ಕೆಲಸ ಮಾಡಿದರು. 5 ವರ್ಷದ ಹಿಂದೆ ದೂರು ನೀಡಿದ್ದ ಮಹಿಳೆಯನ್ನು ಕರೆಸಿ ಇಲ್ಲಿ ದೂರು ದಾಖಲಿಸಿದರು. ರಾಹುಲ್ ಗಾಂಧಿ ಈ ವಿಷಯವನ್ನು ದೇಶದಾದ್ಯಂತ ಪ್ರಸ್ತಾಪಿಸಿ ದೇವೇಗೌಡರ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದರು. ಹಾಸನದ ಮತ್ತೊಬ್ಬ ವ್ಯಕ್ತಿ, ದೇವರಾಜೇಗೌಡ ಹಾಗೂ ಇನ್ನೊಬ್ಬರು ಮಾತನಾಡಿದ ಆಡಿಯೋ ಹೊರಬಂತು. ಡಿಕೆ ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ದೇವರಾಜೇಗೌಡಗೆ ಫೋನ್ ನೀಡುತ್ತಾರೆ. ಆಗ ಈ ಹೆಣ್ಣುಮಗಳನ್ನ ಹುಡುಕಲು ಸುಸ್ತಾಗಿದ್ದೇನೆ ಇರಪ್ಪ ಎಂದು ಡಿಕೆಶಿ ಹೇಳುತ್ತಾರೆ. ವಿಡಿಯೋ ಹಾಕಿ ಹೆಣ್ಣು ಮಕ್ಕಳ ಕುಟುಂಬದ ಮರ್ಯಾದೆ ಕಳೆದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಈಗ ಮಾಜಿ ಸಿಎಂ ಸ್ಟೇ ಪಡೆದುಕೊಂಡಿದ್ದಾರೆ. ಅಂತಿಮವಾಗಿ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ತಮ್ಮ ಸಚಿವರ ಕುರಿತು ಸಿಎಂ ಮಾಹಿತಿ ಪಡೆಯುತ್ತಿದ್ದಾರೆ’
ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ನಡೆದ ವಿಚಾರದ ಕುರಿತು ನಾನು ಮಾತನಾಡಿದ್ದೆ. 4 ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ತಮ್ಮ ಸಚಿವರ ಬಗ್ಗೆ ಸಿಎಂ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ವಿಷಯ ಕೇಳಿ ನನಗೆ ಅಚ್ಚರಿಯಾಯಿತು ಎಂದು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
‘ಉಪ್ಪು ತಿಂದವರು ನೀರು ಕುಡಿಯಲೇಬೇಕು’
ಮತ್ತೊಂದೆಡೆ ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ಶಾಸಕ ತನ್ವೀರ್ ಸೇಠ್, ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಕಡ್ಡಾಯ ಎಂದು ಹೇಳಿದ್ದಾರೆ. ಕೆಲವರು ತಮ್ಮ ಮಾನಕ್ಕೆ ಹೆದರಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮಾನವಂತರಿಗೆ ಅವಮಾನಗಳನ್ನು ಸಹಿಸಿಕೊಳ್ಳುವುದು ಕಷ್ಟಕರ. ಸ್ಟಿಂಗ್ ಆಪರೇಷನ್ ಬಗ್ಗೆ ಹೇಳಿಕೆ ನೀಡುತ್ತಿರುವವರು, ಆ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಸತ್ಯವನ್ನು ಮರೆಮಾಡುವುದು ಕೂಡ ಅಪರಾಧವೇ. ಸುಮ್ಮನೆ ಹೇಳಿಕೆಗಳನ್ನು ನೀಡಿ ಯಾಕೆ ಗೊಂದಲ ಉಂಟುಮಾಡುತ್ತಿದ್ದಾರೆ? ಸುಮ್ಮನೆ ಹಿಟ್ ಆ್ಯಂಡ್ ರನ್ ಮಾಡಿದರೆ ಏನು ಪ್ರಯೋಜನ? ಪ್ರತಿದಿನ ಸ್ಟಿಂಗ್ ಅಪರೇಷನ್ ಎನ್ನುವ ರಬ್ಬರ್ ಎಳೆಯಬಾರದು. ಸಾಕ್ಷಿಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಸ್ಟಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ತನಿಖೆಯಾಗಲಿ. ಇಂದಿನ ದಿನಮಾನದಲ್ಲಿ ರಾಜಕಾರಣ ಮಾಡುವುದೇ ಕಷ್ಟವಾಗಿದೆ. ಎಲ್ಲಿ ಯಾವ ಕ್ಯಾಮರಾ ಅಡಗಿದೆ ಎಂಬುದು ತಿಳಿಯದ ಸ್ಥಿತಿ ಇದೆ. ಇದು ರಾಜಕಾರಣದ ಕೆಟ್ಟ ಕಾಲ. ಶಾಸಕರು ಮನುಷ್ಯರೇ, ಶಾಸಕರು ಆಕಾಶದಿಂದ ಇಳಿದು ಬಂದಿಲ್ಲ. ಈ ಸ್ಟಿಂಗ್ ಆಪರೇಷನ್ ವಿಷಯವನ್ನು ಬಲವಾಗಿ ಖಂಡಿಸುತ್ತೇನೆ. ಕೆಲವರು ಅಧಿಕಾರಕ್ಕಾಗಿ ಮತ್ತೊಬ್ಬರ ಚಾರಿತ್ರ್ಯಹರಣ ಮಾಡಲು ಇಂತಹ ಕೃತ್ಯಕ್ಕೆ ಕೈಹಾಕುತ್ತಾರೆ. ನನಗೆ ಈ ಬಗ್ಗೆ ಯಾವುದೇ ಅಭ್ಯಾಸವಿಲ್ಲ. ನಾನು ಇಂತಹ ಯಾವ ವಿದ್ಯೆಯನ್ನು ಕಲಿತಿಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.
‘ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ತನಿಖೆ ಮಾಡಿಸಲಿ’
ಸ್ಟಿಂಗ್ ಆಪರೇಷನ್ ಸಂಬಂಧ ಸಿಎಂ ತನಿಖೆ ನಡೆಸಬೇಕು ಎಂದು ಮತ್ತೋರ್ವ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಕೂಡ ಒತ್ತಾಯಿಸಿದ್ದಾರೆ. ರಾಜ್ಯದ ಜನರಲ್ಲಿರುವ ಗೊಂದಲವನ್ನು ನಿವಾರಿಸಬೇಕು. ನನ್ನ ಮೇಲೂ ಅಟೆಮ್ಟ್ ಮಾಡಿದ್ದರು. ಸರ್ಕಾರಿ ನಿವಾಸ ಆಗಿದ್ದರಿಂದ ಸೆಕ್ಯೂರಿಟಿಗೆ ಸಿಸಿಟಿವಿ ಇರುತ್ತದೆ. ಸಿಎಂಗೆ ಜವಾಬ್ದಾರಿ ಇದೆ, ತನಿಖೆ ಮಾಡಿಸಿ ತೆರೆ ಎಳೆಯಬೇಕು. ಮುಖ್ಯಮಂತ್ರಿಗಳೇ ಹೇಳಿರೋದ್ರಿಂದ ಅವರೇ ತನಿಖೆ ಮಾಡಿಸಲಿ. ಸಾಮಾನ್ಯ ಜನರ ತರಹ ಮಾತನಾಡಿದರೆ ಆಗಲ್ಲ, ನಾವು ಒಪ್ಪಲ್ಲ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



