ಆರ್.ಅಶೋಕ: ಸ್ಟಿಂಗ್ ಆಪರೇಷನ್ ಬಗ್ಗೆ ಸುಮ್ಮನೆ ಆರೋಪಿಸಬೇಡಿ, ಕೂಡಲೇ FIR ದಾಖಲಿಸಿ
ಹತ್ತು ಸಚಿವರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಕೂಡಲೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈ ವಿಚಾರದಿಂದ ಇಡೀ...
ಬೆಂಗಳೂರು (ಅ.11): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಆಪರೇಶನ್ ವಿಚಾರದಲ್ಲಿ ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹತ್ತು ಸಚಿವರ ವಿರುದ್ಧ ಸ್ಟಿಂಗ್ ಆಪರೇಶನ್ ನಡೆದಿದೆ, ಸಿ.ಡಿ. ಇದೆ ಹಾಗೂ ಭ್ರಷ್ಟಾಚಾರದ ಮಾಹಿತಿ ಇದೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಇಡೀ ಸಚಿವ ಸಂಪುಟವೇ ಮಲಿನಗೊಂಡಂತಾಗಿದೆ. ಸಚಿವರು ಭ್ರಷ್ಟರಾಗಿದ್ದಾರೆ ಮತ್ತು ಯಾರೋ ಸಿಕ್ಕಿಬಿದ್ದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮುಖ್ಯಮಂತ್ರಿಯೊಬ್ಬರು ತಮ್ಮದೇ ಸಚಿವ ಸಂಪುಟದ ಸದಸ್ಯರ ಮೇಲೆ ಸ್ಟಿಂಗ್ ಆಪರೇಶನ್ ನಡೆದಿದೆ ಎಂದು ಹೇಳಿದಾಗ, ಸಚಿವರ ಕಾರ್ಯವೈಖರಿಯ ಬಗ್ಗೆ ಸಂಶಯ ಉಂಟಾಗುತ್ತದೆ. ಸಚಿವರು ಈಗ ಮುಜುಗರದಲ್ಲಿ ಇರಬೇಕೋ ಅಥವಾ ರಾಜೀನಾಮೆ ನೀಡಬೇಕೋ ಎಂಬುದು ತಿಳಿಯುತ್ತಿಲ್ಲ, ಏಕೆಂದರೆ ಎಲ್ಲಾ ಸಚಿವರ ಮೇಲೂ ಅನುಮಾನ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಸ್ಟಿಂಗ್ ಆಪರೇಶನ್ ಮಾಡಿದವರ ವಿರುದ್ಧ ಎಫ್‌ಐಆರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಲ್ಲಿಗೆ ಹೋದರೂ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ನಿಜಕ್ಕೂ ತಾಕತ್ತಿದ್ದರೆ ಸ್ಟಿಂಗ್ ಆಪರೇಶನ್ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಈ ಕೃತ್ಯ ಎಸಗಿದವರು ಈ ರಾಜ್ಯದವರೇ ಅಥವಾ ಹೊರ ರಾಜ್ಯದವರೇ? ಇದಕ್ಕಾಗಿ ಎಷ್ಟು ಹಣ ವ್ಯಯವಾಗಿದೆ ಎಂಬಿತ್ಯಾದಿ ವಿಷಯಗಳು ತನಿಖೆಯ ಮೂಲಕ ಬೆಳಕಿಗೆ ಬರಬೇಕಿದೆ. ಇದು ಕೇವಲ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯವಲ್ಲ, ಇದು ಸರ್ಕಾರದ ಸಚಿವ ಸಂಪುಟದ ಘನತೆಯ ಪ್ರಶ್ನೆಯಾಗಿದೆ. ಎಫ್‌ಐಆರ್ ದಾಖಲಿಸುವುದಿಲ್ಲ ಎಂದಾದರೆ, ಮುಖ್ಯಮಂತ್ರಿಗಳು ಕೇವಲ ಗಾಳಿಯಲ್ಲಿ ಗುಂಡು ಹಾರಿಸುವವರು ಎಂಬುದು ಸಾಬೀತಾಗುತ್ತದೆ. ಬಿಜೆಪಿ, ಜೆಡಿಎಸ್ ವಿರುದ್ಧ ಸುಮ್ಮನೆ ಆರೋಪಿಸುವುದನ್ನು ನಿಲ್ಲಿಸಿ, ತನಿಖೆ ಮಾಡಿಸಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಕಳೆದ ಅಧಿವೇಶನದಲ್ಲೂ ಅವರು ಮೌನ ವ್ರತ ಆಚರಿಸಿದ್ದರು. ಅವರಿಗೆ ಈಗ ಗರ ಬಡಿದಂತಾಗಿದೆ. ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಜನರ ಮನಸ್ಸಿನಲ್ಲಿ ಅವರ ಬಗ್ಗೆ ಅಪಾರ ಗೌರವವಿದೆ. ಈ ಸಂದರ್ಭದಲ್ಲಾದರೂ ಅವರು ಮಾತನಾಡಬೇಕು ಮತ್ತು ಜನರ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು ಎಂದು ಅವರು ಹೇಳಿದರು.


