Tessolve: ಅಮೆರಿಕದ ವೆಕ್ಟರ್ ಲೈನ್ ಕ್ಯಾಪಿಟಲ್‌ನಿಂದ ₹630 ಕೋಟಿ ಬೃಹತ್ ಹೂಡಿಕೆ!
ಬೆಂಗಳೂರು ಮೂಲದ ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಕಂಪನಿ ಟೆಸ್ಸಾಲ್ವ್, ಅಮೆರಿಕದ ವೆಕ್ಟರ್ ಲೈನ್ ಕ್ಯಾಪಿಟಲ್‌ನಿಂದ ₹630 ಕೋಟಿ ಬೃಹತ್ ಹೂಡಿಕೆ ಪಡೆದುಕೊಂಡಿದೆ. ಈ ಅನುದಾನವನ್ನು ಕಂಪನಿಯ ತಾಂತ್ರಿಕ ಸಾಮರ್ಥ್ಯ ವೃದ್ಧಿ, ಜಾ...

ಬೆಂಗಳೂರಿನ ಹೀರೋ ಎಲೆಕ್ಟ್ರಾನಿಕ್ಸ್ ಸಮೂಹದ ಅಂಗವಾಗಿರುವ ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಸಂಸ್ಥೆ ಟೆಸ್ಸಾಲ್ವ್ (Tessolve), ತನ್ನ ವ್ಯವಹಾರವನ್ನು ವಿಸ್ತರಿಸುವ ಹಾಗೂ ಕಾರ್ಯತಂತ್ರದ ಸ್ವಾಧೀನ ಪ್ರಕ್ರಿಯೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಅಮೆರಿಕದ ವೆಕ್ಟರ್ ಲೈನ್ ಕ್ಯಾಪಿಟಲ್‌ನಿಂದ 75 ಮಿಲಿಯನ್ ಡಾಲರ್ (ಸುಮಾರು ₹630 ಕೋಟಿ) ಮೊತ್ತದ ಬೃಹತ್ ಹೂಡಿಕೆಯನ್ನು ಪಡೆದಿದೆ.
ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಮೇಲೆ ವಿಶೇಷ ಗಮನ ಹರಿಸುವ ವೆಕ್ಟರ್ ಲೈನ್ ಕ್ಯಾಪಿಟಲ್ ಸಂಸ್ಥೆಯು, ಭಾರತದಲ್ಲಿ ಮಾಡಿರುವ ಮೊದಲ ಹೂಡಿಕೆ ಇದಾಗಿದೆ. ಈ ಹೊಸ ಹೂಡಿಕೆದಾರ ಸಂಸ್ಥೆಯು ಟೆಸ್ಸೋಲ್ವ್‌ನ ಹಾಲಿ ಪ್ರಮುಖ ಹೂಡಿಕೆದಾರರಾದ 'ಟಿಪಿಜಿ' ಮತ್ತು ಸಿಂಗಾಪುರದ 'ನೊವೊ ಟೆಲ್ಲಸ್' ಸಮೂಹದೊಂದಿಗೆ ಕೈಜೋಡಿಸಿದೆ.
ತಾಂತ್ರಿಕ ಸಾಮರ್ಥ್ಯ ವೃದ್ಧಿ ಮತ್ತು ಮುಂಬರುವ ಸ್ವಾಧೀನಗಳು
ಟೆಸ್ಸೋಲ್ವ್‌ನ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ಸೇವಾ ವಲಯವನ್ನು ವಿಸ್ತರಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ಕಂಪನಿಯ ಅಸ್ತಿತ್ವವನ್ನು ಬಲಪಡಿಸುವುದು ಈ ಹೂಡಿಕೆಯ ಮುಖ್ಯ ಉದ್ದೇಶವಾಗಿದೆ. ಮುಂಬರುವ ಎರಡು ತ್ರೈಮಾಸಿಕಗಳಲ್ಲಿ ಹಲವು ಪ್ರಮುಖ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಟೆಸ್ಸೋಲ್ವ್ ಮಾತುಕತೆ ನಡೆಸುತ್ತಿದೆ.
ಎರಡು ದಶಕಗಳ ಹಿಂದೆ ಸಿಲಿಕಾನ್ ಪರೀಕ್ಷಾ ಎಂಜಿನಿಯರಿಂಗ್‌ನಿಂದ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ ಟೆಸ್ಸೋಲ್ವ್, ಇಂದು ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯ ನಿರ್ಮಿಸುವ ದೈತ್ಯ ಕಂಪನಿಗಳಿಗೆ ಸಂಪೂರ್ಣ ಚಿಪ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಮಟ್ಟಕ್ಕೆ ಬೆಳೆದಿದೆ ಎಂದು ಕಂಪನಿಯ ಸಹ-ಸಂಸ್ಥಾಪಕಿ ಹಾಗೂ ಸಿಇಒ ಶ್ರೀನಿ ಚಿನಾಮಿಲ್ಲಿ ತಿಳಿಸಿದ್ದಾರೆ.
ಪ್ರಪಂಚದ ಅತ್ಯಂತ ಪ್ರಮುಖ ಕ್ಲೌಡ್ ಆಪರೇಟರ್‌ಗಳು (ಹೈಪರ್‌ಸ್ಕೇಲರ್‌ಗಳು) ಹಾಗೂ ಜಗತ್ತಿನ ಟಾಪ್ 20 ಸೆಮಿಕಂಡಕ್ಟರ್ ಕಂಪನಿಗಳ ಪೈಕಿ 18 ಕಂಪನಿಗಳಿಗೆ ಟೆಸ್ಸೋಲ್ವ್ ಎಂಜಿನಿಯರಿಂಗ್ ಸೇವೆಗಳನ್ನು ನೀಡುತ್ತಿದೆ.
ಸೆಮಿಕಂಡಕ್ಟರ್ ಮಾರುಕಟ್ಟೆಯ ಸಂಕೀರ್ಣತೆ ಮತ್ತು ಅವಕಾಶಗಳು
ಪ್ರಸ್ತುತ ದಿನಗಳಲ್ಲಿ ಎಐ ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಬಳಕೆಯಾಗುವ ಚಿಪ್‌ಗಳ ವಿನ್ಯಾಸವು ಅತ್ಯಂತ ಸಂಕೀರ್ಣವಾಗುತ್ತಿದೆ.
ಸೆಮಿಕಂಡಕ್ಟರ್ ಚಿಪ್‌ಗಳನ್ನು ವಿನ್ಯಾಸಗೊಳಿಸುವುದು, ಮೌಲ್ಯೀಕರಿಸುವುದು ಮತ್ತು ಪರೀಕ್ಷಿಸುವುದು ಸವಾಲಿನ ಕೆಲಸವಾಗಿರುವುದರಿಂದ, ಜಾಗತಿಕ ತಂತ್ರಜ್ಞಾನ ಕಂಪನಿಗಳು ಆರಂಭದಿಂದ ಅಂತ್ಯದವರೆಗೆ ಕಾರ್ಯನಿರ್ವಹಿಸಬಲ್ಲ ನಂಬಿಗಸ್ತ ಎಂಜಿನಿಯರಿಂಗ್ ಪಾಲುದಾರರನ್ನು ಹುಡುಕುತ್ತಿವೆ ಎಂದು ವೆಕ್ಟರ್ ಲೈನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ರಿ ಬಾಲ್ಡ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಸೋಲ್ವ್ ಅಧ್ಯಕ್ಷ ಹಾಗೂ ಹೀರೋ ಎಲೆಕ್ಟ್ರಾನಿಕ್ಸ್ ಸಂಸ್ಥಾಪಕ ಉಜ್ವಲ್ ಮುಂಜಾಲ್ ಮಾತನಾಡಿ, ಭಾರತದಲ್ಲಿ ಹುಟ್ಟಿದ ಎಂಜಿನಿಯರಿಂಗ್ ಸಂಸ್ಥೆಯೊಂದು ಜಾಗತಿಕವಾಗಿ ಸ್ಪರ್ಧಿಸಿ ಮುನ್ನಡೆಯಬಹುದು ಎಂಬುದಕ್ಕೆ ಟೆಸ್ಸೋಲ್ವ್ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಟೆಸ್ಸೋಲ್ವ್ ಸಂಸ್ಥೆಯ ಜಾಗತಿಕ ಹೆಜ್ಜೆಗುರುತುಗಳು
2004 ರಲ್ಲಿ ಸ್ಥಾಪನೆಯಾದ ಟೆಸ್ಸೋಲ್ವ್, ಪ್ರಸ್ತುತ 10 ದೇಶಗಳಲ್ಲಿ 3,500 ಕ್ಕೂ ಹೆಚ್ಚು ತಜ್ಞ ಎಂಜಿನಿಯರ್‌ಗಳನ್ನು ಹೊಂದಿದ್ದು, ಜಾಗತಿಕವಾಗಿ 9 ಸುಧಾರಿತ ಪ್ರಯೋಗಾಲಯಗಳನ್ನು ನಡೆಸುತ್ತಿದೆ. ಚಿಪ್ ಆರ್ಕಿಟೆಕ್ಚರ್, ವಿನ್ಯಾಸ, ಮೌಲ್ಯೀಕರಣ, ಪರೀಕ್ಷೆ ಹಾಗೂ ಎಂಬೆಡೆಡ್ ಸಿಸ್ಟಮ್‌ಗಳನ್ನು ಒಳಗೊಂಡ ಸಮಗ್ರ ಸೆಮಿಕಂಡಕ್ಟರ್ ಸೇವೆಗಳನ್ನು ಇದು ನೀಡುತ್ತದೆ. ಭಾರತದ ಸೆಮಿಕಂಡಕ್ಟರ್ ಸ್ಟಾರ್ಟ್‌ಅಪ್‌ಗಳು, ಫೌಂಡರಿಗಳು ಮತ್ತು ಒಎಸ್‌ಎಟಿ ಪೂರೈಕೆದಾರರೊಂದಿಗೆ ಕಂಪನಿ ತಾಂತ್ರಿಕವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಸಮಯವನ್ನು ಕಡಿತಗೊಳಿಸಲು ಮುಂಚಿತವಾಗಿ ಎಂಜಿನಿಯರಿಂಗ್ ಮಾಡಿದ ಸೆಮಿಕಂಡಕ್ಟರ್ ಪ್ಲಾಟ್‌ಫಾರ್ಮ್‌ಗಳನ್ನು ಟೆಸ್ಸೋಲ್ವ್ ಬಳಸುತ್ತದೆ.
ಅಂದಾಜು $1.6 ಶತಕೋಟಿಗೂ ಹೆಚ್ಚು ಬಂಡವಾಳ ನಿರ್ವಹಿಸುವ ವೆಕ್ಟರ್ ಲೈನ್ ಕ್ಯಾಪಿಟಲ್‌ನ ಈ ಹೂಡಿಕೆಯು, ಜಾಗತಿಕ ಎಐ ಮತ್ತು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಟೆಸ್ಸೋಲ್ವ್‌ನ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.




