ಸಾಲ ಅಂದ್ರೆ ಏನು?: ಯಾವ ಸಂದರ್ಭಗಳಲ್ಲಿ ಸಾಲದ ಸುಳಿಗೆ ಸಿಲುಕಬಾರದು..?
ಸಾಲವು ವ್ಯಕ್ತಿಯ ಆರ್ಥಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಇವತ್ತಿನ ದಿನದಲ್ಲಿ ಸೈಟು, ಮನೆ , ಕಾರು ಇತ್ಯಾದಿ ಯಾವುದೇ ರೀತಿಯ ಆಸ್ತಿಯನ್ನು ಹೊಂದಲು ಸಾಲ ಮಾಡಲೇ ಬೇಕಾಗುತ್ತದೆ.

ಒಬ್ಬ ವ್ಯಕ್ತಿಯ ಆರ್ಥಿಕ ಬದುಕಿನಲ್ಲಿ ಸಾಲವು ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂದಿನ ಕಾಲಘಟ್ಟದಲ್ಲಿ ನಿವೇಶನ, ಮನೆ, ವಾಹನ ಸೇರಿದಂತೆ ಯಾವುದೇ ಆಸ್ತಿಯನ್ನು ಪಡೆಯಬೇಕೆಂದರೆ ಸಾಲ ಮಾಡಲೇಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತ ಮಾರುಕಟ್ಟೆ ದರದಲ್ಲಿ ಸಾಲ ಪಡೆಯದೆ ಆಸ್ತಿಯನ್ನು ಸೃಷ್ಟಿಸುವುದು ಅಸಾಧ್ಯದ ಮಾತು. ಅಥವಾ ಇದು ಕೇವಲ ಒಂದು ಪ್ರತಿಶತ ಜನರಿಗೆ ಮಾತ್ರ ಸಾಧ್ಯವಿರುವ ಸಂಗತಿಯಾಗಿದೆ. ಹೀಗಾಗಿ, ಪ್ರಗತಿ ಹೊಂದಲು ಸಾಲ ಪಡೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬಂತಾಗಿದೆ.
ನಮ್ಮ ಬಳಿ ಉತ್ತಮ ಬಿಸಿನೆಸ್ ಐಡಿಯಾ ಇರಬಹುದು, ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಬಂಡವಾಳವಿರುವುದಿಲ್ಲ. ನಮಗೆ ಅಗತ್ಯವಿರುವ ಹಣವನ್ನು ಹೊಂದಿಸುವಷ್ಟರಲ್ಲಿ ಆ ಬಿಸಿನೆಸ್ ಐಡಿಯಾ ಹಳೆಯದಾಗಿರುತ್ತದೆ, ಅಥವಾ ಬೇರೆ ಯಾರಾದರೂ ಅದನ್ನು ಈಗಾಗಲೇ ಮಾಡಿರುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಬಂಡವಾಳವನ್ನು ಸಾಲದ ರೂಪದಲ್ಲಿ ಪಡೆಯುವುದನ್ನು ಹೊರತುಪಡಿಸಿ ಅನ್ಯ ಮಾರ್ಗವಿರುವುದಿಲ್ಲ. ಸಾಲ ಪಡೆದು, ಅದರ ಮೂಲಕವೇ ದೊಡ್ಡ ಸಾಮ್ರಾಜ್ಯಗಳನ್ನು ನಿರ್ಮಿಸಿದವರ ಸಂಖ್ಯೆ ಅಪಾರ.
ನಮ್ಮ ಕಣ್ಣಿಗೆ ಕಾಣುವುದು ಮತ್ತು ಕಿವಿಗೆ ಬೀಳುವುದು ಗೆದ್ದವರ ಕಥೆಗಳು ಮಾತ್ರ. ಗೆದ್ದವರು ಸಾವಿರ ಮಂದಿಯಿದ್ದರೆ, ಸೋತವರು ಲಕ್ಷಾಂತರ ಮಂದಿ ಇರುತ್ತಾರೆ. ಆದ್ದರಿಂದ ಸಾಲ ಪಡೆಯುವ ಮುನ್ನ ನಾವು ಕೆಲವು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ಅಧ್ಯಾಯದಲ್ಲಿ ಆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಅದಕ್ಕೂ ಮುನ್ನ, ಇಲ್ಲಿಯವರೆಗೆ ಯಾರೂ ಹೇಳಿರದ ಒಂದು ವಿಚಾರವನ್ನು ನಿಮಗೆ ತಿಳಿಸುತ್ತೇನೆ. ಈ ಅಂಶವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿ. ಆನಂತರ ಸಾಲ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳನ್ನು ಅಷ್ಟೇ ಜವಾಬ್ದಾರಿಯಿಂದ ಗಮನಿಸಿ. ಇಲ್ಲಿ ಹೇಳುವ ಅಂಶಗಳು ನಿಮಗೆ ಹೊಂದಾಣಿಕೆಯಾಗುತ್ತಿಲ್ಲ ಎಂದಾದರೆ, ಸಾಲ ಮಾಡಬಾರದು ಎಂದರ್ಥ.
ಸಾಲದ ಡೆಫಿನಿಷನ್ ಅನ್ನು ಮತ್ತೊಮ್ಮೆ ನೆನಪಿಸುತ್ತೇನೆ. ನೀವು ಮುಂದಿನ ಹತ್ತಾರು ವರ್ಷಗಳಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನು ಇಂದೇ ಮುಂಗಡವಾಗಿ ಪಡೆಯುವುದೇ ಸಾಲ. ಹಾಗಾಗಿ, ಸಾಲದ ಹಣವು ಯಾರೋ ನಿಮಗೆ ಕರುಣೆಯಿಂದ ನೀಡಿದ ಭಿಕ್ಷೆಯಲ್ಲ. ಅದು ನಿಮ್ಮದೇ ಹಣ, ಅದನ್ನು ನೀವು ಮುಂಗಡವಾಗಿ ಪಡೆಯುತ್ತಿದ್ದೀರಿ ಮತ್ತು ಅದಕ್ಕೆ ಬಡ್ಡಿಯನ್ನು ಕೂಡ ಪಾವತಿಸಲು ಸಿದ್ಧರಿದ್ದೀರಿ. ಆದ್ದರಿಂದ ಎಚ್ಚರ! ಸಾಲವನ್ನು ಸರಿಯಾಗಿ ಬಳಸಿಕೊಳ್ಳುವುದು ಅತ್ಯಂತ ಅವಶ್ಯಕ.
ವಿಶೇಷವಾಗಿ ಗಮನಿಸಬೇಕಾದ ಎರಡು ಅಂಶಗಳು
ಸಾಲ ಪಡೆಯುವ ಮುನ್ನ ನಾವು ಯಾವುದರ ಬಗ್ಗೆ ಚಿಂತಿಸಬೇಕು? ಯಾವ ವಿಷಯಗಳನ್ನು ಗಮನಿಸಬೇಕು ಮತ್ತು ಪರಿಗಣಿಸಬೇಕು? ಎಂಬುದು ಇಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. ಅವುಗಳೇನು ಎಂಬುದನ್ನು ವಿವರಿಸುತ್ತೇನೆ. ಅದಕ್ಕೂ ಮೊದಲು ಎರಡು ವಿಶೇಷ ಅಂಶಗಳನ್ನು ಗಮನಿಸೋಣ.
ಮೊದಲನೆಯದಾಗಿ ಮಾಹಿತಿಯ ಹರಿವು. ಇದನ್ನು ಇಂಗ್ಲೀಷಿನಲ್ಲಿ ಫ್ಲೋ ಆಫ್ ಇನ್ಫಾರ್ಮಶನ್ ಎನ್ನಬಹುದು. ಗಮನಿಸಿ, ಒಂದು ಮಾಹಿತಿ ಅದು ಸೃಷ್ಟಿಯಾದ ಮೂಲದಿಂದ ಹರಿಯುತ್ತಾ ಬರುತ್ತದೆ. ಅದು ಸಾಮಾನ್ಯ ಜನರಿಗೆ ತಲುಪುವಷ್ಟರಲ್ಲಿ ಅನೇಕ ಹಂತಗಳನ್ನು ದಾಟಿ ಬಂದಿರುತ್ತದೆ. ಪಬ್ಲಿಕ್ ಡೊಮೈನ್ಗಳಲ್ಲಿ, ಸಾರ್ವಜನಿಕರಿಗೆ ರೀಲ್ಸ್, ವಿಡಿಯೋಗಳು ಮತ್ತು ಪತ್ರಿಕೆಯ ಸುದ್ದಿಗಳ ಮೂಲಕ ತಲುಪುವ ವೇಳೆಗೆ ಅದು ತನ್ನ ಮಹತ್ವ ಮತ್ತು ಶಕ್ತಿಯನ್ನು ಸಾಕಷ್ಟು ಕಳೆದುಕೊಂಡಿರುತ್ತದೆ. ನಾವು ಈ ಮಾಹಿತಿಯನ್ನು ನಂಬಿ, ಅದನ್ನೇ ಆಧರಿಸಿ ಬಿಸಿನೆಸ್ ಪ್ಲಾನ್ ಸಿದ್ಧಪಡಿಸಿ ಸಾಲ ಮಾಡುತ್ತೇವೆ.
ಈಗಾಗಲೇ ಮಾಹಿತಿಯನ್ನು ಅದರ ಉಗಮ ಸ್ಥಾನದಲ್ಲಿಯೇ ಪಡೆದುಕೊಂಡವರು ದೊಡ್ಡ ಸಾಮ್ರಾಜ್ಯಗಳನ್ನು ಸೃಷ್ಟಿಸಿರುತ್ತಾರೆ. ಒಂದು ಉದಾಹರಣೆಯನ್ನು ನೋಡೋಣ. ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರ ಮಕ್ಕಳಾದ ನಿಖಿಲ್ ಮತ್ತು ಸಾರಂಗ್ ಗಡ್ಕರಿ ಅವರು ಆಗ್ರೋ ಇಂಡಸ್ಟ್ರೀಸ್ ಆರಂಭಿಸಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಎಥನಾಲ್ ಬಳಕೆ ಮಾಡಬೇಕು ಎಂದು ನಿತಿನ್ ಗಡ್ಕರಿ ಅವರು ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ಮಾತು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿತ್ತು. ಅಂದರೆ ಈ ಮಾಹಿತಿ ಹುಟ್ಟಿ ಹತ್ತು ವರ್ಷಗಳಾಗಿವೆ. ಅಂದೇ ಈ ಮಾಹಿತಿಯ ಮೇಲೆ ಬಂಡವಾಳ ಹೂಡಿದ್ದರೆ ಏನಾಗುತ್ತಿತ್ತು?
2023 ರಲ್ಲಿ ನೂರು ಕೋಟಿ ಸಂಸ್ಥೆಯಾಗಿದ್ದದ್ದು, ಇಂದು ನಾಲ್ಕು ಸಾವಿರ ಕೋಟಿ ರೂಪಾಯಿಗೂ ಮೀರಿದ ವ್ಯಾಲ್ಯೂವೇಷನ್ ಹೊಂದಿದೆ. ಇವತ್ತಿಗೆ ಎಥನಾಲ್ ಬಳಕೆ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿದೆ. ಈಗ ಇಂತಹ ಸಂಸ್ಥೆಯನ್ನು ಸ್ಥಾಪಿಸಲು ದೊಡ್ಡ ಮಟ್ಟದ ಸಾಲ ಮಾಡುವುದು ಮೂರ್ಖತನವಾಗುತ್ತದೆ. ಇದರರ್ಥ ನಿತಿನ್ ಗಡ್ಕರಿ ಅವರು ತಪ್ಪು ಮಾಡಿದ್ದಾರೆ ಎಂದಲ್ಲ.
ಅವರಿಗೆ ಮಾಹಿತಿಯನ್ನು ಮೊದಲ ಹಂತದಲ್ಲಿಯೇ ಗ್ರಹಿಸುವ ಸಾಮರ್ಥ್ಯವಿತ್ತು. ಈ ಕೆಲಸವನ್ನು ಬೇರೆ ಯಾರು ಬೇಕಾದರೂ ಮಾಡಬಹುದಿತ್ತು. ಮಾಹಿತಿಯನ್ನು ನಾವು ಯಾವ ಹಂತದಲ್ಲಿ ಸೇವಿಸುತ್ತಿದ್ದೇವೆ ಎಂಬುದರ ಆಧಾರದ ಮೇಲೆ ನಾವು ಬಂಡವಾಳ ಹೂಡಬೇಕೇ ಅಥವಾ ಸಾಲ ಮಾಡಬೇಕೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಬಹುತೇಕ ಸಾಲ ಮಾಡುವವರು ಈ ಅಂಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಟ್ರೆಂಡ್ ನಲ್ಲಿರುವುದನ್ನು ನೋಡಿ ಸಾಲ ಮಾಡಿ ಬಂಡವಾಳ ಹೂಡುತ್ತಾರೆ. ಮಾಹಿತಿ 'ತಾಜಾ ಮತ್ತು ಯಂಗ್' ಆಗಿದ್ದಾಗ ಅದನ್ನು ಗ್ರಹಿಸಬೇಕು.
ಮಾಹಿತಿಯನ್ನು ನಾವು ಯಾವ ಹಂತದಲ್ಲಿ ಕಾನ್ಸುಮ್ ಮಾಡುತ್ತಿದ್ದೇವೆ ಮತ್ತು ಯಾವ ಹಂತದಲ್ಲಿ ಅದು ನಮ್ಮನ್ನು ತಲುಪಿದೆ ಎಂಬುದು ಬಹಳ ಮುಖ್ಯ. ಜಗತ್ತಿನ 95 ಪ್ರತಿಶತಕ್ಕೂ ಹೆಚ್ಚು ಜನರು ಮಾಹಿತಿಯ ಕೊನೆಯ ಬಳಕೆದಾರರಾಗಿರುತ್ತಾರೆ, ಅಂದರೆ ಎಂಡ್ user ಆಗಿರುತ್ತಾರೆ. ಹೀಗಾಗಿ ಅವರು ಸಾಲ ಮಾಡಿದರೂ ಅದರಿಂದ ಲಾಭ ಪಡೆಯಲು ಸಾಧ್ಯವಿಲ್ಲ. ಉಳಿದ ಐದು ಪ್ರತಿಶತದಲ್ಲಿಯೂ ಕೇವಲ ಒಂದು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ಜನರು ಮಾತ್ರ ಮಾಹಿತಿಯನ್ನು ಮೂಲದಲ್ಲಿಯೇ ಗ್ರಹಿಸಿಕೊಳ್ಳುತ್ತಾರೆ. ಹೀಗಾಗಿ ಅವರು ಸಾಲ ಮಾಡಿ ಹೂಡಿಕೆ ಮಾಡಿ ಸಂಪತ್ತು ಸೃಷ್ಟಿಸಿಕೊಳ್ಳುತ್ತಾರೆ. ಡೆಟ್ ಲಿವರೇಜ್ ಎನ್ನುವ ಪದವನ್ನು ನಾವು ಬಹಳಷ್ಟು ಕೇಳಿದ್ದೇವೆ. ಡೆಟ್ ಲಿವರೇಜ್ ಮಾಡಿಕೊಳ್ಳಲು ಮಾಹಿತಿಯನ್ನು ಲಿವರೇಜ್ ಮಾಡಿಕೊಳ್ಳುವ ಶಕ್ತಿ ಇರಬೇಕು. ಇಲ್ಲವಾದಲ್ಲಿ, ಅವರು ಮಾಡಿದರು ಎಂದು ನಾವು ಅದನ್ನು ಮಾಡಲು ಹೋದರೆ ಡೆಟ್ ಟ್ರ್ಯಾಪ್ ನಲ್ಲಿ ಸಿಲುಕುವುದು ಖಚಿತ.
ಎರಡನೆಯದಾಗಿ ಹಣದ ಹರಿವು. ಇದನ್ನು ನಾವು ಮನಿ ಫ್ಲೋ ಎನ್ನಬಹುದು. ಹಣ ಸೃಷ್ಟಿಯಾದ ನಂತರ ಸಾಮಾನ್ಯ ಜನರ ಕೈಗೆ ಬಂದು ತಲುಪುವಷ್ಟರಲ್ಲಿ ಬಹಳಷ್ಟು ಹಂತಗಳನ್ನು ದಾಟಿ ಬರುತ್ತದೆ. ಹಣ ಯಾವ ಹಂತದಲ್ಲಿ ನಮ್ಮ ಕೈಸೇರಿದೆ ಎಂಬುದರ ಅರಿವು ಕೂಡ ಈ ಜಗತ್ತಿನ ೯೫ ಪ್ರತಿಶತಕ್ಕೂ ಹೆಚ್ಚಿನ ಜನರಿಗೆ ಇಲ್ಲ. ಕೊನೆಯ ಹಂತದಲ್ಲಿ ಹಣವನ್ನು ಪಡೆದುಕೊಂಡವರು ಸಾಲ ಮಾಡಬಾರದು. ಆದರೆ ಇಂದಿನ ದಿನಗಳಲ್ಲಿ ಮನೆ, ಸೈಟು, ಕಾರು ಎಂಬ ಕಾರಣಕ್ಕೆ ಸಾಲ ಮಾಡುತ್ತಿರುವವರು ಈ ರೀತಿ ಕೊನೆಯ ಹಂತದಲ್ಲಿ ಹಣವನ್ನು ಪಡೆದುಕೊಂಡವರು ಎಂಬುದು ನಿರ್ವಿವಾದ. ಹಣದ ಉಗಮವಾದ ತಕ್ಷಣ ಅದನ್ನು ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ. ಅದು ರಿಸೆರ್ವ್ ಬ್ಯಾಂಕಿನ ಮೂಲಕ ಬ್ಯಾಂಕುಗಳನ್ನು ತಲುಪುತ್ತದೆ. ಆ ನಂತರ ಕಾರ್ಪೊರೇಟ್ ಹೌಸುಗಳಿಗೆ, ಆನಂತರ ಸಣ್ಣ ಪುಟ್ಟ ವ್ಯಾಪಾರಗಳಿಗೆ, ಕೊನೆಗೆ ಅದು ಬಹುತೇಕ ಜನರನ್ನು ತಲುಪುವುದು ವೇತನ ಅಥವಾ ಸಂಬಳದ ಮೂಲದ ಮೂಲಕ.
ವಾಣಿಜ್ಯ ಕಾರಣಗಳಿಗೆ ಸಾಲದ ರೂಪದಲ್ಲಿ ಹಣವನ್ನು ಪಡೆಯುವ ಬ್ಯಾಂಕುಗಳು, ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳು, ಬಿಸಿನೆಸ್ ಹೌಸುಗಳು, ಡಿಜಿಟಲ್ ವಾಲೆಟ್ ಸಂಸ್ಥೆಗಳು ಹೀಗೆ ಒಟ್ಟಾರೆ ಯಾರೆಲ್ಲಾ ಸಾಲದ ಹಣವನ್ನು ಮತ್ತೆ ಸಾಲವನ್ನಾಗಿ ನೀಡಿ ಲಾಭ ಮಾಡಲು ಪ್ರಯತ್ನಿಸುತ್ತಾರೋ, ಅವರೆಲ್ಲರೂ ಸಾಲ ಮಾಡಬಹುದು. ಕೊನೆಯದಾಗಿ ಹಣವನ್ನು ವೇತನದ ಮೂಲಕ ಅಥವಾ ಅತಿ ಸಣ್ಣ ವ್ಯಾಪಾರದ ಮೂಲಕ ಪಡೆದುಕೊಳ್ಳುವ ಜನರ ಕೈಗೆ ಹಣ ಸಾಲದ ರೂಪದಲ್ಲಿ ತಲುಪುವ ವೇಳೆಗೆ ಕಾಸ್ಟ್ ಆಫ್ ಡೆಟ್ ದುಪ್ಪಟ್ಟಾಗಿರುತ್ತದೆ. ಡೆಟ್ ಲೀವೆರೇಜ್ ಮಾಡಿಕೊಳ್ಳುವುದು ಈ ಜನರಿಂದ ಸಾಧ್ಯವೇ ಇಲ್ಲದ ಮಟ್ಟಿಗೆ ಬಡ್ಡಿ ಇರುತ್ತದೆ.
ಇಂತಹ ಸಮಯದಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಹಾಗಾದರೆ ನಾವು ಸಾಲ ಮಾಡಬಾರದೇ? ಸಾಲ ಮಾಡುವುದು ತಪ್ಪೇ? ಇದಕ್ಕೆ ಉತ್ತರವನ್ನು ಎಲ್ಲರಿಗೂ ಸಮಾನವಾಗಿ, ಒಂದೇ ಎಂದು ಹೇಳಲಾಗುವುದಿಲ್ಲ. ಆದರೆ ಎಲ್ಲರಿಗೂ ಒಂದು ವಿಷಯವನ್ನು ಖಂಡಿತವಾಗಿ ಹೇಳಬಹುದು. ನೀವು ಪಾವತಿಸುವ ಬಡ್ಡಿಗಿಂತ ಹೆಚ್ಚಿನ ಉತ್ಪತ್ತಿಯನ್ನು ನೀವು ಗಳಿಸಬಲ್ಲಿರಾ? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಿ. ಹೌದು ಎಂದಾದರೆ, ಎಷ್ಟು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ. ಹೀಗೆ ಬಂದ ಉತ್ತರದಿಂದ ಅಪರ್ಚುನಿಟಿ ಕಾಸ್ಟ್ ತೆಗೆಯಿರಿ. ಇದರ ನಂತರ ನಿಮಗೆ ಉತ್ತರ ಧನಾತ್ಮಕ ಎನಿಸಿದರೆ, ಅದನ್ನು ಪಡೆಯಲು ಹಾಕುವ ಪರಿಶ್ರಮ ಸರಿ ಎನಿಸಿದರೆ ಸಾಲ ಧಾರಾಳವಾಗಿ ಮಾಡಬಹುದು. ಇಲ್ಲವಾದಲ್ಲಿ ಸಾಲ ಮಾಡಬಾರದು. ಎಚ್ಚರ!




