ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಸುದ್ದಿ

ನಿಟ್ಟೆ: ಉಪಗ್ರಹ ಟ್ರ್ಯಾಕಿಂಗ್ ಕೇಂದ್ರ 'ನಿಸ್ತಂತು' ಲೋಕಾರ್ಪಣೆ

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗ ಮತ್ತು ಇ & ಸಿ (ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗ ಜಂಟಿಯಾಗಿ ಸ್ಥಾಪಿಸಿ...

· ಉಡುಪಿ
ನಿಟ್ಟೆಯಲ್ಲಿ ಉದ್ಘಾಟನೆಗೊಂಡ ‘ನಿಸ್ತಂತು’ ಉಪಗ್ರಹ ಟ್ರ್ಯಾಕಿಂಗ್ ಕೇಂದ್ರ
ಹಂಚಿಕೊಳ್ಳಿ:

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗ ಹಾಗೂ ಇ & ಸಿ (ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗಗಳ ಸಹಯೋಗದಲ್ಲಿ ನಿರ್ಮಿಸಲಾದ ‘ನಿಟ್ಟೆ ಸ್ಯಾಟಲೈಟ್ ಟ್ರ್ಯಾಕಿಂಗ್ ಮತ್ತು ನ್ಯಾವಿಗೇಷನಲ್ ಟೆಲಿಮೆಟ್ರಿ ಯುನಿಟ್’ – ನಿಸ್ತಂತು ಎಂಬ ಉಪಗ್ರಹ ಟ್ರ್ಯಾಕಿಂಗ್ ಕೇಂದ್ರವನ್ನು ಅಕ್ಟೋಬರ್ 9 ರಂದು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಈ ನೂತನ ಕೇಂದ್ರವನ್ನು ಉಡುಪಿ ಜಿಲ್ಲಾ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಇಶಿತಾ ಗುಪ್ತಾ IPS ಅವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಳವಡಿಸಲಾಗಿರುವ ಉಪಗ್ರಹ ಸಿಗ್ನಲ್ ತಂತ್ರಜ್ಞಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಉಪಗ್ರಹ ದತ್ತಾಂಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಈ ಉಪಕ್ರಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.

ಈ ಕೇಂದ್ರಕ್ಕೆ ಅಗತ್ಯವಿರುವ ತಾಂತ್ರಿಕ ಸಂಪನ್ಮೂಲಗಳನ್ನು ಬೆಂಗಳೂರಿನ ಐಆರ್ಜಿ ಲ್ಯಾಬ್ಸ್ನ ಸಂಸ್ಥಾಪಕಿ ಶ್ರೀಮತಿ ಶ್ವೇತಾ ಪ್ರಭಾಕರನ್ ಮತ್ತು ಅವರ ತಂಡದವರು ಪೂರೈಸಿದ್ದಾರೆ. ಐಆರ್ಜಿ ಲ್ಯಾಬ್ಸ್ ಬೆಂಗಳೂರು ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್ ಆಗಿದ್ದು, ಇದು ಕ್ಯೂಬ್ಸ್ಯಾಟ್ಸ್, ಸ್ಯಾಟಲೈಟ್ ಪೇಲೋಡ್ಗಳು ಹಾಗೂ ಗ್ರೌಂಡ್ ಸ್ಟೇಷನ್ ಸಿಸ್ಟಮ್ಗಳ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಡಿಶ್ ಆಂಟೆನಾವನ್ನು ನಿಗದಿತ ಕೋನ ಮತ್ತು ದಿಕ್ಕಿನಲ್ಲಿ ಅಳವಡಿಸುವ ಮೂಲಕ, ಜಿಯೋಸ್ಟೇಷನರಿ ಉಪಗ್ರಹಗಳಿಂದ ಬರುವ ಸಂಕೇತಗಳನ್ನು ಮತ್ತು ಭೂಮಿಯ ಚಿತ್ರಗಳನ್ನು ಈ ಕೇಂದ್ರದಲ್ಲಿ ಪಡೆಯಲು ಸಾಧ್ಯವಿದೆ. ಇದರ ಮೂಲಕ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿಶ್ಲೇಷಿಸಲು ಅನುಕೂಲವಾಗಲಿದೆ. ಉದ್ಘಾಟನಾ ಸಮಾರಂಭದ ವೇಳೆ, ಪ್ರದರ್ಶನದ ಅಂಗವಾಗಿ ಕೊರಿಯನ್ ಉಪಗ್ರಹದಿಂದ ಸಿಗ್ನಲ್ ನ್ನು ಯಶಸ್ವಿಯಾಗಿ ಸ್ವೀಕರಿಸಲಾಯಿತು.

ಹಂಚಿಕೊಳ್ಳಿ: