ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾಟಕಕ್ಕೆ ಜಿಲ್ಲೆಯ ಜನ ಮರುಳಾಗಲ್ಲ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಬಂಟ್ವಾಳ: ಪ್ರಜಾಪ್ರಭುತ್ವದ ಮೌಲ್ಯದಡಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಚುನಾವಣಾ ಆಯೋಗದ ಎದುರು ಪ್ರತಿಭಟನೆ ನಡೆಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಅಧಿವೇಶನ ನಡೆಸುವ...

· 1 ನಿಮಿಷ ಓದು· ದಕ್ಷಿಣ ಕನ್ನಡ
ಡಿಕೆಶಿ ನಾಟಕಕ್ಕೆ ಜಿಲ್ಲೆಯ ಜನ ಮರುಳಾಗಲ್ಲ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
ಹಂಚಿಕೊಳ್ಳಿ:

ಬಂಟ್ವಾಳ: ಪ್ರಜಾಪ್ರಭುತ್ವದ ಮೌಲ್ಯದಡಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಚುನಾವಣಾ ಆಯೋಗದ ಎದುರು ಪ್ರತಿಭಟನೆ ನಡೆಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಅಧಿವೇಶನ ನಡೆಸುವ ಮೂಲಕ ಆಡುತ್ತಿರುವ ನಾಟಕಗಳಿಗೆ ಜಿಲ್ಲೆಯ ಜನ ಎಂದಿಗೂ ಮರುಳಾಗುವುದಿಲ್ಲ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಇಲ್ಲಿನ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ’ ಸೇವಾ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿದ್ದ ವ್ಯಕ್ತಿ ತನ್ನ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತದಿಂದ ದೇಶಕ್ಕೆ ಗೌರವ ತಂದು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ಸಿನ ಮುಖಂಡರು ಮತ್ತು ಪುಂಡ ಕಾರ್ಯಕರ್ತರು ನಡೆಸುತ್ತಿರುವ ದರ್ಪ ಮತ್ತು ದಬ್ಬಾಳಿಕೆಗೆ ಬಿಜೆಪಿ ಕಾರ್ಯಕರ್ತರು ಎಂದಿಗೂ ಹೆದರುವುದಿಲ್ಲ.ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಈಗಲೂ ನಕಲಿ ಮತ್ತು ಬಾಂಗ್ಲಾ ಮತದಾರರು ಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ‘ನಕಲಿ ಮತದಾರರ ಬಗ್ಗೆ ಮತ್ತೆ ಬಿಜೆಪಿ ಕಾರ್ಯಕರ್ತರು ದೂರು ನೀಡುತ್ತಲೇ ಇರುತ್ತಾರೆ’ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ‘ದೇಶಡೆಲ್ಲೆಡೆ ಏಕ ಕಾಲಕ್ಕೆ 803 ಕಡೆಗಳಲ್ಲಿ ಸೇವಾ ಜ್ಯೋತಿ ಕಾರ್ಯಕ್ರಮ ನಡೆದಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಇಂದಿರಾ ಗಾಂಧಿ ಅವರನ್ನೂ ಮೀರಿ ಬೆಳೆದು ದೇಶಕ್ಕೆ ಗೌರವ ತಂದಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಅಧಿವೇಶನ ಕರೆದರೆ ಅವಿಭಜಿತ ಜಿಲ್ಲೆಯ ಜನ ಮರುಳಾಗುವುದಿಲ್ಲ' ಎಂದರು.

ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಬೋಳ್ಯಾಡಿ, ಮಾಜಿ ಶಾಸಕರಾದ ಪ್ರತಾಪಸಿಂಹ ನಾಯಕ್, ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಅರುಣ್ ಶಹಾಪುರ, ಪ್ರಭಾರಿಗಳಾದ ಜಯಂತ್ ಕೋಟ್ಯಾನ್, ಭರತೀಶ್, ಆರ್.ಸಿ.ನಾರಾಯಣ ಮತ್ತಿತರರು ಇದ್ದರು.

ಇದೇ ವೇಳೆ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸೇವಾ ಸಂಕಲ್ಪ ಪ್ರತಿಜ್ಞಾ ವಿಧಿ ಭೋದಿಸಿದರು.

ಯತೀಶ್ ಸ್ವಾಗತಿಸಿದರು. ಸುದರ್ಶನ್ ಬಜ ವಂದಿಸಿದರು. ರಾಕೇಶ್ ರೈ ಕಡೆಂಜ ಕಾರ್ಯಕ್ರಮ ನಿರೂಪಿಸಿದರು.

ಹಂಚಿಕೊಳ್ಳಿ: