ದೀಪ್ಕೆ ಸಹಿತ ಜಂತರ್‌ಮಂತರ್ ಪಡೆ ಇಂದು ಬೆಂಗಳೂರಿನತ್ತ! ಯುಟ್ಯೂಬರ್ ಧ್ರುವ್ ರಾಠಿ ಕೂಡ ಮೊದಲ ಸಲ ಪಾಲ್ಗೊಳ್ಳುತ್ತಿದ್ದಾರೆ!
ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಸಿಜೆಪಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಯೂಟ್ಯೂಬರ್ ಧ್ರುವ್ ರಾಠಿ, ನಟ ಪ್ರಕಾಶ್...

- ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿಯಿಂದ ದೇಶವ್ಯಾಪಿ ಪ್ರತಿಭಟನೆ
- ಇದರ ಭಾಗವಾಗಿ ಗುರುವಾರ ಬೆಂಗಳೂರಿನಲ್ಲಿ ಭಾರೀ ಹೋರಾಟ
- ಇದರಲ್ಲಿ ಸಿಜೆಪಿಯ ಪ್ರಮುಖ ನಾಯಕರು, ಬೆಂಬಲಿಗರು ಹಾಜರ್
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ ಎಸ್‌ಐಆರ್(SIR) ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ (CJP) ವತಿಯಿಂದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್(Freedom park bengaluru)ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದೀಪ್ಕೆ ಸೇರಿ ಜಂತರ್‌ಮಂತರ್ ದಂಡೇ ಇಂದು ಬೆಂಗಳೂರಿಗೆ
ಈ ಪ್ರತಿಭಟನೆಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕೂಡಾ ಭಾಗಿಯಾಗುತ್ತಿದ್ದಾರೆ. ಅವರು ಬೆಂಗಳೂರಿನ ಹೋರಾಟದ ಕಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಇದರ ಜೊತೆಗೆ ಎನ್‌ಡಿಎ ಸರ್ಕಾರದ ಕಟು ಟೀಕಾಕಾರರಲ್ಲಿ ಒಬ್ಬರಾದ ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ(Famous YouTuber Dhruv Rathee) ಇದೇ ಮೊದಲ ಬಾರಿಗೆ ಸಿಜೆಪಿ ಹೋರಾಟಕ್ಕೆ ನೇರವಾಗಿ ಧಮುಕುತ್ತಿದ್ದು, ಅದಕ್ಕೆ ಕರ್ನಾಟಕ(Karnataka)ವನ್ನೇ ವೇದಿಕೆ ಮಾಡಿಕೊಂಡಿರುವುದು ಭಾರೀ ಕುತೂಹಲ ಮೂಡಿಸಿದೆ.
ಯಾವಾಗ ಪ್ರತಿಭಟನೆ?
ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ, ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಸೇರಿ ಹಲವು ಚಿಂತಕರು, ಕಲಾವಿದರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಯೂಟ್ಯೂಬರ್ ಧ್ರುವ್ ರಾಠಿ ಭಾಗಿಯಾಗಲಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ಅಂಗವಾಗಿ ಜನತಾ ನ್ಯಾಯಾಲಯ ನಡೆಯಲಿದ್ದು, ಸುಪ್ರೀಂಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಪಾಲ್ಗೊಂಡು ಎಸ್‌ಐಆರ್ ಪ್ರಕ್ರಿಯೆಯಿಂದ ನೊಂದ ಸಂತ್ರಸ್ತರ ಆರೋಪಗಳನ್ನು ಆಲಿಸಿ ತೀರ್ಪು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.




