7 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ
ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆದುಕೊಂಡಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ. 7 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟ ಬಗ್ಗೆ ನಟಿ ಐಶ...

ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆದುಕೊಂಡಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ. 7 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟ ಬಗ್ಗೆ ನಟಿ ಐಶ್ವರ್ಯ ಪಿಸ್ಸೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
View this post on Instagram
ಐಶ್ವರ್ಯ ಪಿಸ್ಸೆ ಪೋಸ್ಟ್‌ನಲ್ಲಿ ಏನಿದೆ?
‘ನನ್ನ ವೈಯಕ್ತಿಕ ಜೀವನದ ಸುತ್ತ ಓಡಾಡುತ್ತಿರುವ ಅನಗತ್ಯ ವದಂತಿಗಳು ಮತ್ತು ಊಹಾಪೋಹಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ. ನಾನು ಮತ್ತು ನನ್ನ ಪತಿ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಸಾಕಷ್ಟು ಯೋಚನೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ, ಪರಸ್ಪರ ವಿಚ್ಛೇದನ ಪಡೆದಿದ್ದೇವೆ. ಇದು ನಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಂತದಲ್ಲಿ ನಮಗೆ ಅಗತ್ಯವಿರುವ ಖಾಸಗಿತನ ಮತ್ತು ನೆಮ್ಮದಿಯನ್ನು ಗೌರವಿಸಿ, ನಮ್ಮ ಆಯ್ಕೆಯನ್ನು ಎಲ್ಲರೂ ಮಾನ್ಯ ಮಾಡಬೇಕೆಂದು ವಿನಂತಿಸುತ್ತೇನೆ. ವೀಕ್ಷಣೆಗಳು, ಫಾಲೋವರ್ಸ್, ಲೈಕ್ಸ್ ಅಥವಾ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಕಥೆಗಳನ್ನು ಸೃಷ್ಟಿಸುವುದು, ದಾರಿ ತಪ್ಪಿಸುವ ವಿಡಿಯೊಗಳನ್ನು ಪ್ರಕಟಿಸುವುದು, ಆಧಾರರಹಿತ ಆರೋಪಗಳನ್ನು ಮಾಡುವುದು, ನನ್ನ ಧಾರಾವಾಹಿಯ ದೃಶ್ಯಗಳನ್ನು ಸಂಬಂಧವಿಲ್ಲದ ಸಂದರ್ಭಕ್ಕೆ ಬಳಸುವುದು ಅಥವಾ ನನ್ನ ವೈಯಕ್ತಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ದೃಷ್ಟಿಯಿಂದ ಸ್ವೀಕಾರಾರ್ಹವಲ್ಲ’ ಎಂದಿದದಾರೆ.

ನಟಿ ಐಶ್ವರ್ಯಾ ಪಿಸ್ಸೆ
‘ದಯವಿಟ್ಟು ತೆರೆಯ ಮೇಲಿನ ಜೀವನಕ್ಕೂ, ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ. ಈ ಹೇಳಿಕೆಯನ್ನು ನೀಡುತ್ತಿರುವುದು ಸ್ಪಷ್ಟವಾದ ಮಿತಿಗಳನ್ನು ತಿಳಿಸುವುದಕ್ಕಾಗಿ ಮಾತ್ರವೇ ಹೊರತು, ಮತ್ತಷ್ಟು ಚರ್ಚೆಗಳಿಗೆ ಅಥವಾ ಊಹಾಪೋಹಗಳಿಗೆ ಆಹ್ವಾನ ನೀಡುವುದಕ್ಕಾಗಿ ಅಲ್ಲ. ಎಲ್ಲರೂ ನನ್ನ ಖಾಸಗಿತನವನ್ನು ಗೌರವಿಸಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇನೆ. ನನ್ನ ಕೆಲಸವೇ ನನ್ನ ವೃತ್ತಿ. ನನ್ನ ವೈಯಕ್ತಿಕ ಜೀವನ ನನ್ನ ಖಾಸಗಿ ವಿಚಾರ. ಸುಳ್ಳು ಹಾಗೂ ಮಾನಹಾನಿಕರ ವಿಷಯಗಳನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಎದುರಿಸಲಾಗುವುದು. ಇಂತಹ ಕೃತ್ಯಗಳು ಮುಂದುವರಿದರೆ, ಸಂಬಂಧಪಟ್ಟವರ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಬರೆದುಕೊಂಡಿದ್ದಾರೆ.

ನಟಿ ಐಶ್ವರ್ಯಾ ಪಿಸ್ಸೆ
ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ನಟಿ ಐಶ್ವರ್ಯ ಪಿಸ್ಸೆ, ಕನ್ನಡದಲ್ಲಿ ‘ಸರ್ವ ಮಂಗಳ ಮಾಂಗಲ್ಯೇ’, ‘ಪುನರ್ ವಿವಾಹ’, ‘ಗಿರಿಜಾ ಕಲ್ಯಾಣ’, ‘ಸುಂದರಿ’, ‘ಅನುರೂಪ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟ ಯಶ್ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾದಲ್ಲಿ ಯಶ್ ತಂಗಿಯಾಗಿ ಅಭಿನಯಿಸಿದ್ದಾರೆ.
ಇವರು 2019ರಲ್ಲಿ ನಟಿ ನವ್ಯಾ ಸ್ವಾಮಿ ಅವರ ಸಹೋದರ ಹರಿ ವಿನಯ್ ಜತೆ ಮದುವೆಯಾಗಿದ್ದರು. ಇದೀಗ ದಾಂಪತ್ಯ ಜೀವನಕ್ಕೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದಾರೆ.




