ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಕರ್ನಾಟಕ

ಸುಧಾ ಯಾದವ್: ಕಾರ್ಗಿಲ್ ಯುದ್ಧದಲ್ಲಿ ಪತಿ ಹುತಾತ್ಮರಾದ ಬಳಿಕ ರಾಜಕೀಯಕ್ಕೆ ಎಂಟ್ರಿ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸಂಸದೆ ಸುಧಾ ಯಾದವ್‌ ನಿಯೋಜನೆಗೊಂಡಿದ್ದಾರೆ.ಹರಿಯಾಣದ ರೇವಾಡಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದಲ್ಲಿ ಜನಿಸಿದ ಸುಧಾ ಯಾದವ್ ಅವರು, ಅಹಿರ್ವಾಲ್ ಪ್ರದೇಶದೊಂದ...

ಕಾರ್ಗಿಲ್ ಯುದ್ಧದಲ್ಲಿ ಪತಿ ಹುತಾತ್ಮ;ನೂತನ ರಾಜ್ಯಪಾಲರಾದ ಸುಧಾ ಯಾದವ್ ರಾಜಕೀಯ ಪಯಣ
ಹಂಚಿಕೊಳ್ಳಿ:

ಹರಿಯಾಣದ ರೇವಾಡಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದಲ್ಲಿ ಜನಿಸಿರುವ ಸುಧಾ ಯಾದವ್, ಅಹಿರ್ವಾಲ್ ಪ್ರದೇಶದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. 60 ವರ್ಷದ ಇವರು, 1987ರಲ್ಲಿ ಐಐಟಿ-ರೂರ್ಕಿಯಿಂದ ರಸಾಯನವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು 1992ರಲ್ಲಿ ಅದೇ ಸಂಸ್ಥೆಯಿಂದ ಇದೇ ವಿಷಯದಲ್ಲಿ ಪಿಎಚ್‌.ಡಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

‘ಪ್ರೆಸಿಡೆಂಟ್ಸ್ ಗೈಡ್ ಅವಾರ್ಡ್’ ಪಡೆದಿರುವ ಸುಧಾ ಅವರು ಹರಿಯಾಣದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

ಕಾರ್ಗಿಲ್‌ ಯುದ್ಧದಲ್ಲಿ ಪತಿ ಹುತಾತ್ಮ

ಸುಧಾ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದು ಒಂದು ದುರಂತದ ಘಟನೆಯ ಸಂದರ್ಭದಲ್ಲಿ. ಸುಧಾ ಅವರ ಪತಿ, ಬಿಎಸ್‌ಎಫ್‌ನ ಡೆಪ್ಯುಟಿ ಕಮಾಂಡಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಖಬೀರ್‌ ಸಿಂಗ್ ಯಾದವ್ ಅವರು, 1999ರ ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ್ದಾಗ ಹುತಾತ್ಮರಾದರು. ಆ ಸಮಯದಲ್ಲಿ ಹರಿಯಾಣ ಬಿಜೆಪಿಯು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿತ್ತು. ಮೋದಿ ಅವರ ಮನವಿಯ ಮೇರೆಗೆ ಬಿಜೆಪಿ ಸೇರಿ ರಾಜಕೀಯ ಜೀವನ ಆರಂಭಿಸಿದ ಸುಧಾ ಅವರು, ನಂತರದ ದಿನಗಳಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದರು.

1999ರಲ್ಲಿ ಮೊದಲ ಬಾರಿಗೆ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ, ಅಹಿರ್ವಾಲ್ ಪ್ರದೇಶದ ಪ್ರಭಾವಿ ನಾಯಕರಾಗಿದ್ದ ರಾವ್ ಇಂದರ್‌ಜಿತ್ ಸಿಂಗ್ ಅವರನ್ನು ಸುಮಾರು 1.39 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿ ಗೆಲುವು ಸಾಧಿಸಿದ್ದರು. 2004ರ ತನಕ ಸಂಸದೆಯಾಗಿ ಸೇವೆ ಸಲ್ಲಿಸಿದ್ದರು. ತದನಂತರ 2019ರಿಂದ 2022ರ ಅವಧಿಯಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

2022ರ ಆಗಸ್ಟ್‌ನಲ್ಲಿ ಬಿಜೆಪಿಯು ಅವರನ್ನು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಾದ ‘ಕೇಂದ್ರೀಯ ಸಂಸದೀಯ ಮಂಡಳಿ’ ಹಾಗೂ ‘ಕೇಂದ್ರೀಯ ಚುನಾವಣಾ ಸಮಿತಿ’ಗೆ ನೇಮಕ ಮಾಡಿತು. ಸುಷ್ಮಾ ಸ್ವರಾಜ್ ಅವರ ಬಳಿಕ ಸಂಸದೀಯ ಮಂಡಳಿಗೆ ಆಯ್ಕೆಯಾದ ಎರಡನೇ ಮಹಿಳೆ ಎಂಬ ಮನ್ನಣೆ ಇವರಿಗೆ ಸಲ್ಲುತ್ತದೆ.

ಸಂಸದೀಯ ಮಂಡಳಿಯ ಪುನರ್‌ ರಚನೆಯಾದಾಗ, ನಿತಿನ್ ಗಡ್ಕರಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಪ್ರಮುಖ ನಾಯಕರನ್ನು ಕೈಬಿಡಲಾಗಿತ್ತು. ಸುಧಾ ಯಾದವ್, ಬಿ.ಎಸ್. ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ. ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್‌ಪುರ ಮತ್ತು ಸತ್ಯನಾರಾಯಣ ಜಟಿಯಾ ಅವರನ್ನು ಹೊಸದಾಗಿ ಸೇರಿಸಿಕೊಳ್ಳಲಾಗಿತ್ತು. ಈ ರಾಜಕೀಯ ಬದಲಾವಣೆಯು ಎಲ್ಲರ ಗಮನ ಸೆಳೆದಿತ್ತು.

ಹಂಚಿಕೊಳ್ಳಿ: