ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು – ತುಂಬಿದ ಸಭೆಯಲ್ಲಿ ಶಾಸಕರ ಮುಂದೆಯೇ ಕಣ್ಣೀರಿಟ್ಟ ಮಹಿಳೆ!

ಚಿಕ್ಕಮಗಳೂರು: ಶೌಚಾಲಯಕ್ಕಾಗಿ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ ನಡೆದಿದೆ. ಶೃಂಗೇರಿ ತಾ...

· ಚಿಕ್ಕಮಗಳೂರು
ಶೌಚಾಲಯಕ್ಕೆ ಜಾತಿ ಕೇಳಿದ ಅಧಿಕಾರಿಗಳು – ತುಂಬಿದ ಸಭೆಯಲ್ಲಿ ಶಾಸಕರ ಎದುರೇ ಕಣ್ಣೀರಿಟ್ಟ ಮಹಿಳೆ!
ಹಂಚಿಕೊಳ್ಳಿ:

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಮ್ಮೆ ಗ್ರಾಮದಲ್ಲಿ, ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಮಹಿಳೆಯೊಬ್ಬರು ಸಾರ್ವಜನಿಕ ಸಭೆಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಘಟನೆ ವರದಿಯಾಗಿದೆ.

ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನಸೇವಾ ಕಾರ್ಯಕ್ರಮದಲ್ಲಿ, ಶಾಸಕರ ಸಮ್ಮುಖದಲ್ಲೇ ಮಹಿಳೆಯೊಬ್ಬರು ಶೌಚಾಲಯಕ್ಕಾಗಿ ಗೋಳಾಡಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಆ ಮಹಿಳೆಯನ್ನು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದವರೇ ಎಂದು ವಿಚಾರಿಸಿದ್ದಾರೆ. ಅದಕ್ಕೆ ಆ ಮಹಿಳೆ ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು ಎಂದು ಉತ್ತರಿಸಿದ್ದಾರೆ. ಆಗ ಅಧಿಕಾರಿಗಳು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ್ದರೆ ಏನಾದರೂ ಮಾಡಲು ಸಾಧ್ಯವಿತ್ತು, ಆದರೆ ನೀವು ಜನರಲ್ ಕೆಟಗರಿಗೆ ಬರುತ್ತೀರಿ ಎಂದು ಹೇಳಿದ್ದಾರೆ.

ಅಧಿಕಾರಿಗಳ ಈ ವರ್ತನೆಯಿಂದ ತೀವ್ರ ನೋವು ಅನುಭವಿಸಿದ ಮಹಿಳೆ, ಶೌಚಾಲಯಕ್ಕೂ ಜಾತಿ ಅಡ್ಡಿಯೇ? ಎಂದು ಸಭೆಯಲ್ಲೇ ಪ್ರಶ್ನಿಸಿ ಅಳಲು ತೋಡಿಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದರೂ, ಒಂದು ಶೌಚಾಲಯ ನಿರ್ಮಿಸಲು ಅಧಿಕಾರಿಗಳು ನಿಯಮಗಳನ್ನು ಸ್ವಲ್ಪ ಸಡಿಲಿಸಿದರೆ ತಪ್ಪೇನಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಾಸ್ತವವಾಗಿ, ಆ ಮಹಿಳೆ ಕಳೆದ ಐದಾರು ವರ್ಷಗಳಿಂದ ಶೌಚಾಲಯಕ್ಕಾಗಿ ಅಧಿಕಾರಿಗಳ ಕಚೇರಿಗೆ ಅಲೆದಾಡಿ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ.

ಪ್ರತಿ ಬಾರಿಯೂ ಅಧಿಕಾರಿಗಳು ಒಂದಲ್ಲ ಒಂದು ನೆಪ ಹೇಳಿ ಮಹಿಳೆಯನ್ನು ವಾಪಸ್ ಕಳುಹಿಸುತ್ತಿದ್ದರು. ಆದರೆ, ಶನಿವಾರ ನಡೆದ ಜನ ಸೇವಾ ಕಾರ್ಯಕ್ರಮದಲ್ಲಿ ಮಹಿಳೆಯ ಅಳುವನ್ನು ಗಮನಿಸಿದ ಶಾಸಕ ರಾಜೇಗೌಡ ಅವರು, ಕೂಡಲೇ ಮಹಿಳೆಗೆ ಶೌಚಾಲಯ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅದರಂತೆ, ಭಾನುವಾರ ತಾಲೂಕು ಮಟ್ಟದ ಕೆಲ ಅಧಿಕಾರಿಗಳು ಚಿಮ್ಮೆ ಗ್ರಾಮಕ್ಕೆ ತೆರಳಿ, ಶೌಚಾಲಯ ನಿರ್ಮಾಣಕ್ಕೆ ಎದುರಾಗಿರುವ ತಾಂತ್ರಿಕ ಅಡೆತಡೆಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಹಂಚಿಕೊಳ್ಳಿ: