ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ: ಮಧ್ಯಮ ವರ್ಗದವರ ಜೇಬಿಗೆ ಕತ್ತರಿ, ಅಕ್ಕಿ ದರ ಗಗನಕ್ಕೆ..!

ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರಗಾಲದ ಬಿಸಿ ಇದೀಗ ನೇರವಾಗಿ ಜನರಿಗೆ ತಟ್ಟುತ್ತಿದೆ. ಮುಂಗಾರು ಮಳೆಯ ತೀವ್ರ ಕೊರತೆ ಮತ್ತು ಜಲಾಶಯಗಳು ಬತ್ತಿ ಹೋಗಿರುವುದರಿಂದ ರಾಜ್ಯದಲ್ಲಿ ಅಕ್ಕಿ ಉತ್ಪಾದನೆ ಕುಸಿದಿದ್ದ...

· ಬೆಂಗಳೂರು ನಗರ
ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!
ಹಂಚಿಕೊಳ್ಳಿ:

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆಯುತ್ತಿರುವ ಬರಗಾಲದ ಪರಿಣಾಮ ನೇರವಾಗಿ ಜನಸಾಮಾನ್ಯರಿಗೆ ತಟ್ಟತೊಡಗಿದೆ. ಮುಂಗಾರು ಮಳೆಯ ಕೊರತೆ ಹಾಗೂ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ರಾಜ್ಯದಲ್ಲಿ ಭತ್ತದ ಉತ್ಪಾದನೆ ಇಳಿಕೆಯಾಗಿದ್ದು, ಕಳೆದ ಮೂರು ತಿಂಗಳಲ್ಲಿ ಪ್ರಮುಖ ಅಕ್ಕಿ ತಳಿಗಳ ದರ ಪ್ರತಿ ಕೆಜಿಗೆ ರೂ.25 ರಿಂದ ರೂ.30 ರಷ್ಟು ಗಣನೀಯವಾಗಿ ಹೆಚ್ಚಳವಾಗಿದೆ.

ದೇಶದ ಪ್ರಮುಖ ಭತ್ತ ಬೆಳೆಯುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಈ ಬಾರಿ ಇಳುವರಿ ಕಡಿಮೆಯಾಗುವ ಅಂದಾಜಿದೆ. ಜೂನ್ ತಿಂಗಳಲ್ಲಿ ಭತ್ತದ ಬಿತ್ತನೆ ಕಾರ್ಯವು ಗಮನಾರ್ಹವಾಗಿ ತಗ್ಗಿದ್ದು, ನವೆಂಬರ್‌ನಲ್ಲಿ ಕೊಯ್ಲು ಆರಂಭವಾಗಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅಕ್ಕಿಯ ಲಭ್ಯತೆ ಮತ್ತಷ್ಟು ಕಠಿಣವಾಗಬಹುದು ಎಂದು ವ್ಯಾಪಾರಿಗಳು ಹಾಗೂ ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತುಂಗಭದ್ರಾ ಮತ್ತು ಕಾವೇರಿ ನದಿ ಕಣಿವೆ ಪ್ರದೇಶಗಳಲ್ಲಿ ಭತ್ತವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಮೈಸೂರು, ಮಂಡ್ಯ ಹಾಗೂ ಮಲೆನಾಡಿನ ಕೆಲವು ವಲಯಗಳಲ್ಲಿ ಭತ್ತದ ಕೃಷಿ ವ್ಯಾಪಕವಾಗಿದೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಸುಮಾರು 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಎರಡೂ ಜಲಾನಯನ ಪ್ರದೇಶಗಳಲ್ಲಿ ಭೀಕರ ಬರ ಉಂಟಾಗಿರುವುದರಿಂದ ಭತ್ತದ ಬಿತ್ತನೆ ಪ್ರದೇಶವು 4 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕುಸಿದಿದೆ.

ಸಗಟು ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ಕೆಜಿಗೆ ರೂ.50ರಿಂದ ರೂ.75-80ಕ್ಕೆ ಏರಿದೆ. ಇದೇ ರೀತಿಯಲ್ಲಿ ಕೆಜಿಗೆ ಅಂದಾಜು ರೂ.75ರಷ್ಟಿದ್ದ ಕೋಲಂ ಅಕ್ಕಿಯ ಬೆಲೆ ಈಗ ರೂ.100ರ ಅಂಚಿಗೆ ಬಂದಿದೆ.

ಕೃಷಿ ತಂತ್ರಜ್ಞಾನಿಗಳ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಮಾಜಿ ಕೃಷಿ ಸಲಹೆಗಾರ ಎ.ಬಿ. ಪಾಟೀಲ್ ಮಾತನಾಡಿ, ಭತ್ತವು ಅತಿ ಹೆಚ್ಚು ನೀರು ಬಯಸುವ ಬೆಳೆಗಳ ಪೈಕಿ ಒಂದಾಗಿದೆ. ಒಂದು ಕೆಜಿ ಭತ್ತ ಬೆಳೆಯಲು 3,500ರಿಂದ 4,000 ಲೀಟರ್‌ವರೆಗೆ ನೀರು ಅಗತ್ಯವಿರುತ್ತದೆ. ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಕಾಲುವೆಗಳ ಕೊನೆಯ ಭಾಗದಲ್ಲಿರುವ ರೈತರಿಗೆ ನೀರು ದೊರೆಯದ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಇಂತಹ ಪರಿಸ್ಥಿತಿಯಲ್ಲಿ ರೈತರು ಭತ್ತದ ಬದಲು ಬೇಳೆಕಾಳು, ಎಣ್ಣೆಕಾಳು ಅಥವಾ ರಾಗಿ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.

ಕೃಷಿ ಹವಾಮಾನ ತಜ್ಞ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಎಂ.ಬಿ. ರಾಜೇಗೌಡ ಅವರು ಮಾತನಾಡಿ, ಕರ್ನಾಟಕದಲ್ಲಿ ಸಾಮಾನ್ಯವಾಗಿ ಜೂನ್-ಜುಲೈನಲ್ಲಿ ಭತ್ತದ ಬಿತ್ತನೆ ನಡೆಯುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ, ಕೆಲವೊಮ್ಮೆ ಡಿಸೆಂಬರ್‌ವರೆಗೂ ಕೊಯ್ಲು ನಡೆಯುತ್ತದೆ. ಆದರೆ ಈ ಬಾರಿ ಬಿತ್ತನೆ ಪ್ರಮಾಣ ತೀವ್ರವಾಗಿ ಕುಸಿದಿದೆ ಎಂದು ವಿವರಿಸಿದರು.

ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಕಾರಣ ಅಣೆಕಟ್ಟುಗಳು ಬರಿದಾಗುತ್ತಿವೆ. ಕೃಷ್ಣರಾಜ ಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸರ್ಕಾರ ಆದ್ಯತೆ ನೀಡುತ್ತಿರುವುದರಿಂದ ನೀರಾವರಿ ಕಾಲುವೆಗಳಿಗೆ ನೀರು ಬಿಡುವ ಸಾಧ್ಯತೆ ಇಲ್ಲ. ಹೀಗಾಗಿ ರೈತರು ಭತ್ತದ ಬಿತ್ತನೆ ಮಾಡಿಲ್ಲ ಎಂದು ಅವರು ಹೇಳಿದರು.

ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ರೈತರು ಸಾಮಾನ್ಯ ವರ್ಷಗಳಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಈ ಬಾರಿ ಪರಿಸ್ಥಿತಿ ಅತ್ಯಂತ ಹದಗೆಟ್ಟಿರುವುದರಿಂದ ಒಂದೇ ಒಂದು ಬೆಳೆಯನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಈ ಭಾಗದಲ್ಲಿ ಏಪ್ರಿಲ್-ಮೇ ಹಾಗೂ ಅಕ್ಟೋಬರ್-ನವೆಂಬರ್‌ನಲ್ಲಿ ಭತ್ತದ ಕೊಯ್ಲು ನಡೆಯುತ್ತದೆ. ಈ ಎರಡು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ನೈಋತ್ಯ ಮುಂಗಾರು ಉತ್ತಮವಾಗಿದ್ದರೆ ಈಶಾನ್ಯ ಮುಂಗಾರು ಕೈಕೊಡುತ್ತದೆ, ಇಲ್ಲವೇ ಇದಕ್ಕೆ ವಿರುದ್ಧವಾಗಿರುತ್ತದೆ. ಹೀಗಾಗಿ ಕನಿಷ್ಠ ಒಂದು ಹಂಗಾಮಿನಲ್ಲಾದರೂ ರೈತರಿಗೆ ಉತ್ತಮ ಬೆಳೆ ಪಡೆಯುವ ಅವಕಾಶ ಸಿಗುತ್ತಿತ್ತು. ಆದರೆ, ಈ ಬಾರಿ ಎಲ್‌ನಿನೊ ಪರಿಣಾಮದಿಂದ ಬಿತ್ತನೆ, ಕೃಷಿ ಚಟುವಟಿಕೆ ಹಾಗೂ ಉತ್ಪಾದನೆ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ರೈತರು ಹೇಳಿದ್ದಾರೆ.

ಅಕ್ಕಿ ಗಿರಣಿದಾರರು ಕೂಡ ಭತ್ತದ ಖರೀದಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಕ್ವಿಂಟಲ್‌ಗೆ ರೂ.3,000 ಇದ್ದ ಭತ್ತದ ಬೆಲೆ ಈಗ ರೂ.4,400ಕ್ಕೆ ಏರಿಕೆಯಾಗಿದೆ. ಈಗಿನ ನಮ್ಮ ಖರೀದಿ ಬೆಲೆ ಈ ಹಿಂದೆ ನಾವು ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಬೆಲೆಗೆ ಸಮನಾಗಿದೆ ಎಂದು ಗಿರಣಿ ಮಾಲೀಕರೊಬ್ಬರು ಹೇಳಿದ್ದಾರೆ.

ಈ ಹಿಂದೆ ಅವರು ವ್ಯಾಪಾರಿಗಳಿಗೆ ಕ್ವಿಂಟಲ್‌ಗೆ ರೂ.4,600ರಿಂದ ರೂ.5,300ಕ್ಕೆ ಅಕ್ಕಿ ಮಾರಾಟ ಮಾಡುತ್ತಿದ್ದರು. ಇದೀಗ ಅದೇ ಅಕ್ಕಿಯನ್ನು ರೂ.7,500ಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಲಹೆಗಾರ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಅಕ್ಕಿಯ ಬೆಲೆ ಸರಾಸರಿ ಕೆಜಿಗೆ ರೂ.25ರಿಂದ ರೂ.30ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಒಂದು ತಿಂಗಳಿಂದ ಆರು ವಾರಗಳ ಅವಧಿಯಲ್ಲಿ ಬೆಲೆ ಮತ್ತಷ್ಟು ರೂ.10ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಹಂಚಿಕೊಳ್ಳಿ: