2 ಸಾವಿರ ರೂ. ಕಳ್ಳತನಕ್ಕೆ 2 ಲಕ್ಷದ ಕಾರಿನಲ್ಲಿ ಬಂದ ಅಂತರ ಜಿಲ್ಲಾ ಕಳ್ಳರು ಅರೆಸ್ಟ್!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಳದಕಟ್ಟಾದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ ಮೂವರು...

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಳದಕಟ್ಟಾದ ನಿವಾಸವೊಂದರಲ್ಲಿ ನಡೆದ ಕಳ್ಳತನದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಚುರುಕಿನ ಕಾರ್ಯಾಚರಣೆಯ ಮೂಲಕ ಭೇದಿಸಿದ್ದಾರೆ. ಅಂತರ ಜಿಲ್ಲಾ ಕಳ್ಳರ ತಂಡದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಏನು?
ಹಾಳದಕಟ್ಟಾ ಗ್ರಾಮದ ರಾಜು ತಂದೆ ಉಮೇಶ ಜಾಧವ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ರಾಜು ಜಾಧವ್ ಅವರ ಸಿದ್ದಾಪುರದ ಹಾಳದಕಟ್ಟಾದಲ್ಲಿರುವ ಸ್ವಂತ ಮನೆಯಲ್ಲಿ ಅವರ ವಯಸ್ಸಾದ ತಾಯಿ ಮತ್ತು ಮಾನಸಿಕ ಅಸ್ವಸ್ಥ ಸಹೋದರ ವಾಸವಾಗಿದ್ದರು. ಅ.3ರಂದು ತಾಯಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಅವರು, ಸಂಜೆ 5 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿ ತಾಯಿ ಹಾಗೂ ಸಹೋದರನೊಂದಿಗೆ ತೊಗರ್ಸಿಗೆ ತೆರಳಿದ್ದರು.
ಅ.5ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಯ ನೆರೆಹೊರೆಯವರು ಕರೆ ಮಾಡಿ ಮನೆಯ ಬಾಗಿಲು ತೆಗೆದಿರುವ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಕಳ್ಳರು ಮನೆಯ ಮುಂಬಾಗಿಲಿನ ಬೀಗವನ್ನು ಆಯುಧ ಬಳಸಿ ಮೀಟಿ ತೆರೆದು ಒಳ ನುಗ್ಗಿದ್ದು ಬೆಳಕಿಗೆ ಬಂದಿದೆ. ಬಳಿಕ ಮನೆಯ ಕೋಣೆಯಲ್ಲಿದ್ದ ಗೋದ್ರೇಜ್‌ನ ಲಾಕ್ ಮುರಿದು, ಒಳಗಿದ್ದ 2,000 ರೂ. ನಗದು ಹಣವನ್ನು ಕಳವು ಮಾಡಿ ಪರಾರಿಯಾಗಿರುವುದು ಖಚಿತವಾಯಿತು.
ಈ ಸಂಬಂಧ ರಾಜು ಜಾಧವ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಪಿಐ ಜೆ.ಬಿ. ಸೀತಾರಾಮ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ನಾಗಪ್ಪ, ಪಿಎಸ್‌ಐ (ತನಿಖೆ) ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿಶೇಷ ತಂಡವು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಗೊವಿಂದಪ್ಪ (29), ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಚಿಂಚಲಿಯ ಕೃಷ್ಣ (20) ಹಾಗೂ ಹುಬ್ಬಳ್ಳಿಯ ತಾರೆಹಾಳ ರಸ್ತೆಯ ಗಣೇಶ್ (22) ಎಂದು ಗುರುತಿಸಲಾಗಿದೆ.
ಆರೋಪಿಗಳ ವಶದಿಂದ 330 ರೂ. ನಗದು ಹಾಗೂ ಸುಮಾರು 2 ಲಕ್ಷ ಮೌಲ್ಯದ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ನಾಲ್ಕನೇ ಆರೋಪಿ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಚಿಂಚಲಿಯ ಗಂಗಪ್ಪ ಹಾಗೂ ಐದನೇ ಆರೋಪಿ ಚಿಂಚಲಿಯ ವಡ್ಡರಗಲ್ಲಿಯ ಮಂಜು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳು ಹಳೇ ಅಪರಾಧಿಗಳಾಗಿದ್ದು, ಗದಗ, ಧಾರವಾಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದರೋಡೆ, ಡಕಾಯಿತಿ, ಮನೆ ಕಳ್ಳತನ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನದಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದಾಪುರದಲ್ಲಿ ಸರಣಿ ಕಳ್ಳತನ ನಡೆಸಲು ಬಂದಿದ್ದ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಅನ್ನು ತಕ್ಷಣವೇ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ರಮೇಶ ಸಿ. ಕೂಡಲ, ಮಂಜಪ್ಪ ಟಿ., ಚೇತನ ಹಲಗೇರಿ, ರಾಜು ಎಂ., ವಿನಾಯಕ ಮಡಿವಾಳ, ನಾಗರಾಜ ತಿಮ್ಮಾಪುರ, ಮಣಿಕಂಠ ಬಿ.ಎನ್., ಅನೀಲ ನಾಯ್ಕ, ಸಂತೋಷ ತಳವಾರ, ರವಿ ಕ್ಯಾಲಕೊಂಡ, ಹೆಚ್.ಜಿ. ತಿಮ್ಮಪ್ಪ ಗೌಡ ಹಾಗೂ ಪ್ರಶಾಂತ ಅವರು ಪಾಲ್ಗೊಂಡಿದ್ದರು.




