ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ಮುಂದಿನ 7-8 ತಿಂಗಳು ಕಠಿಣ ದಿನಗಳೇ? – ನೀರನ್ನು ಮಿತವಾಗಿ ಬಳಸಲು ಕೃಷಿ ಸಚಿವರ ಮನವಿ!

– ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಮಡಿಕೇರಿ: ಮುಂದಿನ 7-8 ತಿಂಗಳು ಕಠಿಣ ದಿನಗಳನ್ನು ಎದುರಿಸಬೇಕಾಗಬಹುದು, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಎಂದು ಕೃ...

· ಕೊಡಗು
ಮುಂದಿನ 7-8 ತಿಂಗಳು ಕಠಿಣ ದಿನಗಳನ್ನ ಎದುರಿಸಬೇಕಾಗಬಹುದು – ನೀರಿನ ಮಿತ ಬಳಕೆಗೆ ಕೃಷಿ ಸಚಿವರ ಕರೆ
ಹಂಚಿಕೊಳ್ಳಿ:

– ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ

ಮಡಿಕೇರಿ: ಮುಂದಿನ 7-8 ತಿಂಗಳು ಕಠಿಣ ದಿನಗಳನ್ನು ಎದುರಿಸಬೇಕಾಗಬಹುದು, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ರಾಜ್ಯದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹವಾಮಾನ ಬದಲಾವಣೆ, ತಾಪಮಾನ ಏರಿಕೆ ಹಾಗೂ ಎಲ್-ನಿನೋ ಪರಿಣಾಮದಿಂದ ಮಳೆಯ ಸ್ವರೂಪದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದೆ. ನೀರಿನ ಕೊರತೆ ಮಾತ್ರವಲ್ಲದೇ ಆಹಾರ ಉತ್ಪಾದನೆ ಹಾಗೂ ತರಕಾರಿ ಬೆಲೆಯ ಮೇಲೂ ಇದರ ಪರಿಣಾಮ ಬೀರಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಹವಾಮಾನ ಬದಲಾವಣೆಯಿಂದ ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಎಲ್-ನಿನೋ ಪರಿಣಾಮದಿಂದ ಮೋಡಗಳ ಚಲನೆಯಲ್ಲೂ ಬದಲಾವಣೆ ಉಂಟಾಗುತ್ತಿದೆ. ಹೀಗಾಗಿ ವಾಡಿಕೆ ಮಳೆಯ ಪ್ರಮಾಣದಲ್ಲೂ ಭಾರೀ ವ್ಯತ್ಯಾಸವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಅಗತ್ಯವಾಗಿ ಬೇಕಾದ ಪ್ರದೇಶಗಳಿಗೆ ಮಳೆ ಬೀಳದೇ ಇರಬಹುದು, ಬೇಡವಾದ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಬಹುದು. ಇದರ ನೇರ ಪರಿಣಾಮ ಅಂತರ್ಜಲದ ಮೇಲೂ ಬೀರುವ ಆತಂಕವಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ನೀರಿನ ಬಳಕೆಯಲ್ಲಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕು ಸಚಿವರು ಕರೆ ನೀಡಿದ್ದಾರೆ.

ನೀರು ಉಳಿಸಿ… ಭವಿಷ್ಯ ಉಳಿಸಿ!
ದಿನನಿತ್ಯದ ಬದುಕಿನಲ್ಲಿ ನೀರಿನ ಬಳಕೆ ಕಡಿಮೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಮುಂದಿನ 8 ತಿಂಗಳು ನೀರಿನ ಬಳಕೆಯಲ್ಲಿ ಮಿತವ್ಯಯ ಪಾಲಿಸಬೇಕಿದೆ. ಇದರ ಪರಿಣಾಮ ಕೃಷಿ ಕ್ಷೇತ್ರಕ್ಕೂ ತಟ್ಟುವ ಸಾಧ್ಯತೆಯಿದೆ. ನೀರಿನ ಕೊರತೆಯಿಂದ ಸೊಪ್ಪು, ತರಕಾರಿ ಸೇರಿದಂತೆ ಹಸಿರು ತರಕಾರಿಗಳ ಉತ್ಪಾದನೆ ಕುಂಠಿತವಾದರೆ, ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಅಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ಆಹಾರ ಪದಾರ್ಥಗಳನ್ನ ಕೃತಕವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು. ಹೀಗಾಗಿ ಸರ್ಕಾರದ ಜೊತೆ ಸಾರ್ವಜನಿಕರೂ ಕೈಜೋಡಿಸಬೇಕು. ಜೊತೆಗೆ ತಾಪಮಾನ ಏರಿಕೆಯಾಗುವ ದಿನಗಳಲ್ಲಿ ಜನರ ಆರೋಗ್ಯ ರಕ್ಷಣೆಗೆ ವಿಶೇಷ ಕ್ರಮಗಳ ಅಗತ್ಯವಿದೆ. ಬೇಸಿಗೆ ಸಂಕಷ್ಟದ ಕುರಿತು ಕೇಂದ್ರ ಮಟ್ಟದಲ್ಲೂ ಚರ್ಚೆ ನಡೆದಿದೆ. ದೇಶ ಹಾಗೂ ವಿಶ್ವದ ಹವಾಮಾನ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಎದುರಾಗಬಹುದಾದ ಪರಿಸ್ಥಿತಿ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ಮಾಹಿತಿ ನೀಡಲು ಸರ್ಕಾರ ಸಿದ್ಧವಿದೆ. ಮುಖ್ಯಮಂತ್ರಿಗಳ ಮೂಲಕ ಜನರಿಗೆ ಅಗತ್ಯ ಮಾಹಿತಿ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಹಂಚಿಕೊಳ್ಳಿ: